ಮಂಗ್ಳೂರು ಬಂದರಿನಲ್ಲಿ ಗ್ಯಾಸ್ ಟರ್ಮಿನಲ್

Gas Container
Published on

ವೇಣುವಿನೋದ್ ಕೆ.ಎಸ್.ಮಂಗಳೂರು

ಕರಾವಳಿ ಭಾಗದಲ್ಲಿ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ವಿತರಣಾ ಜಾಲವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನವಮಂಗಳೂರು ಬಂದರು ಮಂಡಳಿಯ ಆವರಣದಲ್ಲಿ ಎಲ್‌ಪಿಜಿ ಗ್ಯಾಸ್ ಟರ್ಮಿನಲ್ ಸ್ಥಾಪಿಸಲಾಗುತ್ತಿದೆ.

ಇದಕ್ಕಾಗಿ ದೇಶದ ಪ್ರಮುಖ ಎಲ್‌ಪಿಜಿ ಸಂಗ್ರಹ, ಸಾಗಾಟಗಾರ ಕಂಪನಿಯಾಗಿರುವ ಏಜೀಸ್ ವೋಪಾಕ್ ಟರ್ಮಿನಲ್ಸ್ ಕಂಪನಿಯೊಂದಿಗೆ ಎನ್‌ಎಂಪಿಟಿ ಒಪ್ಪಂದ ಮಾಡಿಕೊಂಡಿದ್ದು, 20 ಎಕರೆ ಭೂಮಿಯನ್ನೂ ಒದಗಿಸಲಾಗಿದೆ. ತಣ್ಣೀರುಬಾವಿಯಲ್ಲಿ ಎಂಆರ್‌ಪಿಎಲ್ ಉಪ್ಪು ನೀರು ಸಂಸ್ಕರಣಾ ಸ್ಥಾವರ ಮತ್ತು ಇಂಡಿಯನ್ ಆಯಿಲ್ ಪ್ಲಾಂಟ್ ಮಧ್ಯೆ ಇರುವ ವಿಶಾಲ ಜಾಗವನ್ನು 30 ವರ್ಷಗಳ ಲೀಸ್ ಆಧಾರದಲ್ಲಿ ಏಜೀಸ್ ಕಂಪನಿಗೆ ನೀಡಲಾಗಿದೆ.

ಏಜೀಸ್ ಕಂಪನಿ ಮತ್ತು ರೋಯಲ್ ವೋಪಾಕ್ ಎಂಬ ಎರಡು ಕಂಪನಿಗಳು ಸೇರಿ ಏಜೀಸ್ ವೋಪಾಕ್ ಟರ್ಮಿನಲ್ಸ್ ಲಿಮಿಟೆಡ್ ಎಂಬ ಜಾಯಿಂಟ್ ವೆಂಚರ್ ಕಂಪನಿಯನ್ನು ಸೃಷ್ಟಿಸಲಾಗಿದೆ. ಈ ಕಂಪನಿ ಮಂಗಳೂರು ಸೇರಿದಂತೆ ಪೂರ್ವ, ಪಶ್ಚಿಮ ಕರಾವಳಿಯ ಒಟ್ಟು 5 ಬಂದರುಗಳಲ್ಲಿ ಎಲ್‌ಪಿಜಿ ಮತ್ತು ಪೆಟ್ರೋಕೆಮಿಕಲ್ ಸಂಗ್ರಹಣಾಗಾರಗಳನ್ನು ಸ್ಥಾಪಿಸುತ್ತಿದೆ. ಇವುಗಳ ಒಟ್ಟು ಸಾಮರ್ಥ್ಯ 9,60,000 ಘನ ಮೀಟರ್ ಆಗಿದ್ದು ದೇಶದ ಅತಿ ದೊಡ್ಡ ಸಂಗ್ರಹವಾಗಲಿದೆ. ಐದು ಬಂದರುಗಳಾದ ಮಂಗಳೂರು, ಕಾಂಡ್ಲಾ, ಪಿಪಾವಾವ್, ಕೊಚ್ಚಿ ಮತ್ತು ಹಾಲ್ಡಿಯಾಗಳಲ್ಲಿ ಎಲ್‌ಪಿಜಿ ಸಂಗ್ರಹಣಾಗಾರಗಳಿರುತ್ತವೆ. ಇತ್ತೀಚೆಗಷ್ಟೇ ನವಮಂಗಳೂರು ಬಂದರಿಗೆ ಭೇಟಿ ನೀಡಿದ್ದ ನೌಕಾಯಾನ ಮತ್ತು ಬಂದರು ಸಚಿವ ಸರ್ಬಾನಂದ ಸೋನೊವಾಲ್ ಯೋಜನೆಯನ್ನು ಪ್ರಕಟಿಸಿದ್ದರು.

ನವಮಂಗಳೂರು ಬಂದರು ವತಿಯಿಂದ ಜಮೀನು ಒದಗಿಸಲಾಗಿದ್ದು ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಿಕೊಡಲಾಗುವುದು. ಏಜೀಸ್ ಕಂಪನಿ ಇಲ್ಲಿ ಇನ್ನೆರಡು ವರ್ಷಗಳೊಳಗೆ ತನ್ನ ಟರ್ಮಿನಲ್ ಸ್ಥಾಪನೆ ಮಾಡುವ ನಿರೀಕ್ಷೆ ಇದೆ. ಮುಖ್ಯವಾಗಿ ಎಲ್‌ಪಿಜಿ ಮತ್ತು ಪೆಟ್ರೋಕೆಮಿಕಲ್ಸ್‌ಗಳನ್ನು ಆಮದು ಮಾಡಿಕೊಂಡು ಟರ್ಮಿನಲ್‌ನಲ್ಲಿ ಸಂಗ್ರಹಿಸಲಾಗುವುದು. ಮಂಗಳೂರಿನಿಂದ ಇತರ ಕಡೆಗಳಿಗೆ ವಿತರಣೆಯನ್ನೂ ಏಜೀಸ್ ಕಂಪನಿ ಮಾಡಲಿದೆ. ಈಗಾಗಲೇ ಏಜೀಸ್ ಕಂಪನಿ ಮಂಗಳೂರಿನಲ್ಲಿ ಸಣ್ಣ ಪ್ರಮಾಣದ ಟರ್ಮಿನಲ್ ಹೊಂದಿದೆ.

ಮಂಗಳೂರು ಟರ್ಮಿನಲ್ ಮಹತ್ವ: ಮಂಗಳೂರಿನಲ್ಲಿ ಒಟ್ಟು 30,200 ಕಿ.ಲೀ. ಸಾಮರ್ಥ್ಯದ ಸಂಗ್ರಹಣಾಗಾರವನ್ನು ಇದು ಒಳಗೊಂಡಿದೆ. ಮಂಗಳೂರು ಬಂದರು ಪ್ರಮುಖ ಪೆಟ್ರೋಲಿಯಂ ನಿರ್ವಹಣಾ ಬಂದರು ಆಗಿದೆ. ದಕ್ಷಿಣ ಭಾರತಕ್ಕೆ ಪ್ರವೇಶ ದ್ವಾರದಂತಿರುವ ಕಾರಣ ಈ ಪ್ರದೇಶ ನಮಗೆ ಮಹತ್ವದ್ದು. ಕೇಂದ್ರ ಸರ್ಕಾರದ ಒತ್ತಾಸೆ ಮೇರೆಗೆ ಇದನ್ನು ನಿರ್ಮಿಸಲು ಮುಂದಾಗಿದ್ದೇವೆ, ಈ ಟರ್ಮಿನಲ್ ಈಗಾಗಲೇ ನಮಗಿರುವ ಕೊಚ್ಚಿನ್ ಮತ್ತು ಮುಂಬೈ ಟರ್ಮಿನಲ್‌ಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಈ ಟರ್ಮಿನಲ್‌ನಿಂದಾಗಿ ಸಮುದ್ರ ಸರಕು ಸಾಗಾಟ ಕಡಿಮೆಯಾಗಿ, ಎಲ್‌ಪಿಜಿ ವಿತರಣೆ ಸುಗಮಗೊಳ್ಳಲಿದೆ ಎಂದು ಏಜೀಸ್ ಕಂಪನಿ ಮೂಲಗಳು ತಿಳಿಸಿವೆ. ಟರ್ಮಿನಲ್‌ಗೆ ಪ್ರತ್ಯೇಕ ಪೈಪ್‌ಲೈನ್ ಮೂಲಕ ಬಂದರಿನ ಜೆಟ್ಟಿಯಿಂದ ಸಂಪರ್ಕ ಕಲ್ಪಿಸಲಾಗುವುದು. ಪೆಟ್ರೋಲಿಯಂನ ಕ್ಲಾಸ್ ಎ, ಬಿ ಮತ್ತು ಸಿ ಉತ್ಪನ್ನಗಳನ್ನು ಹಾಗೂ ರಾಸಾಯನಿಕಗಳನ್ನು ಎನ್‌ಎಂಪಿಟಿಯಲ್ಲಿ ಸಂಗ್ರಹಿಸಲಿದೆ. ಟ್ಯಾಂಕ್ ಫಾರ್ಮ್ ರೂಪದಲ್ಲಿ ಈ ಟರ್ಮಿನಲ್ ಇರಲಿದೆ. ಈ ಭಾಗಕ್ಕೆ ಹತ್ತಿರದಲ್ಲೇ ಟರ್ಮಿನಲ್ ಅಭಿವೃದ್ಧಿ ಪಡಿಸುವುದರಿಂದ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net