ಗೂಡ್ಸ್ ರೈಲಿನಿಂದ ಗ್ಯಾಸ್ ಸೋರಿಕೆ: ಲೋಕೋಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

Sub_12 Dec_Train 1
Published on

ಸುಬ್ರಮಣ್ಯ: ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿನಲ್ಲಿ ಶನಿವಾರ ಬೆಳಗಿನ ಜಾವ ಅನಿಲ ಸೋರಿಕೆಯಾಗಿದ್ದು, ಲೋಕೋಪೈಲಟ್ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ.

ಮಂಗಳೂರಿನಿಂದ ಅನಿಲ ತುಂಬಿಕೊಂಡು ಮಹಾರಾಷಟ್ರೆಕ್ಕೆ ಹೋಗುತ್ತಿದ್ದ ಗೂಡ್ಸ್ ರೈಲನ್ನು ಸುಬ್ರಮಣ್ಯ ರೋಡ್ ರೈಲ್ವೆ ನಿಲ್ದಾಣದಲ್ಲಿ ರಾತ್ರಿ 2.30ರ ಸುಮಾರಿಗೆ ಕ್ರಾಸಿಂಗ್‌ಗಾಗಿ ನಿಲ್ಲಿಸಲಾಗಿತ್ತು. ಈ ಸಮಯದಲ್ಲಿ ಲೋಕೋಪೈಲಟ್ ಕೆಳಗಿಳಿದಾಗ ಸುಮಾರು 43 ಗೂಡ್ಸ್ ಪ್ಯಾನೆಲ್‌ಗಳ ಪೈಕಿ ನಾಲ್ಕನೇ ಟ್ಯಾಂಕ್‌ನಿಂದ ಅನಿಲ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ರೈಲ್ವೆ ನಿಲ್ದಾಣದಿಂದ ಪುತ್ತೂರು ಅಗ್ನಿಶಾಮಕದಳಕ್ಕೆ ಬಂದ ಕರೆಯಂತೆ ರಾತ್ರಿ ನೆಟ್ಟಣಕ್ಕೆ ತೆರಳಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಸುಳ್ಯ, ಬೆಳ್ತಂಗಡಿ, ಹಾಗೂ ಮಂಗಳೂರಿನಿಂದಲೂ ಹೆಚ್ಚುವರಿ ವಾಹನಗಳನ್ನು ತರಿಸಲಾಯಿತು. ನಾಲ್ಕು ಅಗ್ನಿಶಮನ ಯಂತ್ರಗಳು ಹಾಗೂ ರೈಲ್ವೆ ಇಲಾಖೆ ಸಹಕಾರದೊಂದಿಗೆ ಅನಿಲ ಸೋರಿಕೆ ತಡೆ ಕಾರ್ಯಾಚರಣೆ ನಡೆಯಿತು.

ಮಂಗಳೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ನೇತೃತ್ವದಲ್ಲಿ ಪುತ್ತೂರು ಅಗ್ನಿಶಾಮಕದಳದ ಠಾಣಾಧಿಕಾರಿ ಪಿ.ಆನಂದ್, ಮುಖ್ಯ ಅಗ್ನಿಶಾಮಕ ರುಕ್ಮಯ್ಯ ಗೌಡ, ಚಾಲಕ ಯಾದವ್, ಸಿಬ್ಬಂದಿ ಮಂಜುನಾಥ್, ಗೃಹರಕ್ಷಕ ದಳದ ಮಂಜುನಾಥ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net