ಮೈಸೂರಿನಲ್ಲಿದೆ ಎರಡು ದಶಕಗಳಿಂದ ವಿಲೇವಾರಿಯಾಗದ ಕಸ

mysore-1-55
Published on

ಮೈಸೂರು: ವಿದ್ಯಾರಣ್ಯಪುರಂನಲ್ಲಿರುವ ಸೂಯೇಜ್ ಫಾರಂ ಕಸ ಸಂಗ್ರಹಣಾ ಘಟಕದಲ್ಲಿ 20 ವರ್ಷದಿಂದ ವಿಲೇವಾರಿಯಾಗದೆ ಉಳಿದಿರುವ ಮೈಸೂರಿನ ಅಂದಾಜು 7 ಲಕ್ಷ ಟನ್ ಲೆಗಸಿ ವೇಸ್ಟ್ (ಪಾರಂಪರಿಕ ತ್ಯಾಜ್ಯ) ತೆರವಿಗೆ ಜಾರಿಗೊಳಿಸುತ್ತಿರುವ ಯೋಜನೆಗೆ ಅನುಮೋದನೆ ದೊರೆತು ಹಲವು ತಿಂಗಳು ಕಳೆದಿವೆ. ಆದರೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹೀಗಾಗಿ ಈ ಸಮಸ್ಯೆ ಮೈಸೂರು ನಗರದ ನೈರ್ಮಲ್ಯ, ಆರೋಗ್ಯದ ದೃಷ್ಟಿಯಿಂದ ಬಹುದೊಡ್ಡ ಕಂಟಕವಾಗಿ ಮುಂದುವರಿದಿದೆ.

ಮೈಸೂರಿನಲ್ಲಿ ನಿತ್ಯವೂ 500 ಟನ್ ಕಸ ಉತ್ಪತ್ತಿಯಾಗುತ್ತದೆ. ಅದರಲ್ಲಿ 250 ಟನ್ ಕಸ ವಿಲೇವಾರಿಯಾಗುತ್ತಿದೆ. ನಿತ್ಯ 200 ಟನ್ ಕಸ ಹಾಗೆಯೇ ಬಾಕಿ ಉಳಿಯುತ್ತಿದೆ. ಸುಮಾರು 20 ವರ್ಷಗಳಿಂದ ಹೀಗೆ ಬಾಕಿ ಉಳಿದಿದೆ. ಈ ಕಸವನ್ನು ವಿಲೇವಾರಿ ಮಾಡುವ ಬಗ್ಗೆ ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಆರಂಭದಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 14 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಗೊಳಿಸಲಾಗಿತ್ತು. ಟೆಂಡರ್ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿತ್ತು.

ಆದರೆ, ಸಂಪೂರ್ಣ ವೈಜ್ಞಾನಿಕವಾಗಿ ಕಸ ವಿಲೇವಾರಿ ಆಗಬೇಕಿರುವ ಹಿನ್ನೆಲೆಯಲ್ಲಿ 59 ಕೋಟಿ ರೂ.ಗಳ ಪರಿಷ್ಕೃತ ಡಿಪಿಆರ್ ಸಿದ್ಧಪಡಿಸಿ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವ ಕುರಿತು ಚುನಾವಣೆ ನೀತಿ ಸಂಹಿತೆ ಜಾರಿಗೂ ಮುನ್ನಾ ದಿನ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಸಮ್ಮುಖ ನಡೆದ ಸಭೆಯಲ್ಲಿ ಯೋಜನೆಗೆ ಅನುಮೋದನೆ ದೊರೆತಿದೆ. ಇದರಿಂದಾಗಿ ಹತ್ತಾರು ವರ್ಷದಿಂದ ಪರಿಸರಕ್ಕೆ ಮಾರಕವಾಗಿರುವ ಹಾಗೂ ಸ್ಥಳೀಯರ ಆರೋಗ್ಯಕ್ಕೆ ಕಂಟಕವಾಗಿರುವ ಈ ಸಮಸ್ಯೆಯು ಪರಿಹಾರದ ಹಂತ ತಲುಪಿತ್ತು.

ವಿಳಂಬ ಏಕೆ ?

2 ಕೋಟಿ ರೂ.ವರೆಗಿನ ಟೆಂಡರ್ ಅನ್ನು ಜಿಲ್ಲಾಧಿಕಾರಿ ಹಂತದಲ್ಲಿ, 5 ಕೋಟಿ ರೂ.ವರೆಗಿನ ಟೆಂಡರ್ ಅನ್ನು ವಿಭಾಗೀಯ ಮಟ್ಟದಲ್ಲಿ ಅನುಮೋದನೆ ಪಡೆಯಬಹುದು. ಆದರೆ ಈ ಯೋಜನೆ 59 ಕೋಟಿ ರೂ. ಆಗಿರುವುದರಿಂದ ಪಾಲಿಕೆ ಹಂತದಲ್ಲಿ ತಾಂತ್ರಿಕ ಹಾಗೂ ಆರ್ಥಿಕ ಟೆಂಡರ್ ಪ್ರಕ್ರಿಯೆ ನಡೆಸಿ ಅದನ್ನು ಸರ್ಕಾರಕ್ಕೆ ಕಳುಹಿಸಿ ಸರ್ಕಾರದಿಂದಲೇ ಅನುಮತಿ ಪಡೆಯಬೇಕಿದೆ. ಹೀಗಾಗಿ ಕಳೆದ ಏಪ್ರಿಲ್‌ನಲ್ಲೇ ಸರಕಾರ ಅನುಮೋದನೆ ನೀಡಿದರೂ ನಂತರ ಚುನಾವಣೆ ನೀತಿ ಸಂಹಿತೆ ಘೋಷಣೆ ಆಯಿತು.

ಅದಾದ ನಂತರ ಹೊಸ ಸರ್ಕಾರ ಅಧಿಕಾರಕ್ಕೆ ಬಂತು. ಬಿಜೆಪಿ ಸರ್ಕಾರದ ಕಡೇ ಮೂರು ತಿಂಗಳ ಅವಧಿಯಲ್ಲಿ ಅನುಮೋದನೆ ನೀಡಿರುವ ಯೋಜನೆಗಳನ್ನು ತಡೆ ಹಿಡಿಯಲು ಸೂಚನೆ ನೀಡಿತು. ಇದೀಗ ಮತ್ತೆ ಸ್ಥಳೀಯರಿಂದ ಒತ್ತಾಯ ಹೆಚ್ಚಾಗಿರುವುದರಿಂದ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಒಂದೆರಡು ದಿನಗಳ ಹಿಂದೆ ತಾಂತ್ರಿಕ ಟೆಂಡರ್ ಪೂರ್ಣಗೊಳಿಸಲಾಗಿದೆ. ಶೀಘ್ರವೇ ಆರ್ಥಿಕ ಟೆಂಡರ್ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿ ಸರ್ಕಾರಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.

ಯೋಜನೆ ಅನುಷ್ಠಾನ ಹೇಗೆ?

ಯೋಜನೆಯಂತೆ 7 ಲಕ್ಷ ಮೆಟ್ರಿಕ್ ಟನ್ ಕಸದಲ್ಲಿರುವ ಗೊಬ್ಬರ, ಮಣ್ಣು, ಲೋಹ, ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ವಿಂಗಡಣೆ ಮಾಡಲಾಗುತ್ತದೆ. ನಂತರ ಉಪಯುಕ್ತವಾದ ಮರುಬಳಕೆ ವಸ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ ಈ ಕಸದ ರಾಶಿಯಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಸೇರಿದೆ. ಇದನ್ನು ಸಿಮೆಂಟ್ ತಯಾರಿಕೆ ಕಾರ್ಖಾನೆಗೆ ಇಂಧನವಾಗಿ ಬಳಕೆ ಮಾಡಲು ನೀಡಲಾಗುತ್ತದೆ. ತನ್ಮೂಲಕ ಕಸದ ರಾಶಿ ತೆರವುಗೊಳಿಸಲಾಗುತ್ತದೆ.

ಆದರೆ ಮೈಸೂರು ಸುತ್ತಲ 300 ರಿಂದ 400 ಕಿ.ಮೀ. ವ್ಯಾಪ್ತಿಯಲ್ಲಿ ಸಿಮೆಂಟ್ ತಯಾರಿಕೆ ಕಾರ್ಖಾನೆಗಳಿಲ್ಲ. ಹೀಗಾಗಿ ದೂರದ ರಾಯಚೂರು, ಕಲಬುರ್ಗಿವರೆಗೆ ಪ್ಲಾಸ್ಟಿಕ್ ಸಾಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಹತ್ತಾರು ವರ್ಷಗಳಿಂದ ವಿಲೇವಾರಿಯಾಗದೆ ಬಾಕಿ ಉಳಿದಿರುವ ಕಸವನ್ನು ತೆರವುಗೊಳಿಸುವ ಯೋಜನೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ತಾಂತ್ರಿಕ, ಆರ್ಥಿಕ ಟೆಂಡರ್ ಪ್ರಕ್ರಿಯೆಗೆ ಶೀಘ್ರವೇ ಸರ್ಕಾರದಿಂದ ಅನುಮತಿ ಪಡೆದು ಕೆಲಸ ಆರಂಭಿಸುತ್ತೇವೆ.

ಅಶಾದ್ ಉರ್ ರೆಹಮಾನ್ ಷರೀಫ್, ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net