

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ನಿಧಾನ ಆಗಿರುವುದರಿಂದ ಆ ಭಾಗದ ಸುತ್ತಮುತ್ತ ನಿರ್ಮಾಣವಾಗುತ್ತಿರುವ ಬಿಲ್ಡಿಂಗ್‌ಗಳಿಂದ ಕಟ್ಟ್ಟಡ ತ್ಯಾಜ್ಯ ಸಹಿತ ವಿವಿಧ ಬಗೆಯ ಕಸವನ್ನು ತಂದು ಸುರಿಯುತ್ತಿರುವ ಹೊಸ ಸಮಸ್ಯೆಯನ್ನು ಸೈಟ್‌ದಾರರು ಎದುರಿಸುತ್ತಿದ್ದಾರೆ.
ಬಿಡಿಎ ಕೆಂಪೇಗೌಡ ಬಡಾವಣೆಯಲ್ಲಿ ಮೂರ್ಣ ಪ್ರಮಾಣದಲ್ಲಿ ರಸ್ತೆಗಳನ್ನು ನಿರ್ಮಿಸಿಲ್ಲ. ಒಂಬತ್ತು ಬ್ಲಾಕ್‌ಗಳಲ್ಲಿ ಅರ್ಧಕ್ಕಿಂತ ಕಡಿಮೆಯಷ್ಟು ರಸ್ತೆಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲೂ ಎಲ್ಲದಕ್ಕೂ ಡಾಂಬರು ಹಾಕಲಾಗಿಲ್ಲ. ಕೆಲವೆಡೆ ಸಂಪರ್ಕ ಮುಂದುವರಿಸಲು ಸಾಧ್ಯವಾಗದ ಕಡೆ ರೋಡ್‌ಗಳು ಅಪೂರ್ಣಗೊಂಡಿವೆ. ಇಂತಹ ಸ್ಥಳಗಳಲ್ಲಿ ಕಾಮಗಾರಿ ನಡೆಯದಿರುವ ಕಾರಣ ದೂರದ ಸ್ಥಳಗಳಿಂದ ಟ್ರ್ಯಾಕ್ಟರ್, ವ್ಯಾನ್‌ಗಳಲ್ಲಿ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಇದರ ಅರಿವು ಇಲ್ಲದ ಪ್ರಾಧಿಕಾರವು ಯಾರ ವಿರುದ್ಧವೂ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.
ಇತ್ತೀಚಿನ ಮಳೆಗಾಲದ ವೇಳೆ ಮಣ್ಣಿನ ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಸ ಸುರಿಯುವಿಕೆ ಕಡಿಮೆಗೊಂಡಿತ್ತು. ಇದೀಗ ಮತ್ತೆ ಯಥಾಪ್ರಕಾರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿದು ಹೋಗುತ್ತಿದ್ದಾರೆ. ಇದರಿಂದ ಸೈಟ್‌ದಾರರು ತಮ್ಮ ನಿವೇಶನ ಸ್ಥಳ ವೀಕ್ಷಣೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ಮನೆ ನಿರ್ಮಿಸುವವರಿಗೂ ಸಮಸ್ಯೆಯಾಗಿದೆ. ಕೆಲ ದಿನಗಳ ಹಿಂದೆ ವೈದ್ಯಕೀಯ ತ್ಯಾಜ್ಯವನ್ನು ತಂದು ಸುರಿದಿರುವುದು ಹೊಸ ಬೆಳೆವಣಿಗೆ ಎಂದು ಸೈಟ್‌ದಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಬಡಾವಣೆಯ 1ರಿಂದ 4, 8 ಹಾಗೂ 9ನೇ ಬ್ಲಾಕ್‌ಗಳಲ್ಲಿ ರಸ್ತೆಗಳು ಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ. ವರ್ಷದಿಂದೀಚಿಗೆ ಸಮರ್ಪಕವಾದ ಕಾಮಗಾರಿಯೇ ನಡೆಯುತ್ತಿಲ್ಲ. ಟೆಂಡರ್‌ನಂತೆ ಕೆಲಸ ಮಾಡಲು ಗುತ್ತಿಗೆದಾರರು ಕಾರ್ಯ ನಿರ್ವಹಿಸದಿರುವುದನ್ನು ಬಿಡಿಎ ಅಧಿಕಾರಿಗಳು ಪ್ರಶ್ನಿಸುತ್ತಿಲ್ಲ. ಈ ಕಾರಣದಿಂದ ರಸ್ತೆ ಸಂಪರ್ಕದ ಜಾಲ ಬೆಸೆಯಲು ಸಾಧ್ಯವಾಗದಿರುವುದು ಈ ಸಮಸ್ಯೆಗೆ ಕಾರಣವೆಂದು ನಾಡಪ್ರಭು ಕೆಂಪೇಗೌಡ ಲೇಔಟ್ ವೇದಿಕೆಯ ಪದಾಧಿಕಾರಿಗಳು ದೂರಿದ್ದಾರೆ.