

ಹೊನ್ನಾವರ: ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದು ಆಂಬುಲೆನ್ಸ್ನಲ್ಲಿದ್ದ ರೋಗಿ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಪಟ್ಟಣದ ರಾಮತೀರ್ಥ ಕ್ರಾಸ್ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ. ಗೋಕರ್ಣ ಮೂಲದ ರಾಮಕೃಷ್ಣ ಗಣಪತಿ ಪ್ರಸಾದ (70) ಅಪಘಾತದಲ್ಲಿ ಮೃತಪಟ್ಟವರು. ಮೂರ್ಛೆ ರೋಗದಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹೊನ್ನಾವರದ ಸೇಂಟ್ ಇಗ್ಲೇಷಿಯಸ್ ಆಸ್ಪತ್ರೆಗೆ ಆಂಬುಲೆನ್ಸನಲ್ಲಿ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಹೊನ್ನಾವರ ರಾಮತೀರ್ಥ ಕ್ರಾಸ್ ಬಳಿ ಜವರಾಯನಂತೆ ಬಂದ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಆಂಬುಲೆನ್ಸ್ ನಜ್ಜುಗುಜ್ಜಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಇಲ್ಲದಿದ್ದರೂ ಟ್ಯಾಂಕರ್ ಚಾಲಕನ ನಿಷ್ಕಾಳಜಿ ಮತ್ತು ಬೇಜವಾಬ್ದಾರಿತನದಿಂದ ವಾಹನ ಚಾಲನೆ ಮಾಡಿರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತಪಡಿಸಿದ ಗ್ಯಾಸ್ ಟ್ಯಾಂಕರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಆಂಬುಲೆನ್ಸ್ ಚಾಲಕ ರಾಜು ದತ್ತಾ ನಾಯ್ಕ (34) ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ರೋಗಿಯ ಜೊತೆಯಲ್ಲಿದ್ದ ಬಾಲಚಂದ್ರ ಗಣಪತಿ ಪ್ರಸಾದ ಹಾಗೂ ಸುಮನಾ ರಾಮಾ ಗೌಡ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಹೊನ್ನಾವರ ಸಿಪಿಐ ಶ್ರೀಧರ ಎಸ್.ಆರ್, ಸಿಪಿಐ ಶಶಿಕುಮಾರ್, ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ಯಾಸ್ ಟ್ಯಾಂಕರ್ ಚಾಲಕನ ವಿರುದ್ಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.