ನಾಗರಿಕರಿಗೆ ಅಡ್ಡಿಯಾಗಿದ್ದ ಗೇಟ್​ ತೆರವು

7 BANGARPETE 1
Published on

ಬಂಗಾರಪೇಟೆ: ಸ್ಥಳಿಯವಾಗಿ ಡಾರ್ಲಸ್​ ಕಾಲನಿ ಎಂದೇ ಗುರುತಿಸಿಕೊಂಡಿರುವ ಅಮರಾವತಿ ಬಡಾವಣೆಯಲ್ಲಿ ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡಲಾಗಿ ಅಳವಡಿಸಿದ್ದ ಕಬ್ಬಿಣದ ಗೇಟ್​ಅನ್ನು ತೆರುವುಗೊಳಿಸುವ ಮೂಲಕ ಪುರಸಭೆ ಕಾರ್ಯ ವೈಖರಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಒಳಗಾಗಿದೆ.

ಅಮರಾವತಿ ಬಡಾವಣೆ ನಾಲ್ಕನೇ ಮುಖ್ಯ ರಸ್ತೆ ಒಂದನೇ ಅಡ್ಡ ರಸ್ತೆಯಲ್ಲಿ ಸುಮಾರು 10 ಮನೆಗಳು ವಾಸವಿದ್ದು, ಈ ರಸ್ತೆಯಲ್ಲಿ ಬೇರೆಯವರು ಓಡಾಡದಂತೆ ರಸ್ತೆಗೆ ಅಡ್ಡಲಾಗಿ ಗೇಟ್​ ಅಳವಡಿಸಿ ಸಾರ್ವಜನಿಕರಿಗೆ ನಿರ್ಬಂಧ ಏರಲಾಗಿತ್ತು. ಈ ವಿವಾದ ಕಳೆದ 10 ವರ್ಷಗಳಿಂದ ನಡೆಯತ್ತಿದ್ದು, ರಸ್ತೆ ತೆರುವಿನ ವಿಚಾರದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪುರಸಭೆ ಮಧ್ಯೆ ವಿವಾದ ನಡೆಯುತ್ತಲೇ ಇತ್ತು.

ಆದರೆ ರಸ್ತೆಗೆ ಅಡ್ಡಲಾಗಿ ಅಳವಡಿಸಿದ್ದ ಕಬ್ಬಿಣದ ಗೇಟನ್ನು ತೆರುವುಗೊಳಿಸಲು ಪುರಸಭೆಯ ಹಿಂದನ ಅಧಿಕಾರಿ ಅಥವಾ ಅಧ್ಯಕ್ಷರ ಕೈಯಲ್ಲಿ ಅಸಾಧ್ಯವಾಗಿತ್ತು. ಯಾರೂ ರಸ್ತೆಯಲ್ಲಿ ಗೇಟ್​ ತೆಗೆಯುವದಕ್ಕೂ ಹೋಗಿರಲಿಲ್ಲ. ರಾತ್ರಿ ಗೇಟ್​ಗೆ ಬೀಗ ಹಾಕಿ ರಸ್ತೆ ಬಂದ್​ ಮಾಡುವುರಿಂದ ಸಾರ್ವಜನಿಕರು ಓಡಾಡದಂತೆ ನಿರ್ಬಂಧಿಸಲಾಗಿತ್ತು ಎಂಬ ಆರೋಪಗಳು ಕೇಳಿ ಬರುತ್ತಿದ್ದವು.

ಹಣವಂತರೇ ವಾಸ ಇರುವ ರಸ್ತೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಗೇಟ್​ ಅಳವಡಿಸಿ ಅಡ್ಡಿ ಉಂಟು ಮಾಡಿರುವುದು ಸರಿಯೇ ಎಂಬ ಪ್ರಶ್ನೆಗಳು ಸಹಜವಾಗಿ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದ್ದವು. ಈ ಭಾಗದಲ್ಲಿ ಆಯ್ಕೆಗೊಂಡಿದ್ದ ಪುರಸಭೆ ಸದಸ್ಯರೂ ಸಹ ಕಂಡು ಕಾಣದಂತೆ, ತಿಳಿದು ತಿಳಿಯದಂತೆ ಜಾಣ ಕುರುಡರಾಗಿದ್ದ ಕಾರಣ ಸದಸ್ಯರ ವಿರುದ್ಧ ಅಸಮಧಾನ ಬುಗಿಲೆದ್ದಿದ್ದರೂ ಸಹ ರಸ್ತೆಗೆ ಅಡ್ಡಲಾಗಿ ಅಳವಡಿಸಿದ್ದ ಗೇಟ್​ನ್ನು ತೆರುವುಗೊಳಿಸುವ ಸಾಹಸಕ್ಕೆ ಕೈಹಾಕಿಲ್ಲ ಎನ್ನಲಾಗಿದೆ.

ಈ ಹಿಂದಿನಿಂದಲೂ ಹಲವು ಮಂದಿ ಪುರಸಭೆ ಅಧಿಕಾರಿಗಳು ಮತ್ತು ಅಧ್ಯಕ್ಷರ ಗಮನಕ್ಕೆ ಸಾರ್ವಜನಿಕರು ತಂದರೂ ರಸ್ತೆಗೆ ಅಳವಡಿಸಿರುವ ಗೇಟ್​ನ್ನು ತೆರುವುಗೊಳಿಸಿ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಡವಲ್ಲಿ ವಿಫಲವಾಯಿತು. ಎಷ್ಟೇ ದೂರುಗಳು ಬಂದರೂ ಸಹ ಅಕ್ರಮವಾಗಿ ರಸ್ತೆಗೆ ಅಳವಡಿಸಿದ್ದ ಗೇಟ್​ಗೆ ಮಾತ್ರ ಮೋಕ್ಷ ಸಿಕ್ಕಿರಲಿಲ್ಲ.

ಸಾರ್ವಜನಿರ ಅಹವಾಲಿಗೆ ಸ್ಪಂಧಿಸಿದ ಪುರಸಭೆ ಅಧ್ಯಕ್ಷ ಮತ್ತು ಅಧಿಕಾರಿಗಳು ಸ್ಥಳ ಪರಿಶೀಲಿಸಿದಾಗ ರಸ್ತೆಗೆ ಗೇಟ್​ ಅಳವಿಡಿಸಿರುವುದು ಹಾಗೂ ಸಾರ್ವಜನಿಕರು ಓಡಾಟಕ್ಕೆ ನಿರ್ಬಂಧ ಇರುವುದು ಮೇಲ್ನೋಟಕ್ಕೆ ಕಂಡುಬಂದ ಕೂಡಲೆ ಮುಲಾಜಿಲ್ಲದೆ ಗೇಟ್​ ತೆರುವುಗೊಳಿಸಲು ಅಗತ್ಯ ಕ್ರಮ ತೆಗೆದುಕೊಂಡರು.

ಸೋಮವಾರ ಬೆಳಿಗ್ಗೆ 8 ಗಂಟೆಗೆ ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಿತ ಹರೀಶ್​, ಪರಿಸರ ಅಧಿಕಾರಿ ಮಹೇಶ್​ ಮತ್ತು ಸಿಬ್ಬಂದಿ ಜೆಸಿಬಿ ಮುಖಾಂತರ ಗೇಟ್​ ತೆರವಿಗೆ ಪ್ರಯತ್ನಿಸಿದಾಗ ನಾವೇ ಗೇಟನ್ನು ತೆಗೆಯುವುದಾಗಿ ಅಲ್ಲಿನ ನಿವಾಸಿಗಳು ಹೇಳಿದ್ದರಿಂದ ಜೆಸಿಬಿ ವಾಪಸ್​ ಕಳುಹಿಸಿಕೊಟ್ಟಿದ್ದಾರೆ.

ಆದರೆ ಮಧ್ಯಾಹ್ನ 12 ಗಂಟೆ ಆದರೂ ರಸ್ತೆ ಒತ್ತುವರಿ ಗೇಟ್​ ತೆರುವುಗೊಳಿಸದೇ ಇರುವ ಬಗ್ಗೆ ವಿಷಯ ತಿಳಿದು ಕೊನೆಗೆ ಅಧ್ಯಕ್ಷ ಗೋವಿಂದ, ಮುಖ್ಯಾಧಿಕಾರಿ ಸತ್ಯನಾರಾಯಣ, ಇಂಜಿನೀಯರ್​ ರವಿಕುಮಾರ್​ ಆಗಮಿಸಿ ಗೇಟ್​ ತೆರವುಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಪುರಸಭೆಯ ಎಲೆಕ್ಟ್ರಿಕ್​ ಗುತ್ತಿಗೆದಾರರನ್ನು ಕರೆಯಿಸಿ ವೆಲ್ಡಿಂಗ್​ನಿಂದ ಗೇಟ್​ನ ಎರಡೂ ಕಡೆಯ ಲಾಕ್​ಗಳನ್ನು ಕಟ್​ ಮಾಡಿ ತೆರುವುಗೊಳಿಸಿ ಸಾರ್ವಜನಿಕರ ರಸ್ತೆಗೆ ಮೋಕ್ಷ ಕಲ್ಪಿಸುವಲ್ಲಿ ಸಫಲರಾದರು.

ಕಳೆದ ಹತ್ತು ವರ್ಷಗಳಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರಿ ರಸ್ತೆಯನ್ನು ಬೇರೆಯವರು ಓಡಾಡದಂತೆ ಅಳವಡಿಸಿದ್ದ ಗೇಟ್​ ತೆರುವುಗೊಳಿಸದಂತೆ ಪ್ರಭಾವಿಗಳಿಂದ ಎಷ್ಟೇ ಒತ್ತಡಗಳು ಬಂದರೂ ಮುಲಾಜಿಲ್ಲದೆ ಗೇಟ್​ ತೆರುವುಗೊಳಿಸಿ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಕ್ರಮ ತೆಗೆದುಕೊಂಡ ಪುರಸಭೆ ಅಧ್ಯಕ್ಷ ಗೋವಿಂದ, ಮುಖ್ಯಾಧಿಜಾರಿ ಸತ್ಯನಾರಾಯಣ ಮತ್ತು ಸಿಬ್ಬಂದಿ ಅವರ ಪ್ರಾಮಾಣಿಕ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಒಳಗಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net