

ಮಂಡ್ಯ: ಕಳೆದ ವರ್ಷ ನಡೆದ ಬೂದನೂರು ಉತ್ಸವ ಇತಿಹಾಸ ಪುಟ ಸೇರಿದೆ. ಇದಲ್ಲದೆ ಗ್ರಾಮದ ಸಮೀಪವೇ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಯಾಗಿ ನಿಮ್ಮೆಲ್ಲರ ಸಹಕಾರದಿಂದ ಅದ್ದೂರಿಯಾಗಿ ನಡೆದಿದೆ. ಅದೇ ರೀತಿ ಮುಂದಿನ ವರ್ಷ ಬೂದನೂರು ಉತ್ಸವವನ್ನು ಇನ್ನೂ ಅದ್ಧೂರಿಯಾಗಿ ಆಚರಣೆ ಮಾಡೋಣ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಬೂದನೂರು ಉತ್ಸವ ನೆನಪಿನಾರ್ಥ ನೂತನವಾಗಿ ನಿರ್ಮಿಸಿರುವ ಗ್ರಾಮದ ಹೆಬ್ಬಾಗಿಲನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಒಂದೊಳ್ಳೆ ಕಾರ್ಯ ಮಾಡಲು ಮುಂದಾದಾಗ ನೂರಾರು ಟೀಕೆ ಬರುತ್ತವೆ. ಆದಾಗ್ಯೂ ಉತ್ಸವವನ್ನು ಯಶಸ್ವಿಯಾಗಿ ಮಾಡಿದ್ದೇವೆ. ರಾಜ್ಯಸರ್ಕಾರ 15 ಲಕ್ಷ ರೂ ಬಿಡುಗಡೆ ಮಾಡಿದೆ. ಆದರೆ, ಇನ್ನೂ ಪಂಚಾಯಿತಿಗೆ ಹಣ ಬಂದಿಲ್ಲ. ಅಂತೆಯೇ ಸ್ವಂತವಾಗಿ 75 ಲಕ್ಷ ರೂ.ಗಳನ್ನು ಉತ್ಸವಕ್ಕೆ ವಿನಿಯೋಗೆ ಮಾಡಿದ್ದೇನೆ ಎಂದರು.
ಮುಂದಿನ ವರ್ಷದ ಉತ್ಸವಕ್ಕೆ ಸರ್ಕಾರದಿಂದ 1 ಕೋಟಿ ರೂ ಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗುವುದು. ಅನಂತಪದ್ಮನಾಭಸ್ವಾಮಿ ಹಾಗೂ ಕಾಶಿವಿಶ್ವನಾಥ ದೇವಾಲಯಗಳಿಂದಾಗಿ ಬೂದನೂರು ಪ್ರೇಕ್ಷಣೀಯ ಸ್ಥಳವಾಗಿದ್ದು, ದೇವಾಲಯಗಳನ್ನು ಅಭಿವೃದ್ಧಿ ಮಾಡಲಾಗುವುದು. ಕೆರೆ ಅಭಿವೃದ್ಧಿಗೆ 5 ಕೋಟಿ ರೂ ಟೆಂಡರ್ ಮುಗಿದಿದೆ. ಯುಗಾದಿ ನಂತರ ಭೂಮಿ ಪೂಜೆ ಮಾಡಿ ಅಭಿವೃದ್ಧಿ ಕೆಲಸ ಪ್ರಾರಂಭವಾಗಲಿವೆ. 10-15 ದಿನದಲ್ಲಿ ಕೆರೆಗೆ ಹೊಸರೂಪ ಬರುತ್ತದೆ ಎಂದು ತಿಳಿಸಿದರು.
ಗ್ರಾ.ಪಂ ಸದಸ್ಯ ಕೆಂಪೇಗೌಡ ಮಾತನಾಡಿ, ಬೂದನೂರು ಉತ್ಸವ ನೆನಪಿನಾರ್ಥ ಹೆಬ್ಬಾಗಿಲು ನಿರ್ಮಾಣಗೊಂಡಿದೆ. ದೇವರ ಹೆಸರಿನೊಂದಿಗೆ ಗ್ರಾಮದ ನಾಮಫಲಕದಲ್ಲಿ ಶಾಸಕ ರವಿಕುಮಾರ್‌ಗೌಡ ಹೆಬ್ಬಾಗಿಲು ಎಂದು ಹೆಸರು ಇಡಲಾಗಿದೆ. ಚುನಾವಣೆ ವೇಳೆ ಮಾತುಕೊಟ್ಟಂತೆ ಬೂದನೂರು ಉತ್ಸವ ಆರಂಭವಾಗಿದೆ. ಬೂದನೂರು ಉತ್ಸವಕ್ಕೆ ಕೋಟ್ಯಂತರ ರೂ ಅನುದಾನ ಬಂದು ಎಲ್ಲರೂ ಹಂಚಿಕೊಂಡರು ಎಂಬ ಆರೋಪ ಹಾಗೂ ಟೀಕೆ ಕೇಳಿಬಂದವು. ಇದಕ್ಕೆಲ್ಲ ಶಾಸಕರೇ ಸ್ಪಷ್ಟೀಕರಣ ನೀಡಿದ್ದಾರೆ ಎಂದರು.
ಮೈಷುಗರ್ ಮಾಜಿ ಅಧ್ಯಕ್ಷ ಬಿ.ಸಿ.ಶಿವಾನಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾನಸಾ, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ನಾಗೇಶ್, ಶಿಲ್ಪಾ, ಮಮತಾ ಇತರರಿದ್ದರು.