

ಪ್ರಶಾಂತ ಭಾಗ್ವತ, ಉಡುಪಿ
ಅನ್ಯರು ಎಸೆಯುವ ಮನೆಗಳ ತ್ಯಾಜ್ಯದಿಂದ ನಗರಸಭೆ ವ್ಯಾಪ್ತಿಯ ಸಗ್ರಿ ವಾರ್ಡ್ನ ಜನರು ರೋಸಿ ಹೋಗಿದ್ದಾರೆ. ಊರಿನ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಲು ಇದೀಗ ರಾತ್ರಿ ವೇಳೆಯಲ್ಲಿಯೂ ಸಹ ಇಲ್ಲಿನ ಜನರು ಕಾವಲು ಕಾಯುತ್ತಿದ್ದಾರೆ.
ಕದ್ದುಮುಚ್ಚಿ ಕಸ ಎಸೆದು ಹೋಗುವವರನ್ನು ಹಿಡಿದು, ಅವರನ್ನು ನಗರಸಭೆಗೆ ಒಪ್ಪಿಸುವ ಕಾರ್ಯವನ್ನು ಸಗ್ರಿಯ ಜನರೇ ಈಗ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ವಾಹನ ಚಾಲಕರಾಗಿರುವ ಉಪೇಂದ್ರ ವಾಗ್ಳೆ ಎಂಬವರ ನೇತೃತ್ವದಲ್ಲಿ ಹಾಗೂ ಗೆಳೆಯರ ಬಳಗ (ರಿ.) ಸಗ್ರಿ ಇದರ ಸದಸ್ಯರು ನಸುಕಿನಲ್ಲಿ ಹಾಗೂ ರಾತ್ರಿಯಲ್ಲಿ ಕಸ ಎಸೆಯುವವರನ್ನು ಹಿಡಿಯಲು ಕಾವಲು ಹಾಕುತ್ತಿದ್ದಾರೆ.
ಉಡುಪಿ-ಮಣಿಪಾಲ ಮುಖ್ಯ ಹೆದ್ದಾರಿಯಲ್ಲಿ ಲಕ್ಷ್ಮೀಂದ್ರ ನಗರದ ಮೂಲಕ ಪೆರಂಪಳ್ಳಿ ಹಾಗೂ ಮಣಿಪಾಲಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹಾಗೂ ಹತ್ತಿರದ ಮಾರ್ಗ ಸಗ್ರಿಯ ರಸ್ತೆಯೇ ಆಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಜನರು ತಮ್ಮ ಮನೆಯ ಕಸವನ್ನು ಇಲ್ಲಿಯೇ ಎಸೆದು ಹೋಗುತ್ತಾರೆ. ಕಾರು ಹಾಗೂ ಬೈಕ್ಗಳಲ್ಲಿ ಮನೆಯ ಹಳೆಯ ಬಟ್ಟೆ, ತಲೆದಿಂಬು, ಮದ್ಯದ ಬಾಟಲಿ ಹಾಗೂ ಮಾಂಸದ ತ್ಯಾಜ್ಯಗಳನ್ನು ವಾಹನ ಚಲಾಯಿಸುತ್ತಲೇ ಎಸೆದು ಪರಾರಿಯಾಗುತ್ತಾರೆ.
ಕಸ ಎಸೆಯುವವರಿಗೆ ಭಯವಾಗಲಿ ಎಂದು ಇಲ್ಲಿ ನಾಗನ ಸಂಚಾರ ಇದೆ ಎಂಬ ಪೋಸ್ಟರ್ ಸಹ ಹಾಕಿದ್ದಾರೆ. ಆದರೂ ಸಹ ಜನ ಮನೆಯ ತ್ಯಾಜ್ಯ, ಕಸ, ಮಾಂಸದ ತ್ಯಾಜ್ಯ ಹಾಗೂ ಮದ್ಯದ ಖಾಲಿ ಬಾಟಲಿಯನ್ನು ಸಗ್ರಿ ರಸ್ತೆ ಅಕ್ಕಪಕ್ಕದ ಚರಂಡಿಗೆ ಎಸೆಯುತ್ತಿದ್ದಾರೆ. ಇದರಿಂದ ಮಳೆಯ ನೀರು ಚರಂಡಿಯಲ್ಲಿ ಹರಿಯದೇ, ರಸ್ತೆಯ ಮೇಲೆ ಹರಿದು, ಸಂಚಾರಕ್ಕೂ ತೊಡಕಾಗುತ್ತಿದೆ. ಹೀಗಾಗಿ ಊರಿನ ಸ್ವಚ್ಛತೆಗಾಗಿ ಸ್ಥಳೀಯರಾದ ರಾಜೇಂದ್ರ ಕೆ., ಮನೋಹರ ಪೂಜಾರಿ, ಸುಂದರ್ ನಾಯಕ್, ಶ್ರೀಧರ್ ನಾಯಕ್, ನಾರಾಯಣ ನಾಯಕ್ ಹೀಗೆ ಅನೇಕರು ಪಾಳಿಯಲ್ಲಿ ಕಾವಲು ಮಾಡುತ್ತಿದ್ದಾರೆ.
ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ ದಿನದ ಕಸ ವಿಲೇವಾರಿಯ ಜವಾಬ್ದಾರಿಯನ್ನು ಸ್ವಸಹಾಯದ ಗುಂಪುಗಳಿಗೆ ವಹಿಸಲಾಗಿದೆ. ನಗರಸಭೆ ವತಿಯಿಂದ ಅವರಿಗೆ ವಾಹನ ನೀಡಲಾಗಿದ್ದು, ವಾರದಲ್ಲಿ 4 ದಿನ ಹಸಿ ಕಸ ಹಾಗೂ 2 ದಿನ ಒಣ ಕಸ ವಿಲೇವಾರಿ ಮಾಡಬೇಕಿದೆ. ಮನೆಯ ಕಸ ಸಂಗ್ರಹಣೆಗೆ ತಿಂಗಳಿಗೆ 50 ರೂ. ಹಾಗೂ ಸಣ್ಣಪುಟ್ಟ ಹೋಟೆಲ್ಗಳಿಗೆ 300 ರೂ.ನಿಂದ ಸಾವಿರ ರೂ. ದರ ಇದೆ. ದೊಡ್ಡ ಪ್ರಮಾಣದ ಹೋಟೆಲ್ಗಳಿಗೆ 5 ಸಾವಿರದಿಂದ 8 ಸಾವಿರ ರೂಪಾಯಿಗೂ ಅಧಿಕ ಹಣ ಪಡೆಯುತ್ತಾರೆ. ಹೀಗಾಗಿ ನಗರದಲ್ಲಿ ಮಾತ್ರ ನಿತ್ಯ ಹಸಿಕಸ ವಿಲೇವಾರಿ ಮಾಡುತ್ತಿದ್ದು, ಮನೆಮನೆಗೆ ನಿತ್ಯ ಭೇಟಿ ಕೊಡುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಕಸ ಸಂಗ್ರಹಣೆಗೆ ವಾಹನ ಬಂದಾಗ ಕೆಲವು ಮನೆಯವರು ಕೆಲಸದ ನಿಮಿತ್ತ ಹೊರ ಹೋಗಿರುತ್ತಾರೆ. ಹೀಗಾಗಿ ಅವರೂ ಸಹ ಮನೆಯ ಕಸವನ್ನು ರಸ್ತೆಗೆ ಎಸೆಯುತ್ತಿದ್ದಾರೆ. ಇದು ವಾರ್ಡ್ಗಳಲ್ಲಿ ನಿತ್ಯವೂ ಕಸದ ವಿಲೇವಾರಿಗೆ ಸಂಬಂಧಿಸಿ ಆಗುತ್ತಿರುವ ನೈಜ ಸಮಸ್ಯೆಯಾಗಿದೆ.
ಕಸ ಎಸೆಯುವವರನ್ನು ಹಿಡಿದುಕೊಟ್ಟವರಿಗೆ ನಗರಸಭೆಯವರು ಬಹುಮಾನ ನೀಡುವ ಕ್ರಮ ಜಾರಿಗೊಳಿಸಬೇಕು. ಅಲ್ಲದೆ, ಯಾರು ಕಸ ಎಸೆದು ಸಿಕ್ಕಿಹಾಕಿಕೊಳ್ಳುತ್ತಾರೋ ಅವರಿಂದಲೇ ಆ ರಸ್ತೆ ಮಾರ್ಗದಲ್ಲಿ ಇರುವ ಎಲ್ಲ ಕಸವನ್ನೂ ಎತ್ತಿಸಬೇಕು. ಮತ್ತೆಂದೂ ಅವರು ಎಲ್ಲಿಯೂ ಕಸ ಎಸೆಯದ ರೀತಿಯಲ್ಲಿ ನಗರಸಭೆ ಕ್ರಮ ಕೈಗೊಳ್ಳಬೇಕು. ಉಮೇಶ್ ನಾಯಕ್. ಮಾಜಿ ಅಧ್ಯಕ್ಷ, ಗೆಳೆಯರ ಬಳಗ (ರಿ.) ಸಗ್ರಿ
ಫಾಸ್ಟ್ ಫುಡ್ನವರು, ಕೆಲ ಹೋಟೆಲ್ನವರು, ಕೋಳಿ ಫಾರಂನವರು ಹಾಗೂ ಮಣಿಪಾಲದಲ್ಲಿ ಇರುವ ಹೊರ ರಾಜ್ಯದ ವಿದ್ಯಾರ್ಥಿಗಳೂ ಸಹ ಸಗ್ರಿ ರಸ್ತೆಯಲ್ಲಿ ತ್ಯಾಜ್ಯ ಎಸೆಯುತ್ತಾರೆ. ಸ್ಥಳೀಯರೊಂದಿಗೆ ನಾವೂ ಸಹ ಆಗಾಗ ಗಸ್ತು ನಡೆಸಿ ಕಸ ಎಸೆಯುವವರನ್ನು ಹಿಡಿದು, ದಂಡ ಹಾಕುತ್ತಿದ್ದೇವೆ. ವಿದ್ಯಾವಂತರೇ ಪರಿಸರದಲ್ಲಿ ಕಸ ಎಸೆಯುತ್ತಿರುವುದು ನಿಜಕ್ಕೂ ಖೇದದ ಸಂಗತಿ. ಜನರೆಲ್ಲ ನಗರಸಭೆ ವಾಹನಕ್ಕೇ ಕಸ ನೀಡಿ ಸಹಕರಿಸಬೇಕು. ಮನೋಹರ್ ಕರ್ಕಡ್. ವಾರ್ಡ್ಗಳ ಸೂಪರ್ವೈಸರ್. ನಗರಸಭೆ, ಉಡುಪಿ