

ಮಂಗಳೂರು: ಅಡುಗೆ ಅನಿಲ ದರವನ್ನು ಮತ್ತೆ ಏರಿಕೆ ಮಾಡಿ ಜನ ಸಾಮಾನ್ಯರ ಜೀವನವನ್ನು ಬರ್ಬರಗೊಳಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಹಂಪನಕಟ್ಟೆಯಲ್ಲಿ ಮಿನಿ ವಿಧಾನ ಸೌಧದ ಎದುರು ಶನಿವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಪಕ್ಷದ ಕಾರ್ಯಕರ್ತೆಯರು ಸ್ಟೌವ್-ಕಟ್ಟಿಗೆ ಬಳಸಿ ಚಪಾತಿ ತಯಾರಿಸಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಚಪಾತಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಕಟ್ಟಿಗೆಯನ್ನು ಕಳುಹಿಸಿಕೊಡುವ ಕಾಲ ಬಂದಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಶೇ.40 ಭ್ರಷ್ಟಾಚಾರದಲ್ಲಿ ಮುಳುಗಿದೆ. ಮಹಿಳೆಯರ ಸಹಿತ ಜನಸಾಮಾನ್ಯರ ಕಷ್ಟಗಳು ಆಡಳಿತಗಾರರಿಗೆ ಅರ್ಥವಾಗುವುದಿಲ್ಲ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 50 ರೂ. ಗ್ಯಾಸ್ ದರ ಏರಿಸಿದಾಗ ಬೀದಿಗಿಳಿದ ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಐವನ್ ಡಿಸೋಜಾ, ಜೆ.ಆರ್.ಲೋಬೋ, ಮೊಯ್ದಿನ್ ಬಾವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಇನಾಯತ್ ಅಲಿ, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮಾಜಿ ಮೇಯರ್ ಶಶಿಧರ ಹೆಗ್ಡೆ ವಹಿಸಿದ್ದರು. ಮಾಜಿ ಉಪ ಮೇಯರ್ ಮುಹಮ್ಮ್ ಕುಂಜತ್ತಬೈಲ್, ಸದಾಶಿವ ಉಳ್ಳಾಲ್, ವಿಶ್ವಾಸ್ ಕುಮಾರ್‌ದಾಸ್, ಮೋಹನ್ ಕೋಟ್ಯಾನ್, ನಜೀರ್ ಬಜಾಲ್ ಮೊದಲಾದವರಿದ್ದರು.