

ಮಂಗಳೂರು: ನಗರದಲ್ಲಿ ಗುರುವಾರ ರಾತ್ರಿ ಹರಡಿದ್ದ ಅನಿಲದ ವಾಸನೆಯ ಮೂಲ ಪತ್ತೆಯಾಗಿಲ್ಲ. ಗ್ಯಾಸ್ ಸೋರಿಕೆಯಾದ ಬಗ್ಗೆ ಮಾಹಿತಿ ಇದ್ದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಂತ್ರಣ ಕೊಠಡಿಯ ಟೋಲ್ ಫ್ರೀ ಸಂಖ್ಯೆ: 1077ಗೆ ಕರೆ ಮಾಡಿ ತಿಳಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಂತ್ರಣ ಕೊಠಡಿಯಲ್ಲೂ ಸಾರ್ವಜನಿಕರ ದೂರುಗಳು ದಾಖಲಾಗಿದ್ದವು. ಪೊಲೀಸ್, ಅಗ್ನಿಶಾಮಕ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಉಪನಿರ್ದೇಶಕರಿಗೆ ಮಾಹಿತಿ ನೀಡಲಾಗಿದ್ದು, ಗ್ಯಾಸ್ ಸೋರಿಕೆಯಾದ ಮೂಲದ ಪತ್ತೆಗೆ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಕೊಟ್ಟಾರ, ಕುದ್ರೋಳಿ, ಕಾರ್‌ಸ್ಟ್ರೀಟ್, ಉರ್ವಸ್ಟೋರ್ ಮೊದಲಾದ ಕಡೆ ಅನಿಲ ಸೋರಿಕೆಯ ವಾಸನೆ ಹರಡಿತ್ತು. ಇದರಿಂದ ಸಾರ್ವಜನಿಕರು ಆತಂಕಗೊಂಡಿದ್ದರು. ಪೊಲೀಸ್ ನಿಯಂತ್ರಣ ಕೊಠಡಿ, ಠಾಣೆಗಳಿಗೆ, ಅಗ್ನಿಶಾಮಕ ಅಧಿಕಾರಿಗಳಿಗೆ ಸಾರ್ವಜನಿಕರು ನೂರಾರು ಕರೆ ಮಾಡಿ ವಿಚಾರಣೆ ನಡೆಸಿದ್ದಾರೆ. ಕಮಿಷನರೆಟ್ ವ್ಯಾಪ್ತಿಯ ಎಲ್ಲ ಠಾಣೆಗಳ ಪೊಲೀಸರು ಚುರುಕಾಗಿ ಮೂಲ ಹುಡುಕಲು ಪ್ರಯತ್ನ ನಡೆಸಿದ್ದಾರೆ.
ಎಂಆರ್‌ಪಿಎಲ್, ಎಚ್‌ಪಿಸಿಎಲ್, ಎಂಸಿಎಫ್, ನಗರ ವ್ಯಾಪ್ತಿಯಲ್ಲಿ ಆಟೋ ಗ್ಯಾಸ್ ಪಂಪ್‌ಗಳಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ನಿಲುಗಡೆಯಾದ ಸ್ಥಳಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಎನ್‌ಜಿ ಪೈಪ್‌ಲೈನ್ ಪೂರ್ಣಗೊಂಡಿಲ್ಲ, ಹಾಗಾಗಿ ಅದರಿಂದ ಸೋರಿಕೆಯಾಗುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಎಲ್ಲಿಯೂ ಗ್ಯಾಸ್ ಸೋರಿಕೆಯಾಗಿರುವುದು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.