ಕಸದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ, ಗ್ಯಾಸ್ ಘಟಕಕ್ಕೆ ನೀರಿನ ಬರ!

IMG-20230626-WA0021.jpg
Published on

ಜಗದೀಶ ಹೊಂಬಳಿ ಬೆಳಗಾವಿ
ಕಸದಿಂದ ವಿದ್ಯುತ್ ಶಕ್ತಿ ಉತ್ಪಾದಿಸುವುದಕ್ಕಾಗಿ ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ನಿರ್ಮಾಣ ಮಾಡಿರುವ ಬಯೋ ಗ್ಯಾಸ್ ಘಟಕವು ನೀರಿಲ್ಲದ ಕಾರಣ ಈವರೆಗೂ ಕಾರ್ಯಾರಂಭವಾಗಿಲ್ಲ.
1.28 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಾಣ ಮಾಡುವುದಕ್ಕೆ ಎರಡು ವರ್ಷಗಳ ಹಿಂದೆ ಯೋಜನೆ ರೂಪಿಸಿದ್ದರು. 2023ರ ಮಾರ್ಚ್ ವೇಳೆ ಘಟಕವು ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿತ್ತು. ಈಗ ಮೂರು ತಿಂಗಳಿಂದ ಘಟಕ ಆರಂಭಿಸಬೇಕೆಂದರೆ ನೀರು ಲಭ್ಯವಾಗುತ್ತಿಲ್ಲ. ಹೀಗಾಗಿ ಮಹತ್ವದ ಯೋಜನೆಯೊಂದು ನೀರಿಲ್ಲದೇ ಅನುಷ್ಠಾನವಾಗುತ್ತಿಲ್ಲ.
ಬೆಳಗಾವಿ ತರಕಾರಿ ಮಾರುಕಟ್ಟೆಯಲ್ಲಿ ಪ್ರತಿದಿನ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುಮಾರು 5 ಟನ್ ಕಸ ಸಂಗ್ರಹವಾಗುತ್ತದೆ. ಪಾಲಿಕೆಗೆ ಪ್ರತಿದಿನ ಈ ಕಸ ವಿಲೇವಾರಿ ಮಾಡುವುದು ತಲೆನೋವಾಗಿತ್ತು. ಈಗ ಕಸ ನಿರ್ವಹಣೆ ಬದಲು, ಕಸವನ್ನೇ ಬಳಸಿ ಕೃತಕವಾಗಿ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಲಾಗಿತ್ತು.
ಪಾಲಿಕೆಯ 15ನೇ ಹಣಕಾಸು ಯೋಜನೆಯ 5 ಕೋಟಿ ರೂಪಾಯಿ ಪೈಕಿ 1.28 ಕೋಟಿ ರೂ. ವೆಚ್ಚದಲ್ಲಿ ‘ಕಸದಿಂದ ವಿದ್ಯುತ್ ಉತ್ಪಾದನೆ ಪ್ಲಾಂಟ್’ ನಿರ್ಮಾಣ ಮಾಡಿದ್ದಾರೆ. ಕಸದಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಎಪಿಎಂಸಿ ಆವರಣದ ಬೀದಿ ದೀಪಗಳಿಗೆ ಸರಬರಾಜು ಮಾಡುವುದಕ್ಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇದರಿಂದ ಎಪಿಎಂಸಿಗೆ ವಿದ್ಯುತ್ ಶುಲ್ಕ ಹೊರೆ ತಗ್ಗಲಿದೆ. ಪ್ರತಿದಿನ 5 ಟನ್ ಕಸದಿಂದ ವಿದ್ಯುತ್ ಉತ್ಪಾದನೆ ಜತೆ ಗೊಬ್ಬರ ಉತ್ಪಾದಿಸುವುದಕ್ಕೂ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರತಿದಿನ 100 ಕೆ.ಜಿ. ಗೊಬ್ಬರ ತಯಾರಿಸಿ, ರೈತರಿಗೆ ನೀಡುವ ಉದ್ದೇಶ ಹೊಂದಿದೆ. ಘಟಕ ನಿರ್ಮಾಣದಿಂದ ಎಪಿಎಂಸಿಯಲ್ಲಿ ಕಸ ವಿಲೇವಾರಿ ತಾಪತ್ರೆಯ ತಪ್ಪಲಿದೆ. ಪರಿಸರ ಸಂರಕ್ಷಣೆ, ಪರಿಸರ ಸ್ವಚ್ಛತೆಯ ಭಾಗವಾಗಿ ಈ ಯೋಜನೆ ಮುಂದುವರಿಯಲಿದೆ.

5 ಸಿಬ್ಬಂದಿಗೆ ನಿರ್ವಹಣೆ ಜವಾಬ್ದಾರಿ:
ಪಾಲಿಕೆ ನಿರ್ಮಿಸುತ್ತಿರುವ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಐದು ಸಿಬ್ಬಂದಿ ನೇಮಕ ಮಾಡಿ, ನಿರ್ವಹಣೆ ಜವಾಬ್ದಾರಿ ವಹಿಸಲಿದ್ದಾರೆ. ಇದರಲ್ಲಿ ಇಬ್ಬರು ಪ್ಲಾಂಟ್ ಆಪರೇಟರ್, ಮೂವರು ಸಹಾಯಕರನ್ನಾಗಿ ನೇಮಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇವರು ಪ್ರತಿದಿನ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಎಪಿಎಂಸಿ ವಹಿವಾಟಿನ ವೇಳೆ ಇದ್ದು ಕೆಲಸ ನಿರ್ವಹಿಸಲಿದ್ದಾರೆ.
ಆಧಿಕಾರಿ ಪ್ರತಿಕ್ರಿಯೆ: ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶದಿಂದ ಎಪಿಎಂಸಿಯಲ್ಲಿ ಬಯೋ ಗ್ಯಾಸ್ ಘಟಕ ನಿರ್ಮಾಣ ಮಾಡಿದ್ದೇವೆ. ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯೂ ಈಗಾಗಲೇ ಮುಗಿದಿದೆ. ನೀರಿನ ಲಭ್ಯತೆ ಇರದ ಕಾರಣ ಘಟಕ ಆರಂಭವಾಗಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ನೀರು ಪೂರೈಸುವಂತೆ ಕೋರಲಾಗಿದೆ. ಈ ಘಟಕ ನಿರ್ಮಾಣದಿಂದ ಎಪಿಎಂಎಸಿಯಲ್ಲಿ ಪ್ರತಿದಿನ ಸಂಗ್ರಹವಾಗುವ ಕಸ ವಿಲೇವಾರಿ ಕೆಲಸ ಕಡಿಮೆಯಾಗಲಿದೆ.
• ರುದ್ರೇಶ ಘಾಳಿ, ಮಹಾನಗರ ಪಾಲಿಕೆ ಮಾಜಿ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net