

ಕುಶಾಲನಗರ:
ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಖಾಸಗಿ ಸಿ. ಎನ್. ಜಿ ಘಟಕದಿಂದ ಮಂಗಳವಾರ ಸಂಜೆ ಅನಿಲ ಸೋರಿಕೆ ಉಂಟಾದ ಪರಿಣಾಮ ಸ್ಥಳೀಯರಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಬುಧವಾರ ಬಂಕ್‌ಗೆ ಮುತ್ತಿಗೆ ಹಾಕಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಘಟಕದಿಂದ ಸಹಿಸಲು ಅಸಾಧ್ಯವಾದ ದುವಾರ್ಸನೆ ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸಿದೆ. ಹಲವರಿಗೆ ಉಸಿರಾಟ ಸಮಸ್ಯೆ, ತಲೆನೋವು, ಮಕ್ಕಳಲ್ಲಿ ವಾಂತಿ ಹಾಗೂ ಅಸ್ವಸ್ಥತೆ ಕಾಡಿದೆ. ಇದರಿಂದ ಆತಂಕಗೊAಡ ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಗ್ರಾ.ಪಂ. ಅಧ್ಯಕ್ಷ ಭಾಸ್ಕರ್ ನಾಯಕ್ ಅವರೊಂದಿಗೆ ಬುಧವಾರ ಬಂಕ್‌ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾಸ್ ಘಟಕದವರ ನಿರ್ಲಕ್ಷ್ಯದಿಂದ ಆತಂಕದ ಪರಿಸ್ಥಿತಿ ಸೃಷ್ಠಿಯಾಗಿದೆ. ಜನವಸತಿ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಈ ಘಟಕದಿಂದ ಮುಂದಿನ ದಿನಗಳಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಜೀವಹಾನಿ ಉಂಟಾದರೆ ಯಾರು ಜವಾಬ್ದಾರರು ? ಈ ನಿಟ್ಟಿನಲ್ಲಿ ನಮ್ಮ ಜೀವಕ್ಕೆ ಜವಾಬ್ದಾರಿ ವಹಿಸಿಕೊಳ್ಳುವವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ತಹಸೀಲ್ದಾರ್ ಕಿರಣ್ ಗೌರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾತ್ರಿ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಹಲವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಘಟಕದ ಸಿಬ್ಬಂದಿ ವಿಚಾರಿಸಿದಾಗ ಲೀಕೇಜ್ ಟೆಸ್ಟಿಂಗ್ ಸಂದರ್ಭ ಈ ರೀತಿಯಾಗಿದೆ ಎಂದು ತಿಳಿಸಿದ್ದಾರೆ. ಇದರ ಬಗ್ಗೆ ಮುಂಚಿತವಾಗಿಯೇ ಯಾವುದೇ ಜಾಗೃತಿ ಮೂಡಿಸದೆ ಟೆಸ್ಟಿಂಗ್ ನಡೆಸಿದ ಪರಿಣಾಮ ಈ ಅವಾಂತರ ಉಂಟಾಗಿದೆ. ಈ ಹಿನ್ನಲೆಯಲ್ಲಿ ಸಂಬAಧಿಸಿದವರು ಜನರ ಸುರಕ್ಷತೆಗೆ ಭರವಸೆ ನೀಡುವಂತಾಗಬೇಕಿದೆ ಎಂದರು.
ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಈ ಘಟಕ ಆರಂಭವಾಗುವ ಸಂದರ್ಭದಲ್ಲಿ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ಜನರು ಆತಂಕ ಪಡುವಂಥ ಘಟನೆ ಸಂಭವಿಸಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಬೇಕಿದೆ. ಜನವಸತಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಘಟಕ ಸ್ಥಗಿತವಾಗಬೇಕಿದೆ. ಸಾರ್ವಜನಿಕರಿಗೆ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಸಂಬAಧಿಸಿದ ಘಟಕದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ ಎಂದು ಒತ್ತಾಯಿಸಿದರು.
ಕೂಡುಮಂಗಳೂರು ಗ್ರಾಪಂ ಸದಸ್ಯ ಭೋಗಪ್ಪ ಮಾತನಾಡಿ, ಘಟಕದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಲ್ಲಿ ಹಾಜರಾಗಿ ಸ್ಪಷ್ಟನೆ ನೀಡಬೇಕಿದೆ. ಜನವಸತಿ ಪ್ರದೇಶದಿಂದ ಈ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕಿದೆ ಎಂದು ಒತ್ತಾಯಿಸಿದರು.
ಕೂಡುಮಂಗಳೂರು ಗ್ರಾ.ಪಂ. ಸದಸ್ಯರಾದ ಮಂಜುನಾಥ್, ಮಣಿಕಂಠ, ಚಂದ್ರು, ಗಿರೀಶ್, ಪಿ.ಡಿಒ ಸಂತೋಷ್, ಕಂದಾಯಧಿಕಾರಿ ಸಂತೋಷ್ ಹಾಗೂ ಗ್ರಾಮಸ್ಥರು ಇದ್ದರು.