

ಕಲಬುರಗಿ: ನಗರದ ಅಪ್ಪನ ಕೆರೆ ಬಳಿಯ ಸಪ್ತಗಿರಿ ಹೊಟೇಲ್ ನಲ್ಲಿ ಗ್ಯಾಸ್ ಸಿಲೆಂಡರ್ ಸ್ಫೋಟ್ ಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದಿದೆ.
ಬೆಳಗ್ಗೆ ಹೊಟೇಲ್ ನಲ್ಲಿ ಅಡುಗೆ ಸಿದ್ಧತೆ ಮಾಡಲು ಹೋದಾಗ ಅವಘಡ ಸಂಭವಿಸಿದ್ದು, ಹೊಟೇಲ್ ನಲ್ಲಿನ ಸುಮಾರು 11 ಸಿಬ್ಬಂದಿಗೆ ಗಾಯಗಳಾಗಿದ್ದು, ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿವೆ ಎನ್ನಲಾಗಿದೆ.
ನೆಲ ಮಹಡಿಯ ಕಿಚನ್ ರೂಂನಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಗೆ ಹೊಟೇಲ್ ನ ಇಡೀ ಕಟ್ಟಡ ಜಖಂಗೊಂಡಿದ್ದು, ಪಕ್ಕದ ಸುಮಾರು 100 ಮೀಟರ್ ಗಿಂತ ದೂರದ ಕಟ್ಟಡಗಳಿಗೂ ಹಾನಿಯಾಗಿದೆ.
ಗಾಯಾಳುಗಳನ್ನು ನಗರದ ಟ್ರಾಮಾ ಕೇರ್ ಕೇಂದ್ರದಲ್ಲಿ ದಾಖಲಿಸಿದ್ದು, ಕೆಲವರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕಮೀಷನರ್ ಆರ್.ಚೇತನ್ ಕುಮಾರ, ಎಸಿಪಿ ಕನ್ನಿಕಾ ಶಿಖ್ರಿವಾಲ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಆಗಮಿಸಿ, ಬೆಂಕಿ ನಂದಿಸಿದೆ. ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.