

ಶಿವಮೊಗ್ಗ: ನಗರದ ಹೊರವಲಯದ ಕೋಟೆಗಂಗೂರಿನ ಅಡಕೆ ಮಂಡಿ ಕಾರ್ಮಿಕರ ಕಾಲನಿಯಲ್ಲಿ ಸಾಂಬಾರ್ ಮಾಡುವ ವೇಳೆ ರೆಗ್ಯುಲೆಟರ್‌ಗೆ ಬೆಂಕಿ ಹೊತ್ತಿಕೊಂಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯ ಗೋಡೆಗಳೇ ಕುಸಿದು ಬಿದ್ದಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಯಲ್ಲಿದ್ದವರು ಹೊರ ಓಡಿ ಬಂದಿದ್ದಾರೆ. ಈ ಕಾರಣದಿಂದ ಸಂಭಾವ್ಯ ಅನಾಹುತದಿಂದ ಪಾರಾಗಿದ್ದಾರೆ. ಸ್ಫೋಟದ ರಭಸಕ್ಕೆ ಮನೆಯ ಗೋಡೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಹಮಾಲಿ ಕಾರ್ಮಿಕ ನಾಗೇಶ್ ಎಂಬುವರ ಮನೆ ಇದಾಗಿದ್ದು ರೇಣುಕಮ್ಮ ಎಂಬುವರಿಗೆ ಮನೆ ಬಾಡಿಗೆ ನೀಡಿದ್ದರು. ಮಹಿಳೆಯು ಪತಿ, ಮಗನೊಂದಿಗೆ ವಾಸವಿದ್ದರು. ಬೆಳಗ್ಗೆ ಪತಿ ಹಾಗೂ ಮಗ ಹೊರಗಡೆ ತೆರಳಿದ್ದರು. ಮಹಿಳೆಯು ಗ್ಯಾಸ್ ಒಲೆ ಮೇಲೆ ಸಾಂಬಾರ್ ಮಾಡುತ್ತಿದ್ದಾಗ ಗ್ಯಾಸ್ ಲೀಕ್ ಆಗಿ ರೆಗ್ಯುಲೇಟರ್‌ಗೆ ಹೊತ್ತಿಕೊಂಡಿದೆ. ನಂದಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನ ಆಗಿಲ್ಲ.
ಆದರೆ ಬೆಂಕಿಯ ಪ್ರಮಾಣ ಹೆಚ್ಚಾಗಿದ್ದರಿಂದ ಅವರು ಮನೆಯಿಂದ ಹೊರಓಡಿ ಬಂದಿದ್ದು, ಕೆಲ ಕ್ಷಣಗಳಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಕಿವಿಗಡಚಿಕ್ಕುವ ಶಬ್ದವು ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿತ್ತು.