

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೀಪದ ಕೆಳಗೆ ಕತ್ತಲು ಎಂಬ ನಾಣ್ಣುಡಿಯಂತೆ ಗ್ರಾಮಾಂತರ ಜಿಲ್ಲೆಯ ಶಕ್ತಿ ಕೇಂದ್ರ ಜಿಲ್ಲಾಡಳಿತಭವನ ಆವರಣದಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ಜಿಲ್ಲೆಯಲ್ಲಿ ಕಸ ನಿರ್ವಹಣೆ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಜಿಲ್ಲಾ ಪಂಚಾಯಿತಿ ಕಚೇರಿ ಮಗ್ಗುಲಲ್ಲೆ ರಾಶಿ ರಾಶಿ ಕಸ ಸುರಿಯುತ್ತಿದ್ದರೂ ಜಿಲ್ಲಾ ಪಂಚಾಯಿತಿಗೆ ಇದರ ಬಗ್ಗೆ ಅರಿವೆ ಇಲ್ಲದಂತಾಗಿದೆ.
ಡಿಸಿ ಪ್ರವೇಶದ್ವಾರದಲ್ಲೇ ಕಸದ ಸ್ವಾಗತ
ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ಚಪ್ಪರದಕಲ್ಲಿನಲ್ಲಿರುವ ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಕಸ ವಿಲೇವಾರಿ ಸಮಸ್ಯೆ ತಲೆದೂರಿದೆ. ಇದು ದಿನೇ ದಿನೆ ಹೆಚ್ಚುತ್ತಿದ್ದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಅದರಲ್ಲೂ ಜಿಲ್ಲಾಧಿಕಾರಿಗಳು ಅವರ ಕಚೇರಿಗೆ ಆಗಮಿಸುವ ಪ್ರವೇಶ ದ್ವಾರದ ಸಮೀಪದಲ್ಲೇ ಪ್ಲಾಸ್ಟಿಕ್ ಮಿಶ್ರಿತ ಕಸದ ರಾಶಿ ಕಂಡುಬರುತ್ತಿರುವುದು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಪ್ರತಿನಿತ್ಯ ಜಿಲ್ಲಾಡಳಿತ ಭವನದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಜಿಲ್ಲಾಧಿಕಾರಿಗಳ ಕಾರು ನಿಲುಗಡೆ ಸಮೀಪದ 100 ಮೀಟರ್ ಅಂತರದಲ್ಲೇ ತಂದು ಸುರಿಯಲಾಗುತ್ತಿದೆ. ಅದು ರಾಶಿಯಾದ ಮೇಲೆ ಯಾವುದೋ ಒಂದು ದಿನ ವಿಲೇವಾರಿ ಮಾಡಲಾಗುತ್ತಿದೆ. 15 ದಿನಗಳಿಂದ ಇಲ್ಲಿ ಕಸದ ರಾಶಿ ಬಿದ್ದಿದ್ದರೂ ಜಿಲ್ಲಾಡಳಿತ ನಿರ್ವಹಣೆ ಸಿಬ್ಬಂದಿ ಈ ಬಗ್ಗೆ ಕಾಳಜಿ ತೋರುತ್ತಿಲ್ಲ.
ಕಸ ವಿಂಗಡಿಸುವುದಿಲ್ಲ
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕಸದ ಘಟಕ ನಿರ್ಮಾಣ ಕಾರ್ಯ ನಡೆಯುತ್ತಿದೆ, ಪ್ರತಿ ಗ್ರಾಮಗಳಲ್ಲಿ ಹಸಿ ಹಾಗೂ ಒಣ ಕಸ ವಿಂಗಡಿಸುವಂತೆ ಜಿಲ್ಲಾ ಪಂಚಾಯಿತಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ರೂಪಿಸುತ್ತಿದೆ. ಆದರೆ ಜಿಲ್ಲಾ ಪಂಚಾಯಿತಿ ಕಚೇರಿಯ ಮಗ್ಗಲಿನಲ್ಲೇ ಕಸ ಮಿಶ್ರಣವಾಗುತ್ತಿದ್ದರೂ ಈ ಬಗ್ಗೆ ಜಿಪಂ ಮುಗುಮ್ಮಾಗಿದೆ. ಕಾರ್ಯಕ್ರಮಗಳಲ್ಲಿ ವ್ಯವಸ್ಥೆ ಮಾಡಲಾದ ಊಟ, ಉಪಾಹಾರದ ವೇಳೆ ಉಳಿಯುವ ಆಹಾರ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಮಿಶ್ರಣವಾಗುತ್ತಿದೆ. ಪ್ಲಾಸ್ಟಿಕ್ ಲೋಟ ನಿಷೇಧವಿದ್ದರೂ ಜಿಲ್ಲಾಡಳಿತ ಭವನದಲ್ಲಿ ಮಾತ್ರ ಈ ನಿಯಮ ಅನ್ವಯವಾಗುತ್ತಿಲ್ಲ.
ಪುಷ್ಪಗುಚ್ಛ, ಟೀ ಕಪ್ ರಾಶಿ
ಕಂದಾಯ ಇಲಾಖೆ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 38ಕ್ಕೂ ಹೆಚ್ಚು ಇಲಾಖೆಗಳು ಕಾರ್ಯನಿರ್ವಹಿಸುವ ಜಿಲ್ಲಾಡಳಿತ ಭವನದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಸಣ್ಣಪುಟ್ಟ ಕಾರ್ಯಕ್ರಮ ನಡೆಯುತ್ತಿರುತ್ತವೆ, ಅಧಿಕಾರಿಗಳಿಗೆ ಬೀಳ್ಕೊಡುಗೆ, ಸನ್ಮಾನ ಮತ್ತಿತರ ಕಾರ್ಯಕ್ರಮಗಳು ಸಾಮಾನ್ಯ. ಅಧಿಕಾರಿಗಳನ್ನು ಸನ್ಮಾನಿಸಲು ತರುವ ಪುಷ್ಪಗುಚ್ಛಗಳು ಬಳಿಕ ಈ ಕಸದ ರಾಶಿ ಸೇರುತ್ತಿವೆ, ಹಾಗೇ ಎಲ್ಲ ಇಲಾಖೆಗಳಲ್ಲಿ ಕಾಫಿ, ಟೀ ತರಿಸುವ ಪರಿಪಾಠ ಸಾಮಾನ್ಯವಾಗಿದ್ದು, ಕಾಫಿ, ಟೀ ಕುಡಿದ ಲೋಟಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಕಂಡುಬರುತ್ತಿದೆ. ಡಸ್ಟ್ ಬಿನ್‌ಗಳಲ್ಲಿ ಶೇಖರಣೆಯಾದ ಇಂಥ ಲೋಟಗಳನ್ನು ಸಿಬ್ಬಂದಿ ತಂದು ಇದೇ ಕಸದ ರಾಶಿಗೆ ಎಸೆಯುತ್ತಿದ್ದಾರೆ. ಇನ್ನು ಭಾಗಶಃ ಅಧಿಕಾರಿವರ್ಗ ಹಾಗೂ ಇಲ್ಲಿಗೆ ಬರುವ ಸಾರ್ವಜನಿಕರು ಕುಡಿಯಲು ಬಿಸ್ಲೆರಿ ಬಾಟಲಿಗಳನ್ನೇ ಬಳಸುವುದರಿಂದ ಬಳಸಿದ ಬಾಟಲಿಗಳೂ ಸಹ ಕಸದ ರಾಶಿಗೆ ಸೇರ್ಪಡೆಯಾಗುತ್ತಿದೆ, ಜಿಲ್ಲಾ ಪಂಚಾಯಿತಿ ಸಭಾಂಗಣ, ಜಿಲ್ಲಾಡಳಿತಭವನದಲ್ಲಿನ ಆಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ವ್ಯವಸ್ಥೆ ಮಾಡುವ ಊಟ, ಉಪಾಹಾರದ ತಟ್ಟೆಲೋಟಗಳಿಗೂ ಇದೇ ಜಾಗವಾಗಿದೆ.
ಜಿಲ್ಲಾಡಳಿತಭವನ ಎಂದರೆ ಗ್ರಾಮಾಂತರ ಜಿಲ್ಲೆಗೆ ಮುಕುಟಮಣಿ ಇದ್ದಂತೆ, ಇಡೀ ಜಿಲ್ಲೆಯನ್ನು ನಿಯಂತ್ರಿಸುವ ಶಕ್ತಿ ಕೇಂದ್ರದಲ್ಲೇ ಹುಳುಕು ಕಂಡುಬರುವುದು ಸರಿಯಲ್ಲ, ಇದು ಮೇಲಧಿಕಾರಿಗಳ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ, ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಭವನದ ನಿರ್ವಹಣೆ ಹೊಣೆ ಹೊತ್ತಿರುವವರಿಗೆ ಎಚ್ಚರಿಕೆ ನೀಡಿ ಅವ್ಯವಸ್ಥೆ ಸರಿಪಡಿಸಬೇಕು.
ಮಹೇಂದ್ರ ದೇವನಹಳ್ಳಿ ರೈತ
ನಿಯಮಗಳೇನಿದ್ದರೂ ಜನಸಾಮಾನ್ಯರಿಗೆ ಅಧಿಕಾರಿಗಳಿಗಲ್ಲ ಎಂಬುದು ಇಲ್ಲಿನ ಕಸದ ರಾಶಿಯೇ ತೋರಿಸುತ್ತಿದೆ. ಜಿಲ್ಲೆಯ ಶಕ್ತಿ ಕೇಂದ್ರದ ಆವರಣದಲ್ಲೇ ಕಸದ ರಾಶಿ ನಿರ್ಮಾಣವಾಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಭವನದ ನಿರ್ವಹಣೆ ಹೊಣೆ ಹೊತ್ತವರು ಕಸ ವಿಲೇವಾರಿ ಮಾಡಿ ಜಿಲ್ಲಾಡಳಿತ ಭವನದ ಗೌರವ ಕಾಪಾಡಬೇಕು.
ವೆಂಕಟೇಶ್ ಕೊಯಿರಾ ಗ್ರಾಮಸ್ಥ