

ಬೆಳಗಾವಿ: ಇಲ್ಲಿನ ಸುಭಾಷ ನಗರದ ಎಸ್‌ಪಿ ಆಫೀಸ್ ಬಳಿ ಸ್ಮಾರ್ಟ್‌ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಗ್ಯಾಸ್ ಪೈಪ್‌ಲೈನ್‌ಗೆ ಹಾನಿಯಾದ ಪರಿಣಾಮ ಭಾರಿ ಪ್ರಮಾಣದ ಗ್ಯಾಸ್ ಸೋರಿಕೆಯಾಗಿ ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆಮಾಡಿತ್ತು. ಸೋಮವಾರ ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ಜೆಸಿಬಿ ಮೂಲಕ ರಸ್ತೆ ಅಗೆಯುತ್ತಿರುವ ಸಂದರ್ಭದಲ್ಲಿ ಭೂಗತ ಗ್ಯಾಸ್ ಪೈಪ್‌ಗೆ ಹಾನಿಯಾಗಿ ಗ್ಯಾಸ್ ಸೊರಿಕೆಯಾಗಿದೆ. ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ತಮಗೆ ತಿಳಿಸುವಂತೆ ಗ್ಯಾಸ್ ಸರಬರಾಜು ಏಜೆನ್ಸಿ ಕಂಪನಿ ಅವರು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ, ರಸ್ತೆ ಕಾಮಗಾರಿ ಕೈಗೆತ್ತಿಕೊಂಡ ಸಂದರ್ಭದಲ್ಲಿ ಗ್ಯಾಸ್ ಏಜೆನ್ಸಿ ಕಂಪನಿ ಅವರಿಗೆ ಮಾಹಿತಿ ನೀಡದಿರುವುದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.
ಗ್ಯಾಸ್ ಪೈಪ್‌ಗೆ ಹಾನಿ ಯಾಗುತ್ತಿದ್ದಂತೆ ಭಾರೀ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿರುವ ಸುದ್ದಿ ಸುತ್ತಮುತ್ತಲಿನ ಪ್ರದೇಶದ ಜನರು ಹಾಗೂ ಪಕ್ಕದಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದ ಕುಟುಂಬಗಳಿಗೆ ತಿಳಿಯುತ್ತಿದ್ದಂತೆ ಆತಂಕ ಮನೆಮಾಡಿತ್ತು. ಆ ಮಾರ್ಗದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಶ್ರೀಕೃಷ್ಣ ದೇವರಾಯ ವೃತ್ತದ ಕಡೆಗೆ ವಾಹನ ಸಂಚಾರವನ್ನು ಕೆಲಕಾಲ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಬಳಿಕ ಗ್ಯಾಸ್ ಸರಬರಾಜು ಏಜೆನ್ಸಿ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೈಪ್‌ಲೈನ್ ದುರಸ್ತಿ ಮಾಡಿದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.