

ಧನಂಜಯ ಗುರುಪುರ
ರಸ್ತೆ ಬದಿ, ಜನವಸತಿ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೊದಲ ಆಡಳಿತಾವಧಿಯಲ್ಲಿ ಜಾರಿಗೆ ತಂದಿದ್ದ ಸ್ವಚ್ಛ ಭಾರತ ಎಂಬ ಅಪೂರ್ವ ಯೋಜನೆಯನ್ನೇ ಅಣಕವಾಡುವಂತೆ ವಿವಿಧ ಕಡೆ ಕಸ, ತ್ಯಾಜ್ಯ ಕಂಡುಬರುತ್ತಿದೆ. ಇಡೀ ಸ್ವಚ್ಛ ಭಾರತ ಪರಿಕಲ್ಪನೆಯ ಸದುದ್ದೇಶವನ್ನೇ ತಲೆಕೆಳಗೆ ಮಾಡುವಂತೆ ರಸ್ತೆ ಬದಿ ತ್ಯಾಜ್ಯದ ರಾಶಿಯೇ ಬೀಳುತ್ತಿವೆ. ನಮ್ಮ ಪ್ರದೇಶ, ನಮ್ಮ ಜಾಗ, ನಮ್ಮ ರಸ್ತೆ ಇವೆಲ್ಲವನ್ನೂ ಸ್ವಚ್ಛವಾಗಿಡಬೇಕೆಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಎಲ್ಲೆಂದರಲ್ಲಿ ಕಸ, ತ್ಯಾಜ್ಯ ಬಿಸಾಡುವ, ರಾಶಿ ಹಾಕುವ ಪ್ರವೃತ್ತಿ ಮತ್ತೆ ಕಾಣಲಾರಂಭಿಸಿವೆ. ಜನರ, ಅಧಿಕಾರಿಗಳ ಜಾಣಕುರುಡುತನ ಒಂದು ಒಳ್ಳೆಯ ಉದ್ದೇಶವನ್ನೇ ಬುಡಮೇಲು ಮಾಡುತ್ತಿದೆ.
ಗುರುಪುರ, ಕಂದಾವರ, ಗಂಜಿಮಠ, ಉಳಾಯಿಬೆಟ್ಟು ಮತ್ತು ಪಡುಪೆರಾರ ಗ್ರಾಪಂ ವ್ಯಾಪ್ತಿಯಲ್ಲಿ ‘ಸ್ವಚ್ಛ ಭಾರತ್ ಮಿಷನ್’ ಅಥವಾ ತ್ಯಾಜ್ಯ ವಿಲೇವಾರಿ ಯೋಜನೆ ಹಳ್ಳ ಹಿಡಿಯುತ್ತಿದೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳು, ಹೇಳಿಕೆಗಳು ಲಭ್ಯವಾಗಿವೆ. ಈ ಪಂಚಾಯಿತಿ ವ್ಯಾಪ್ತಿಯ ಒಳರಸ್ತೆಗಳ ಸಹಿತ ಹೆದ್ದಾರಿ ಬದಿ ತ್ಯಾಜ್ಯ ತುಂಬಿ ತುಳುಕುತ್ತಿದ್ದರೂ ಸಂಬಂಧಿತ ಪಂಚಾಯಿತಿಗಳ ಅಧಿಕಾರಿಗಳು ಹೇಳಿಕೆಗಳಿಗೆ ಮಾತ್ರ ಸೀಮಿತರಾಗುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಗುರುಪುರ ಗ್ರಾಪಂ ವ್ಯಾಪ್ತಿಯ ಮಠದಗುಡ್ಡೆ ಸೈಟ್ ಪ್ರದೇಶದಲ್ಲಿರುವ ಮುಖ್ಯ ಒಳರಸ್ತೆಯ ಒಂದು ಕಿ.ಮೀ. ಅಂತರದಲ್ಲಿ ಲೋಡ್‌ಗಟ್ಟಲೆ ತ್ಯಾಜ್ಯ, ಕಸದ ಗಂಟು-ಮೂಟೆಗಳು ಅಲ್ಲಲ್ಲಿ ರಾಶಿ ಬಿದ್ದಿದ್ದು, ಎಲ್ಲೆಡೆ ಬೀರುವ ದುರ್ನಾತದಿಂದ ಇಲ್ಲಿ ವಾಹನ ಸವಾರಿ ಅಥವಾ ನಡೆದಾಡುವುದು ಕಷ್ಟಕರವಾಗಿದೆ. ರಸ್ತೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾದ ಜಾಗದಲ್ಲೇ ತ್ಯಾಜ್ಯದ ರಾಶಿ ಇದೆ. ರಸ್ತೆಯಲ್ಲಿ ಸಾಗುವ ದೂರದ ಹೋಟೆಲ್, ಅಂಗಡಿ ಮಾಲೀಕರು ಅಥವಾ ಸಿಬ್ಬಂದಿ ರಾತ್ರಿ ಹೊತ್ತಲ್ಲಿ ಮೀನು, ಮಾಂಸಗಳ ಉಳಿಕೆ ತ್ಯಾಜ್ಯ ಎಸೆಯುತ್ತಿದ್ದಾರೆ. ಸ್ಥಳೀಯರೂ ತಮ್ಮಿಂದಾದಷ್ಟು ತ್ಯಾಜ್ಯ ದೇಣಿಗೆ ನೀಡುತ್ತಿದ್ದಾರೆ. ಹಾಗಾಗಿ ಇದು ‘ಮಠದಗುಡ್ಡೆ ತ್ಯಾಜ್ಯ ರಸ್ತೆ’ ಎಂಬ ಅಭಿದಾನ ಪಡೆದುಕೊಂಡಿದೆ.
ಗಂಜಿಮಠ ಗ್ರಾಪಂ ವ್ಯಾಪ್ತಿಯ ಕೈಕಂಬ-ಮಳಲಿ, ಸೂರಲ್ಪಾಡಿ ಒಳರಸ್ತೆಗಳು, ಕಂದಾವರ ಗ್ರಾಪಂ ವ್ಯಾಪ್ತಿಯ ಒಳರಸ್ತೆಗಳು, ಪಡುಪೆರಾರ ಗ್ರಾಪಂನ ಸುಂಕದಕಟ್ಟೆ, ಪೆರಾರ, ಕಿನ್ನಿಕಂಬಳ ಮತ್ತಿತರ ಮುಖ್ಯ ಹಾಗೂ ಒಳರಸ್ತೆಗಳು, ಉಳಾಯಿಬೆಟ್ಟು ಗ್ರಾಪಂ ವ್ಯಾಪ್ತಿಯ ಉಳಾಯಿಬೆಟ್ಟು ರಸ್ತೆ ಕೆಲ ಸಮಯದಿಂದ ತಾಜ್ಯ ರಸ್ತೆಗಳಾಗಿ ಮಾರ್ಪಾಡಾಗಿವೆ. ಈ ಗ್ರಾಪಂ ವ್ಯಾಪ್ತಿಯಲ್ಲಿ ಮನೆಮನೆಯಿಂದ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇದ್ದರೂ ಗ್ರಾಮೀಣ ಭಾಗದ ಜನರು ಪಂಚಾಯಿತಿ ವಾಹನಗಳಿಗೆ ತ್ಯಾಜ್ಯ ನೀಡದೆ ರಸ್ತೆ ಬದಿಯಲ್ಲಿ ಎಸೆಯುತ್ತಾರೆ ಎಂಬ ದೂರುಗಳು ಕೇಳಿಬಂದಿವೆ. ರಸ್ತೆಯಲ್ಲಿ ಸಾಗುವ ವಾಹನ ಸವಾರರೂ ತ್ಯಾಜ್ಯ ಎಸೆಯುತ್ತಾರೆ ಎಂಬ ಆರೋಪವಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸಾಕಷ್ಟು ಅನುದಾನ ಬರುತ್ತಿದ್ದರೂ ಸಮರ್ಪಕ ಬಳಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಿ.ಸಿ. ಕ್ಯಾಮರಾಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ನಾಮಕಾವಸ್ತೆ ಎನಿಸಿವೆ. ದೂರುಗಳು ಕೇಳಿಬಂದಾಗ ಎಚ್ಚೆತ್ತುಕೊಳ್ಳುವ ಕೆಲವು ಪಂಚಾಯಿತಿ ಅಧಿಕಾರಿಗಳು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಒಂದರೆಡು ಮಂದಿಗೆ ದಂಡ ಹೇರಿ ಪುಕ್ಸಟ್ಟೆ ಪ್ರಚಾರ ಪಡೆದುಕೊಳ್ಳುತ್ತಾರೆ. ಪಂಚಾಯಿತಿ ಸದಸ್ಯರಲ್ಲಿ ಪ್ರಶ್ನಿಸಿದರೆ ‘ಸರ್ಕಾರ ಮನಸ್ಸು ಮಾಡಿದರೆ ತ್ಯಾಜ್ಯ ವಿಲೇವಾರಿ ದೊಡ್ಡ ವಿಷಯವೇ ಅಲ್ಲ’ ಎಂಬಂತೆ ಉತ್ತರಿಸುತ್ತಾರೆ!
ಗುರುಪುರ ಹೊಸ ಸೇತುವೆ ಮತ್ತು ಹಳೇ ಸೇತುವೆ ಮಧ್ಯದ ಭಾಗ ತ್ಯಾಜ್ಯಗುಂಡಿಯಾಗಿದ್ದರೂ ಇತ್ತ ಗ್ರಾಪಂ ಅಥವಾ ಮನಪಾ ಅಧಿಕಾರಿಗಳು ಸುಳಿದಾಡುತ್ತಿಲ್ಲ. ಸೇತುವೆ ಮೇಲಿಂದ ಸಾಗುವ ವಾಹನ ಚಾಲಕರು ಲ್ಗುಣಿ ನದಿಗೆ ಬೇಕಾಬಿಟ್ಟಿ ತ್ಯಾಜ್ಯ ಎಸೆಯುತ್ತಾರೆ. ಇಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ ಅಥವಾ ನಿರ್ವಹಣೆಯನ್ನು ಕೇಳುವವರೇ ಇಲ್ಲ. ಗಂಜಿಮಠ ಕೈಗಾರಿಕಾ ಪ್ರದೇಶ ಸಹಿತ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಹಾಗೂ ಹೊಸದಾಗಿ ‘ಜಲ ಜೀವನ್’ ಆರಂಭಗೊಳ್ಳಲಿರುವ ಲ್ಗುಣಿ ನದಿ ನೀರು ಕಲುಷಿತಗೊಳ್ಳುತ್ತಿದೆ.
ಸ್ವಚ್ಛ ಭಾರತ್ ಮಿಷನ್ ಆರಂಭಗೊಂಡ 2021ರ ಅವಧಿಯಲ್ಲಿ ಬಹುತೇಕ ಎಲ್ಲ ಪಂಚಾಯಿತಿಗಳು ಸ್ವಚ್ಛತೆ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಿದ್ದವು. ಕೆಲವು ಪಂಚಾಯಿತಿಗಳು ಸರ್ಕಾರದಿಂದ ಹೆಚ್ಚುವರಿ ಅನುದಾನ ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಗೊಂಡಿದ್ದವು. ಆ ಹೊತ್ತಿಗೆ ಎಲ್ಲ ಪಂಚಾಯಿತಿಗಳಲ್ಲಿ ಸ್ವಚ್ಛತೆಯದ್ದೇ ಕಾರ್ಯಕ್ರಮಗಳು! ವರ್ಷಗಳು ಉರುಳಿದಂತೆ ಇವೆಲ್ಲವೂ ಮೂಲೆಗುಂಪಾಗಿ ಬಹುತೇಕ ಎಲ್ಲ ಪಂಚಾಯಿತಿ, ಮನಪಾ ವ್ಯಾಪ್ತಿಯ ಒಳ ರಸ್ತೆಗಳು, ಎನ್‌ಎಚ್, ರಾಜ್ಯ ಹೆದ್ದಾರಿಗಳ ನಿರ್ಜನ ಪ್ರದೇಶಗಳು ತ್ಯಾಜ್ಯ ಗುಂಡಿಗಳಾಗಿ ಪರಿವರ್ತನೆಗೊಂಡಿವೆ. ಈ ವಿಷಯದಲ್ಲಿ ಇನ್ನಾದರೂ ಅಧಿಕಾರಿ ವರ್ಗ ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹ.
ಉಳಾಯಿಬೆಟ್ಟು, ಪೆರ್ಮಂಕಿ ಒಳ ರಸ್ತೆಯ ಉದ್ದಗಲಕ್ಕೂ ಭಾರಿ ಪ್ರಮಾಣದ ತ್ಯಾಜ್ಯ ರಾಶಿ ಬಿದ್ದಿದೆ. ನಾಯಿ, ಜಾನುವಾರುಗಳು ತ್ಯಾಜ್ಯ ಎಳೆದಾಡುವ ದೃಶ್ಯ ಸಾಮಾನ್ಯವಾಗಿವೆ. ದುರ್ವಾಸನೆ ಹೇಳತೀರದು. ಪಂಚಾಯಿತಿ ಆಡಳಿತ ಇತ್ತ ಗಮನಿಸುವ ಅಗತ್ಯವಿದೆ. ಕೇವಲ ಸ್ವಚ್ಛ ಭಾರತ್ ಕಾರ್ಯಕ್ರಮ ನಡೆಸಿದರೆ ಸಾಲದು, ಅದಕ್ಕೆ ತಕ್ಕಂತೆ ಕ್ರಿಯಾಶೀಲ ಕಾರ್ಯಯೋಜನೆ ಹಮ್ಮಿಕೊಳ್ಳಬೇಕಾಗುತ್ತದೆ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಅವಶ್ಯ.- ಏಕನಾಥ ಶೆಟ್ಟಿ ಪೆರ್ಮಂಕಿ, ಸ್ಥಳೀಯ ನಿವಾಸಿ ಹಿಂದೊಮ್ಮೆ ತ್ಯಾಜ್ಯ ವಿಲೇವಾರಿಯಲ್ಲಿ ಮುಂಚೂಣಿಯಲ್ಲಿದ್ದ ಗುರುಪುರ ಪಂಚಾಯಿತಿ ವ್ಯಾಪ್ತಿಯ ಹೆದ್ದಾರಿ ಮತ್ತು ಒಳ ರಸ್ತೆಗಳ ಬದಿಯಲ್ಲಿ ಸಾಕಷ್ಟು ತ್ಯಾಜ್ಯ ತುಂಬಿಕೊಂಡಿದೆ. ಒಮ್ಮೆ ವಿಲೇವಾರಿ ಮಾಡಿ ಮರಳಿದ ಬೆನ್ನಲ್ಲೇ ಮತ್ತೆ ತ್ಯಾಜ್ಯ ರಾಶಿ ಬೀಳುತ್ತದೆ. ಸಿಸಿ ಕ್ಯಾಮರಾ ಸರಿಯಾಗಿ ನಿರ್ವಹಿಸಿ, ತ್ಯಾಜ್ಯ ಎಸೆಯುವವರ ವಿರುದ್ಧ ದಂಡ ಹೇರಬೇಕು. ಈ ಬಗ್ಗೆ ಪಂಚಾಯಿತಿಯ ಬಹುತೇಕ ಸಾಮಾನ್ಯ ಸಭೆಗಳಲ್ಲಿ ಚರ್ಚೆ ನಡೆದಿದೆ.- ಯಶವಂತ ಶೆಟ್ಟಿ, ಗುರುಪುರ ಗ್ರಾಪಂ ಸದಸ್ಯ