"ಬೆಳ್ಳುಳ್ಳಿ ಕಬಾಬ್" ಟ್ರೆಂಡ್ ಬೆನ್ನಲ್ಲೇ ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ; ಮೊಯೆ..ಮೊಯೆ ಎಂದ ಗ್ರಾಹಕರು

Garlic Price
Published on

ಬೆಂಗಳೂರು: ಪ್ರತಿ ನಿತ್ಯ ಒಂದಲ್ಲ ಒಂದು ಪದಾರ್ಥದ ಬೆಲೆ ಏರಿಕೆಯಾಗುತ್ತಿದೆ.  ಇರುಳ್ಳಿ, ಟೊಮ್ಯಾಟೋ ಬೆಲೆ ಏರಿಕೆ ನಂತರ ಈಗ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ಬಳಸದೆ ಆಹಾರ ಪದಾರ್ಥ ತಯಾರಿಸಲು ಕೆಲವು ಹೋಟೆಲ್ ಮಾಲೀಕರು ಹಾಗೂ ಗೃಹಿಣಿಯರು ನಿರ್ಧರಿಸಿದ್ದಾರೆ.

ಇತ್ತ ಸಾಮಾಜಿಕ ಜಾಲತಾಣದಲ್ಲಿ ಬೆಳ್ಳುಳ್ಳಿ ಕಬಾಬ್ ​ ಸಾಕಷ್ಟು ಟ್ರೆಂಡ್​​ ಆಗುತ್ತಿದ್ದರೆ ಇತ್ತ ಬೆಳ್ಳುಳ್ಳಿ ಬೆಲೆ ಗಗನಕ್ಕೆ ಏರಿದೆ.ರಾಜ್ಯಾದ್ಯಂತ ಬೆಳ್ಳುಳ್ಳಿ ಪೂರೈಕೆಯಲ್ಲಿ ಕುಸಿತ ಕಂಡಿದೆ. ಹೀಗಾಗಿ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ.

ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ  ಯಾರ್ಡ್‌ನಲ್ಲಿ ಬೆಳ್ಳುಳ್ಳಿಯ ಪೂರೈಕೆ ಶೇ.50 ರಷ್ಟು ಕುಸಿದಿದೆ. ಇದರಿಂದ ಕೆಜಿ ಬೆಳ್ಳುಳ್ಳಿಗೆ 350 ರೂ. ಚಿಲ್ಲರೆ ಮಾರುಕಟ್ಟೆಯಲ್ಲಿ 400 ರೂ.ಗೆ ತಲುಪಿದೆ.

ಬೆಂಗಳೂರು ಸಗಟು ಬೆಳ್ಳುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ದೀಪಕ್ ಜೆ ಷಾ ಮಾತನಾಡಿ, ಬೆಂಗಳೂರಿಗೆ ಸಾಮಾನ್ಯವಾಗಿ ದಿನಕ್ಕೆ 40 ಕೆಜಿ ತೂಕವಿರುವ 3,000 ಬೆಳ್ಳುಳ್ಳಿ ಚೀಲ ಬರುತ್ತಿದ್ದವು. ಕೆಲವು ದಿನಗಳಿಂದ ಪೂರೈಕೆಯು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಹೀಗಾಗಿ ದರ ಏರಿಕೆಯಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಬರಗಾಲ ಆವರಿಸಿದ್ದರಿಂದ ಪೂರೈಕೆಗೆ ತೊಂದರೆಯಾಗಿದೆ ಎಂದು ಹೇಳಿದರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತಿದ್ದು, ಇಡೀ ಕರ್ನಾಟಕಕ್ಕೆ ಪೂರೈಸಲು ಇದು ಸಾಕಾಗುತ್ತಿಲ್ಲ. ರಾಜ್ಯವು ಸಾಮಾನ್ಯವಾಗಿ ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳಿಂದ ಬೆಳ್ಳುಳ್ಳಿಯನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ಈಗ, ನಾವು ಮಧ್ಯಪ್ರದೇಶದಿಂದ ಮಾತ್ರ ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ತಿಂಗಳ ಅಂತ್ಯದ ವೇಳೆಗೆ, ಗುಜರಾತ್ ಮತ್ತು ರಾಜಸ್ಥಾನದಿಂದಲೂ ಪೂರೈಕೆ ಪುನರಾರಂಭವಾಗುತ್ತದೆ ಮತ್ತು ದರ ಕಡಿಮೆಯಾಗುವ ನಿರೀಕ್ಷೆಯಿದೆ.

ಬೆಲೆ ಏರಿಕೆಯಿಂದ ಬೆಳ್ಳುಳ್ಳಿಯಿಂದ ತಯಾರಿಸುವ ಪದಾರ್ಥಗಳ ಬೆಲೆಯೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೆಳ್ಳುಳ್ಳಿ ಕಬಾಬ್​ ತಿನ್ನಬೇಕೆಂಬ ಆಸೆ ಇಟ್ಟುಕೊಂಡವರಿಗೆ ಬೆಲೆಯ ಬಿಸಿ ತಟ್ಟಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net