ಬಂಟ್ವಾಳದಲ್ಲಿ ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಶನ್

Gas Insulated station
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆ ಜಪಾನ್ ತಂತ್ರಜ್ಞಾನಾಧಾರಿತ ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಶನ್‌ಗಳನ್ನು ಮೊದಲ ಬಾರಿ ಮೆಸ್ಕಾಂ ನಿರ್ಮಿಸುತ್ತಿದೆ. ಸ್ಮಾರ್ಟ್ ಸಿಟಿ ಪರಿಕಲ್ಪನೆಯತ್ತ ಮುನ್ನುಗುತ್ತಿರುವ ಜಿಲ್ಲೆಗೆ ಈ ತಂತ್ರಜ್ಞಾನ ಪೂರಕವಾಗಿದ್ದು ವಿನೂತನ ತಂತ್ರಜ್ಞಾನದ ನೆರವಿನಿಂದ ಕಡಿಮೆ ಜಾಗದಲ್ಲಿ ಗರಿಷ್ಠ ಲಾಭ ತರುವ ಯೋಜನೆ ಇದಾಗಿದೆ.

ಜಿಲ್ಲೆಯ ಉರ್ವ (ಮಂಗಳೂರು) ಹಾಗೂ ಬಂಟ್ವಾಳಗಳಲ್ಲಿ ಜಪಾನ್ ಮಾದರಿ ತಂತ್ರಜ್ಞಾನದ ಜಿ.ಐ.ಎಸ್. (ಗ್ಯಾಸ್ ಇನ್ಸುಲೇಟೆಡ್ ಸಬ್‌ಸ್ಟೇಶನ್) ವಿದ್ಯುತ್ ವಿತರಣಾ ಕೇಂದ್ರಗಳು ನಿರ್ಮಾಣಗೊಳ್ಳುತ್ತಿವೆ. ಬಂಟ್ವಾಳದಲ್ಲಿ ಪುರಸಭಾ ವ್ಯಾಪ್ತಿಯ ನಿತ್ಯಾನಂದ ನಗರ ಅರ್ಬಿಗುಡ್ಡೆ ಪ್ರದೇಶದಲ್ಲಿ ಸುಮಾರು 12.54 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಮಾರ್ಚ್ ತಿಂಗಳಲ್ಲಿ ಕಾರ್ಯಾಚರಣೆ ಆರಂಭಗೊಳ್ಳುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರದ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್) ಇದು ಅನುಷ್ಠಾನಗೊಳ್ಳುತ್ತಿದೆ.

ಇತರ ಉಪಕೇಂದ್ರಗಳಿಗೆ ಹೋಲಿಸಿದರೆ ಸುಧಾರಿತ ತಂತ್ರಜ್ಞಾನ ಮತ್ತು ತಾಂತ್ರಿಕ ತೊಂದರೆಗಳು ಕನಿಷ್ಠ. ಕಡಿಮೆ ಸ್ಥಳಾವಕಾಶ ಸಾಕು. ಬಂಟ್ವಾಳದಲ್ಲಿ 16 ಸೆಂಟ್ಸ್ ಜಾಗದಲ್ಲಿ ಕೇಂದ್ರ ನಿರ್ಮಿಸಲಾಗುತ್ತಿದೆ. ತಲಾ 8 ಎಂವಿಎ ಸಾಮರ್ಥ್ಯದ ಎರಡು ಅತ್ಯಾಧುನಿಕ ಟ್ರಾನ್ಸ್‌ಫಾರ್ಮರ್‌ಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ. ಬಂಟ್ವಾಳ ನಗರ ಪ್ರದೇಶಕ್ಕೆ ಪ್ರಸ್ತುತ ತಲಪಾಡಿ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿದ್ದು, ಬಂಟ್ವಾಳದಲ್ಲಿ ಕಾಮಗಾರಿ ಪೂರ್ಣಗೊಂಡರೆ ಇಡೀ ನಗರಕ್ಕೆ ಇಲ್ಲಿಂದ ವಿದ್ಯುತ್ ಪೂರೈಕೆಯಾಗಲಿದೆ.

ಹೇಗಿದೆ ಸಬ್‌ಸ್ಟೇಶನ್?: ಪ್ರಥಮ ಬಾರಿ ಜಪಾನ್ ತಂತ್ರಜ್ಞಾನದ ಗ್ಯಾಸ್ ಇನ್ಸುಲೇಟೆಡ್(ಜಿಐ) ವಿಧಾನ ಅಭಿವೃದ್ಧಿ ಪಡಿಸಲಾಗಿದ್ದು, ಹೈ ವೋಲ್ಟೇಜ್ ವಿದ್ಯುತ್ ಪ್ರಸರಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಕಿರಿದಾಗಿಸಿ, ಸಲರ್ ಹೆಕ್ಸಾ-ರಿಡ್ ಗ್ಯಾಸ್ ಕವಚದಲ್ಲಿ ಮುಚ್ಚಿಡುವ ವಿಧಾನ ಇದು. ಬ್ರೇಕರ್, ಟ್ರಾನ್ಸ್‌ಫಾರ್ಮರ್ ಯಾರ್ಡ್ ಸಣ್ಣ ಕಂಟ್ರೋಲ್ ರೂಂನಿಂದ ನಿಯಂತ್ರಿಸಬಹುದು.

ವಿದ್ಯುತ್ ಸಬ್‌ಸ್ಟೇಷನ್‌ಗಳಲ್ಲಿ ಸಾಮಾನ್ಯವಾಗಿ ಏರ್ ಇನ್ಸುಲೇಟೆಡ್ ವಿಧಾನ ಅಳವಡಿಸಲಾಗುತ್ತಿದ್ದು, ಹೈ ವೋಲ್ಟೇಜ್ ವಿದ್ಯುತ್ ಪ್ರಸರಣವಾಗುವ ಕಾರಣ ವಿದ್ಯುತ್ ತಂತಿಗಳ ಮಧ್ಯೆ ಸಾಕಷ್ಟು ಅಂತರ ಬೇಕಾಗುತ್ತದೆ. ಹೀಗಾಗಿ ಸಬ್‌ಸ್ಟೇಷನ್‌ಗಳಿಗೆ ಸುಮಾರು ಅರ್ಧ ಎಕರೆಯಷ್ಟು ಜಾಗ ಅಗತ್ಯವಿರುತ್ತದೆ. 110 ಕೆವಿಗೆ 3ರಿಂದ 4 ಎಕರೆ ಪ್ರದೇಶ ಬೇಕಾಗುತ್ತದೆ. ಆದರೆ ಜಿ.ಐ.ಎಸ್.ಗೆ 16 ಸೆಂಟ್ಸ್ ಜಾಗ ಸಾಕು.

ಗ್ಯಾಸ್ ಇನ್ಸುಲೇಟೆಡ್ ವಿಧಾನದಲ್ಲಿ ಸುರಕ್ಷತೆ ಜಾಸ್ತಿ. ಇದು ಸುಧಾರಿತ ತಂತ್ರಜ್ಞಾನವಾಗಿದ್ದು, ಕೇಂದ್ರ ಸ್ಥಾಪನೆಗೆ ಕಡಿಮೆ ಸ್ಥಳಾವಕಾಶ ಸಾಕು. ಬಂಟ್ವಾಳದಲ್ಲಿ ಮಾರ್ಚ್ ವೇಳೆ ಇದು ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ.

- ಮಂಜಪ್ಪ, ಮೆಸ್ಕಾಂ ಮಂಗಳೂರು ವಲಯ ಮುಖ್ಯ ಎಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net