

ಹುಬ್ಬಳ್ಳಿ: ಇಲ್ಲಿಯ ಕಾರವಾರ ರಸ್ತೆಯಲ್ಲಿರುವ ಮಹಾನಗರ ಪಾಲಿಕೆಯ ಗಾರ್ಬೇಜ್ ಯಾರ್ಡ್ ತೆರವಿಗೆ ಆಗ್ರಹಿಸಿ ಕೈಗೊಂಡಿರುವ ಪ್ರತಿಭಟನೆ ಮುಂದುವರಿದಿದೆ.
ಹೇಸಿಗೆಮಡ್ಡಿ ತೆರವು ಹೋರಾಟ ಸಮಿತಿ ವತಿಯಿಂದ ಅನೇಕ ಸದಸ್ಯರು ಗಾರ್ಬೇಜ್ ಯಾರ್ಡ್ ಗೇಟ್ ಎದುರು ಟೆಂಟ್ ಹಾಕಿಕೊಂಡು ಕುಳಿತು ಘೋಷಣೆ ಕೂಗಿದರು. ಗಾರ್ಬೇಜ್ ಯಾರ್ಡ್ಗೆ ಯಾವುದೇ ಕಸದ ವಾಹನಗಳು ಹೋಗದಂತೆ ತಡೆದರು.
ಪ್ರತಿಭಟನಾಕಾರರಿಗೆ ಹೆದರಿ ಮಹಾನಗರ ಪಾಲಿಕೆಯ ಕಸದ ವಾಹನಗಳು ಮೂರನೇ ದಿನವೂ ಒಳಗೆ ಹೋಗಲಿಲ್ಲ. ಬದಲಾಗಿ ಧಾರವಾಡದ ಯಾರ್ಡ್ ಗೆ ಕಳಿಸಲಾಗಿದೆ. ಶೀಘ್ರ ಕಾರವಾರ ರಸ್ತೆಯ ಗಾರ್ಬೇಜ್ ಯಾರ್ಡ್ ನಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಕ್ರಮ ಕೈಗೊಳ್ಳಬೇಕು. ಆಗಲೇ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ಸಮಿತಿ ಅಧ್ಯಕ್ಷ ನಾಗರಾಜ ಗೌರಿ ಹೇಳಿದರು.
ಗಾರ್ಬೇಜ್ ಯಾರ್ಡ್ ನಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಶಾಸಕರು, ಮಹಾನಗರ ಪಾಲಿಕೆಯ ಸದಸ್ಯರು, ಮೇಯರ್, ವಿರೋಧ ಪಕ್ಷದ ನಾಯಕರು ಎಲ್ಲರಿಗೂ ಪತ್ರ ಬರೆಯಲಾಗಿದೆ. ಪಕ್ಷಾತಿತ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕೆಂದು ಜನಪ್ರತಿನಿಧಿಗಳಿಗೆ ಕೋರಲಾಗಿದೆ.
ಕಸಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಹಳೇಹುಬ್ಬಳ್ಳಿ ಜನರು ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣ ಮಾಡಲು ಹೇಸಿಗೆ ಮಡ್ಡಿ ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಕಸದಿಂದ ಈ ಭಾಗದಲ್ಲಿ ಉಂಟಾಗುತ್ತಿರುವ ಮಾಲಿನ್ಯದ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ನಾಗರಾಜ ಗೌರಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ರಘುನಾಥ್ ಮಾಡಳ್ಳಿ, ರಜಾಕ ಕತಿಬ್, ಅಬ್ದುಲ್ ಸತ್ತಾರ್ ಕತಿಬ್, ನಾಮದೇವ್ ರಂಗರೇಜ್, ಅಬ್ದುಲ್ ಮುನಾಫ್ ಮಲ್ಲಾಡಿ, ಯೂಸುಫ್ ಪಂತೋಜಿ, ಹಸನ್ ಧಾರವಾಡ, ಮುಬಾರಕ್ ಶಿರಹಟ್ಟಿ ಇತರರು ಪಾಲ್ಗೊಂಡಿದ್ದರು.