

ಮಂಡ್ಯ: ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಜನರಲ್ಲಿ ಜಠರ ಮತ್ತು ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಮೈಸೂರು ಮಣಿಪಾಲ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಹೆಪಟಾಲಜಿಸ್ಟ್ ಕನ್ಸಲ್ಟೆಂಟ್ ಡಾ.ಆರ್.ನಿಶ್ಚಯ್ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಕಲಬೆರಕೆಯಿಂದಾಗಿ ಆಹಾರದ ಗುಣಮಟ್ಟ ಕ್ಷೀಣಿಸುತ್ತಿದೆ. ಇದರಿಂದಾಗಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೊಟ್ಟೆನೋವಿನಿಂದ ಹಿಡಿದು ಗ್ಯಾಸ್ಟ್ರೋಎಂಟರೈಟಿಸ್, ಹೈಪಟೈಟಿಸ್ ಮತ್ತು ಲೀವರ್ ಸಿರೋಸಿಸ್‌ನಂತಹ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜೀರ್ಣಾಂಗವ್ಯೆಹ ಸಮಸ್ಯೆಗಳನ್ನು ಜಾಗೃತಿ ಮೂಡಿಸಬೇಕಾದ ಅನಿರ್ವಾಯತೆ ಇದೆ ಎಂದರು.
ಹೊಟ್ಟೆನೋವು, ಹೊಟ್ಟೆ ಉಬ್ಬುವುದು, ಅತಿಸಾರ, ಮಲಬದ್ಧತೆ, ವಾಕರಿಕೆ ಮತ್ತು ವಾಂತಿಯಂತಹ ಕಡಿಮೆ ತರವಾದ ಸಮಸ್ಯೆಯಿಂದ ಪ್ರಾರಂಭವಾಗಿ ಜಠರ ಹುಣ್ಣು ಕಾಯಿಲೆ, ಗ್ಯಾಸ್ಟ್ರೋಸೋಫೇಜಲ್ ರಿಫ್ಲೆಕ್ಸ್ ಕಾಯಿಲೆ, ಉರಿಯೂತದ ಕರುಳಿನ ಕಾಯಿಲೆ, ಅಲ್ಸರೇಟಿವ್ ಕೊಲೈಟಿಸ್ ಮತ್ತು ಕ್ರೋನ್ಸ್ ಕಾಯಿಲೆ ಕಾಣಿಸಿಕೊಳ್ಳುತ್ತವೆ. ಜತೆಗೆ ಯಾವುದೇ ಸೋಂಕು ಇಲ್ಲದೆಯೂ ಕೂಡ ಜಠರ ಮತ್ತು ಕರುಳಿನ ಸಮಸ್ಯೆಗಳ ಎದುರಾಗುತ್ತವೆ. ಈ ಹಿನ್ನೆಲೆಯಲ್ಲಿ ಇಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಚೆನ್ನಾಗಿ ಬೇಯಿಸಿದ ಮತ್ತು ಉತ್ತಮವಾದ ಸಂರಕ್ಷಿಸಲಾದ ಆಹಾರವನ್ನು ಸೇವಿಸುವುದು ಮುಖ್ಯ. ಮಾತ್ರವಲ್ಲದೆ ನಿಯಮಿತ ಹಾಗೂ ಸರಿಯಾದ ಸಮಯದಲ್ಲಿ ಆಹಾರ ಸೇವನೆ, ಊಟವಾದ ತಕ್ಷಣ ಮಲಗದಿರುವುದು ಸೇರಿದಂತೆ ಕೆಲ ಕ್ರಮ ಅನುಸರಿಸಬೇಕು. ಜಠರ, ಕರುಳಿನ ಸಮಸ್ಯೆಗೆ ಸಂಬಂಧಿಸಿದಂತೆ ನಮ್ಮ ಆಸ್ಪತ್ರೆಯಲ್ಲಿ ಸಮಗ್ರ ಚಿಕಿತ್ಸೆ ನೀಡಲಾಗುವುದು. ಅತ್ಯಾಧುನಿಕ ನಿರ್ವಹಣಾ ತಂತ್ರಗಳೊಂದಿಗೆ ಚಿಕಿತ್ಸೆ ನಡೆಯಲಿದೆ ಎಂದು ಮಾಹಿತಿ ನೀಡಿದರು.