

ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಹೋಬಳಿಯ ಹಾದನೂರು ಗ್ರಾಮದ ಬಳಿಯಿರುವ ಜಾಕಿ ಗಾರ್ಮೆಂಟ್ಸ್ ಕಾರ್ಖಾನೆಗೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಕಾರ್ಮಿಕರು ಮತ್ತು ನೌಕರರಿಗೆ ಒದಗಿಸಿರುವ ಮೂಲಸೌಕರ್ಯಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.
ಕಾರ್ಖಾನೆಯ ಅಧಿಕಾರಿಗಳ ತಂಡದೊಂದಿಗೆ ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಮಾತನಾಡಿಸಿ ಕುಂದುಕೊರತೆಗಳ ಮಾಹಿತಿ ಪಡೆದರು. ಕಾರ್ಮಿಕರ ಜತೆಗಿನ ಸಮಾಲೋಚನೆ ಬಳಿಕ ಮಾತನಾಡಿದ ಶಾಸಕರು, ಈ ಹಿಂದೆ ಕಾರ್ಖಾನೆಯ ಅಧಿಕಾರಿಗಳು ಕಾರ್ಮಿಕರೊಂದಿಗೆ ಸೌಜನ್ಯದ ನಡವಳಿಕೆ ಪ್ರದರ್ಶಿಸುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿದ್ದವು. ಇತ್ತೀಚೆಗೆ ಕಾರ್ಖಾನೆಯ ಉನ್ನತ ಅಧಿಕಾರಿಗಳ ತಂಡ ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆಯ ಆಡಳಿತ ಸಿಬ್ಬಂದಿ ಕಾರ್ಮಿಕರೊಂದಿಗೆ ಸೌಜನ್ಯದ ನಡವಳಿಕೆ ಪ್ರದರ್ಶಿಸುವಂತೆ ಕಿವಿಮಾತು ಹೇಳಿ ಹೋಗಿದ್ದರು. ಈಗ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಯಾವುದೇ ದೂರುಗಳು ಕೇಳಿ ಬರುತ್ತಿಲ್ಲ ಎಂದರು.
ಕಾರ್ಖಾನೆಯಲ್ಲಿ ಮೂರು ಸಾವಿರ ನೌಕರರು ಕೆಲಸ ಮಾಡುತ್ತಿದ್ದು, ಮಹಿಳಾ ಕಾರ್ಮಿಕರ ಮಕ್ಕಳ ಪಾಲನೆಗಾಗಿ ಅತ್ಯುತ್ತಮವಾದ ಶಿಶು ಪಾಲನಾ ಕೇಂದ್ರವನ್ನು ತೆರೆದಿದ್ದಾರೆ. ಉತ್ತಮವಾದ ಕ್ಯಾಂಟೀನ್ ವ್ಯವಸ್ಥೆಯಿದ್ದು, ಇಲ್ಲಿ ಅಧಿಕಾರಿಗಳು ಮತ್ತು ಸಾಮಾನ್ಯ ನೌಕರರಿಗೂ ಏಕ ರೂಪದ ಊಟೋಪಚಾರದ ವ್ಯವಸ್ಥೆಯಿದೆ. ಕಾರ್ಖಾನೆ ಸ್ವಚ್ಛತೆಗೆ ಆದ್ಯತೆ ನೀಡಿರುವುದು ಮೆಚ್ಚುಗೆಯ ಸಂಗತಿ ಎಂದರು.
ಕಾರ್ಖಾನೆ ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸುತ್ತಿದ್ದು, ಇದರಿಂದ ಸುಮಾರು ಎರಡು ಸಾವಿರ ಜನರಿಗೆ ಉದ್ಯೋಗಾವಕಾಶಗಳು ದೊರಕಲಿವೆ. ತಾಲೂಕಿನಲ್ಲಿ ಹೊಸ ಉದ್ದಿಮೆಗಳು ಆರಂಭವಾಗಬೇಕು. ಇದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಅಲ್ಲದೆ ತಾಲೂಕಿನ ಆರ್ಥಿಕ ಪ್ರಗತಿಗೆ ಸಹಕಾರಿಯಾಗುತ್ತದೆ. ಜಾಕಿ ಕಾರ್ಖಾನೆ ತನ್ನ ಹೊಸ ಘಟಕದಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆಯಲ್ಲಿ ಉದ್ಯೋಗ ನೀಡಬೇಕು ಎಂದು ಸೂಚಿಸಿದರು.
ಕಾರ್ಖಾನೆಯ ಎಸ್.ಜಿ.ಎಂ ಬಾಬುರಾಜ್, ಡಿಜಿಎಂ ಶ್ರೀಧರ್, ಪಿಡಿಒ ನವೀನ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಮುಖಂಡ ಮರೀಗೌಡ ಶಾಸಕರ ಆಪ್ತ ಸಹಾಯಕರಾದ ಅರಳಕುಪ್ಪೆ ಪ್ರತಾಪ್, ಧ್ರುವಕುಮಾರ್ ಇತರರಿದ್ದರು.