ಗತ ವೈಭವದತ್ತ ಸರ್ಕಾರಿ ಶಾಲಾ-ಕಾಲೇಜು

nsui
ಶಿವಮೊಗ್ಗದಲ್ಲಿ ಎನ್‌ಎಸ್‌ಯುಐ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಆರ್.ಪ್ರಸನ್ನಕುಮಾರ್, ಎಚ್.ಸಿ.ಯೋಗೇಶ್, ಸಿ.ಜಿ.ಮಧುಸೂದನ್, ಕೆ.ಚೇತನ್, ವಿಜಯ್, ಯಮುನಾ ರಂಗೇಗೌಡ ಇತರರಿದ್ದರು.
Published on

ಶಿವಮೊಗ್ಗ: ಒಂದು ಕಾಲದಲ್ಲಿ ಸರ್ಕಾರಿ ಶಾಲೆಗಳೆಂದರೆ ಜನರಲ್ಲಿ ತಿರಸ್ಕಾರ ಭಾವವಿತ್ತು. ಈಗ ಸರ್ಕಾರಿ ಶಾಲೆಗಳ ಬಗ್ಗೆ ಜನರಿಗೆ ಹೆಮ್ಮೆ ಮೂಡಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಮೂರನೇ ಸ್ಥಾನದಲ್ಲಿರುವುದೇ ಇದಕ್ಕೆ ಸಾಕ್ಷಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಎನ್‌ಎಸ್‌ಯುಐ ವತಿಯಿಂದ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆ ಮಕ್ಕಳು ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ರ‌್ಯಾಂಕ್ ಗಳಿಸುತ್ತಿದ್ದಾರೆ. ಸರ್ಕಾರಿ ಶಾಲೆ, ಕಾಲೇಜುಗಳು ಮತ್ತೆ ವಿಜೃಂಭಿಸುತ್ತಿವೆ ಎಂದರು.
ಖಾಸಗಿ ಕಂಪನಿಗಳು, ಸಂಘ ಸಂಸ್ಥೆಗಳಿಂದ ಶಿಕ್ಷಣ ಕ್ಷೇತ್ರಕ್ಕೆ ನೆರವು ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 76 ಸಾವಿರ ಶಾಲೆಗಳಿವೆ. ಅದರಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಸುಮಾರು 40 ಸಾವಿರ. ಸುಮಾರು 56 ಲಕ್ಷ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿಂದೆ ವಾರದಲ್ಲಿ ಒಂದು ದಿನ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿತ್ತು. ಈಗ ವಾರದ ಆರು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ ಇದೇ ಮೊದಲ ಬಾರಿಗೆ ಅಜೀಂ ಪ್ರೇಂ ಜೀ ೌಂಡೇಷನ್ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ಯೋಜನೆಯನ್ನು ಹಾಕಿಕೊಂಡಿದೆ. ಇದರ ಅಂಗವಾಗಿ ಈಗಾಗಲೇ ಸರ್ಕಾರದೊಂದಿಗೆ ಮೂರು ವರ್ಷದ ಅವಧಿಗೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ. ಆ ಫೌಂಡೇಷನ್‌ನಿಂದ ಇದಕ್ಕಾಗಿ 1,500 ಕೋಟಿ ರೂ. ನೀಡಲಾಗುತ್ತಿದೆ ಎಂದರು.
ನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿ, ಎನ್‌ಎಸ್‌ಯುಐ ಅತ್ಯುತ್ತಮ ಕಾರ್ಯಕ್ರಮ ನಡೆಸುತ್ತಿದೆ. ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದೆ. ನೋಟ್‌ಬುಕ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಮಧು ಬಂಗಾರಪ್ಪ ಶಿಕ್ಷಣ ಸಚಿವರಾದ ಮೇಲೆ ಶಿಕ್ಷಣದ ಗುಣಮಟ್ಟ ಹೆಚ್ಚಿದೆ ಎಂದು ಹೇಳಿದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ಕಾಶಿ ವಿಶ್ವನಾಥ್, ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ, ಪ್ರಮುಖರಾದ ಸಿ.ಜಿ.ಮಧುಸೂದನ್, ಕೆ.ಚೇತನ್, ಹರ್ಷಿತ್, ಚರಣ್, ರವಿ ಮುಂತಾದವರಿದ್ದರು.
ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ಇದೇ ಸಂದರ್ಭದಲ್ಲಿ ಎನ್‌ಎಸ್‌ಯು ವತಿಯಿಂದ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಮಧು ಬಂಗಾರಪ್ಪ, ಮುಂದಿನ ವರ್ಷದ ಆರಂಭದಲ್ಲಿ ನಿಮಗೆ ಸಿಹಿ ಸುದ್ದಿ ಸಿಗಲಿದೆ ಎನ್ನುವ ಮೂಲಕ ಸರ್ಕಾರಿ ಇಂಜಿನಿಯರಿಗ್ ಕಾಲೇಜಿನ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net