ಪ್ಲಾಸ್ಟಿಕ್ ಬಾಟ್ಲಿಯಲ್ಲಿ ಅರಳಿತು ಹಸಿರು !

plastic
Published on

ಉಡುಪಿ: ತಂಪು ಪಾನೀಯ ಕುಡಿದು ಎಲ್ಲೆಂದರಲ್ಲಿ ಬಾಟ್ಲಿ ಎಸೆಯುವ ಜಾಯಮಾನ ಹೊಂದಿರುವವರ ಮಧ್ಯೆ ಮಲ್ಪೆಯ ಕಿದಿಯೂರು ಗ್ರಾಮದ ದಂಪತಿ ಪ್ಲಾಸ್ಟಿಕ್ ಬಾಟಲ್ ಮರುಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮನೆಯ ಆವರಣದಲ್ಲಿ ಪಾನೀಯ ಬಾಟಲಿಗಳಿಗೂ ಹಸಿರು ಸ್ಪರ್ಶ ನೀಡಿದ್ದಾರೆ. ಅಪರ ಜಿಲ್ಲಾಧಿಕಾರಿ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಯತೀಶ್ ಹಾಗೂ ಸರ್ಕಾರಿ ಶಾಲೆ ಶಿಕ್ಷಕಿ ಅಶ್ವಿತಾ ದಂಪತಿ ಮನೆಯಲ್ಲಿ ಬಳಸಿದ ತಂಪು ಪಾನೀಯಗಳ ಬಾಟಲಿಗಳನ್ನು ಆಕರ್ಷಕವಾಗಿ ಕತ್ತರಿಸಿ ಆಲಂಕಾರಿಕ, ಹೂವಿನ ಗಿಡ, ಗಿಡ ಮೂಲಿಕೆ, ಆಯ್ದ ತರಕಾರಿ ಗಿಡಗಳನ್ನು ಬೆಳೆಸುವ ಪಾತ್ರೆಗಳಾಗಿ ಪರಿವರ್ತಿಸಿದ್ದಾರೆ. 50ಕ್ಕೂ ಅಧಿಕ ಬಾಟಲಿಗಳಲ್ಲಿ 30 ಬಗೆಯ ಗಿಡಗಳನ್ನು ಬೆಳೆಸಿದ್ದಾರೆ. ಇದರಿಂದ ಮನೆ ಆವರಣ ಅಂದವಾಗಿ ಕಾಣುತ್ತಿದ್ದು, ಪರಿಸರ ಕಾಳಜಿಗೂ ಪೂರಕವಾಗಿದೆ.

ಶಿಕ್ಷಕಿ ಅಶ್ವಿತಾ ಅವರು ತನ್ನ ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ಮರುಬಳಕೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ತಮ್ಮ ಮನೆಯಲ್ಲಿ ಬಾಟಲಿ ಗಾರ್ಡನ್ ಮಾಡಿ ಮಾದರಿಯಾಗಿದ್ದಾರೆ. ಇದೀಗ ಮಕ್ಕಳಿಗೆ ಪ್ರಾಯೋಗಿಕವಾಗಿ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ಮರುಬಳಕೆ ಕುರಿತು ಅರಿವು ಮೂಡಿಸುತ್ತಿದ್ದಾರೆ.

ತಯಾರಿ ಹೇಗೆ?: ಪ್ಲಾಸ್ಟಿಕ್ ಬಾಟಲಿಗಳನ್ನು ಭಿನ್ನ ಅಳತೆ-ಆಕಾರದಲ್ಲಿ ಕತ್ತರಿಸಿ, ಮನೆ ತಾರಸಿಗೆ ಉದ್ದವಾದ ಹಗ್ಗಕ್ಕೆ ಬಾಟಲಿಗಳನ್ನು ಒಂದರ ಮೇಲೊಂದರಂತೆ ಒಂದು ನಿರ್ದಿಷ್ಟ ಅಂತರದಲ್ಲಿ ಕಟ್ಟಿ ತೂಗು ಬೀಳುವಂತೆ ನೇತುಹಾಕಬೇಕು. ಬಳಿಕ ಕೆಂಪು ಮಣ್ಣು ಮತ್ತು ಮರಳು, ತೆಂಗಿನ ನಾರಿನ ಹುಡಿ, ಗೊಬ್ಬರ ತುಂಬಿದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಣ್ಣ ಗಿಡಗಳನ್ನು ನೆಡಬೇಕು. ಒಂದೂವರೆ ತಿಂಗಳಲ್ಲಿ ಗಿಡಗಳು ಚಿಗುರಿ ಹೂವು ಬಿಡಲು ಪ್ರಾರಂಭವಾಗುತ್ತದೆ. ಕಡಿಮೆ ಖರ್ಚಿನಲ್ಲಿ ಪರಿಶ್ರಮವಿಲ್ಲದೆ ಬಾಟಲಿ ಗಾರ್ಡನ್ ನಿರ್ಮಿಸಬಹುದು.

ಬಿಸಿಲ ಬೇಗೆ ತಣಿಸಲು ತಂಪುಪಾನೀಯಗಳ ಖರೀದಿಸುತ್ತೇವೆ. ನಂತರ ಅದನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರ ಮಾಲಿನ್ಯವಾಗುತ್ತದೆ. ಇದನ್ನು ತಡೆಗಟ್ಟಲು ಪಾಸ್ಲಿಕ್ ಬಾಟಲಿ ಗಾರ್ಡನ್ ಯೋಜನೆ ತುಂಬಾ ಪ್ರಯೋಜನಕಾರಿ. ಇದರಿಂದ ಮನೆಯ ಅಂದವನ್ನೂ ಹೆಚ್ಚಿಸಬಹುದು. ಜತೆಗೆ ಪ್ಲಾಸ್ಟಿಕ್ ವಸ್ತುವಿಗೂ ಪರಿಸರ ಸ್ಪರ್ಶ ನೀಡಬಹುದು.

-ಯತೀಶ್, ಕಿದಿಯೂರು ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net