ದೊಡ್ಡಬಳ್ಳಾಪುರಕ್ಕೆ ಮತ್ತೊಂದು ಕಸದ ಗುಮ್ಮ!

gar
Published on

 ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ದೊಡ್ಡಬಳ್ಳಾಪುರಕ್ಕೆ ಕಸದ ಗುಮ್ಮನ ಕಾಟ ತಪ್ಪುವ ಲಕ್ಷಣ ಕಂಡುಬರುತ್ತಿಲ್ಲ. ಹಲವು ವರ್ಷಗಳ ಹೋರಾಟ, ಪ್ರತಿಭಟನೆ, ಕಣ್ಣೀರು, ಆಕ್ರೋಶಕ್ಕೆ ಮಣಿದು ಭೂತಾಕಾರವಾಗಿ ಕಾಡುತ್ತಿದ್ದ ಟೆರ್ರಾಾರ್ಮ ಕಸದ ಘಟಕಕ್ಕೆ ಬೀಗ ಬಿದ್ದಿತ್ತು. ಆದರೆ ಮತ್ತೇ ಇದೇ ವ್ಯಾಪ್ತಿಯಲ್ಲಿ 38 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಕಸದ ಘಟಕ ಆರಂಭಕ್ಕೆ ಸಿದ್ದತೆ ನಡೆದಿರುವುದು ದೊಡ್ಡಬಳ್ಳಾಪುರ ತಾಲೂಕಿನ ಜನರಿಗೆ ದುಸ್ವಪ್ನವಾಗಿ ಕಾಡಲಾರಂಭಿಸಿದೆ.

ಬಿಬಿಎಂಪಿಯ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಗ್ರಾಮದಲ್ಲಿ ಸುಮಾರು 38 ಎಕರೆ ಜಮೀನು ಖರೀದಿಸಲು ಸಚಿವ ಸಂಪುಟ ಅಸ್ತು ಎಂದಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಅಪಾರ ಪ್ರಮಾಣದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ವಿಲೇವಾರಿ ಮಾಡಲು ಈ ಜಾಗ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುವುದು ಜನರ ನಿದ್ರೆಗೆಡಿಸಿದೆ. ಟೆರ‌್ರಾಪಾರ್ಮಾ ಒಡೆತನದಲ್ಲಿರುವ ಜಮೀನು ಖರೀದಿ ಸೇರಿ ವಿವಿಧ ಷರತ್ತುಗಳೊಂದಿಗೆ ಕಸದ ಘಟಕ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರುವುದು ಈಗಾಗಲೇ ಈ ಭಾಗದ ಜನರ ಕೆಂಗಣ್ಣಿಗೆ ಕಾರಣವಾಗಿದೆ.

ಸಮಾವೇಶದಲ್ಲಿ ಪ್ರತಿಭಟನೆ ಕಾವು: ದೇವನಹಳ್ಳಿಯಲ್ಲಿ ನಡೆಯಲಿರುವ ಸರ್ಕಾರದ ಎರಡು ವರ್ಷದ ಸಾಧನ ಸಮಾವೇಶದಲ್ಲಿ ದೊಡ್ಡಬೆಳವಂಗಲ ವ್ಯಾಪ್ತಿಯ ರೈತರು ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿದ್ದಾರೆ, ಯಾವುದೇ ಕಾರಣಕ್ಕೂ ಮತ್ತೊಂದು ಕಸದ ಘಟಕ ಆರಂಭಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಬಿಗಿ ನಿಲುವು ತಳಿದಿರುವ ರೈತರು ಸರ್ಕಾರದ ನಿರ್ಧಾರದ ವಿರುದ್ಧ ಹೋರಾಡಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಂಚಾಯಿತಿ ವ್ಯಾಪ್ತಿಯ ಸದಸ್ಯರು ಪಕ್ಷಾತೀಕವಾಗಿ ವಿರೋಧಿಸಲು ಚಿಂತನೆ ನಡೆಸಿದ್ದು ಸಿಎಂ ಸಾಧನ ಸಮಾವೇಶದಲ್ಲಿ ಇದರ ಕಿಡಿ ಹೊತ್ತಿಕೊಳ್ಳಲಿದೆ ಎಂಬ ಮಾತು ಕೇಳಿಬರುತ್ತಿದೆ. ಶಾಸಕ ಧೀರಜ್ ಮುನಿರಾಜು ಸಹ ಸಮಾವೇಶದಲ್ಲಿ ಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಲಿದ್ದು, ದೊಡ್ಡಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತೊಂದು ಕಸದ ಘಟಕ ಆರಂಭಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಲಿದ್ದಾರೆ.

ಟೆರ್ರಾಾರ್ಮಾ ಹಾಗೇ ಇದೆ: ಕಳೆದ ಎರಡ್ಮೂರು ವರ್ಷಗಳ ನಿರಂತರ ಹೋರಾಟದ ಬಳಿಕ ಸ್ಥಳೀಯರ ಹೋರಾಟಕ್ಕೆ ಮಣಿದ ಸರ್ಕಾರ ಟೆರ್ರಾಾರ್ಮಾ ಕಸ ಸಂಸ್ಕರಣಾ ಘಟಕಕ್ಕೆ ಬೀಗ ಹಾಕಿದೆ. ಆದರೆ ಇಲ್ಲಿ ಬೆಟ್ಟದಂತೆ ಸುರಿದಿರುವ ಕಸ ತೆರವಿಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬೇಸಿಗೆ ವೇಳೆ ಆಗಾಗ ಕಸಕ್ಕೆ ಬೆಂಕಿ ಹೊತ್ತಿಕೊಂಡು ಸುತ್ತಮುತ್ತಲ ಗ್ರಾಮದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುತ್ತದೆ, ಮಳೆಗಾಲದಲ್ಲಿ ಕಸ ಕೊಳೆತು ಹರಿಯುವ ಲಿಚೆಟ್ ನೀರಿನ ಗಬ್ಬುವಾಸನೆ ಕಿ.ಮೀಗಟ್ಟಲೆ ಉಸಿರುಗಟ್ಟಿಸುತ್ತಿದೆ. ಇದರ ನಡುವೆ ಮತ್ತೊಂದು ಕಸ ಘಟಕಕ್ಕೆ ಮುಂದಾಗಿರುವುದು ಈ ಭಾಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಆದ ಕಾರಣ ಈ ಕ್ರಮಕ್ಕೆ ಆರಂಭದಿಂದಲೇ ತೀವ್ರ ವಿರೋಧಕ್ಕೆ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯ ಮುಖಂಡರು ಸಜ್ಜಾಗುತ್ತಿದ್ದಾರೆ.

ಬಂಧನ, ಬಿಡುಗಡೆ ಪ್ರಹಸನ: ಟೆರ್ರಾಾರ್ಮಾ ಕಸ ಘಟಕ ಬಂದ್‌ಗಾಗಿ ತಿಂಗಳುಗಟ್ಟಲೆ ಧರಣಿ ಸತ್ಯಾಗ್ರಹಗಳು ನಡೆದಿದ್ದವು, ಪೊಲೀಸರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದವು, ಹಲವರ ಬಂಧನ, ಬಿಡುಗಡೆಯ ಪ್ರಹಸನವೂ ನಡೆದಿತ್ತು. ಅಂದಿನ ಶಾಸಕರಾಗಿದ್ದ ವೆಂಕಟರಮಣಯ್ಯ ಕಡೆಗೂ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಸಿಎಂ ಆದಿಯಾಗಿ ಅಂದಿನ ಉಸ್ತುವಾರಿ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಸೇರಿ ಎಚ್.ಡಿ.ಕುಮಾರಸ್ವಾಮಿ, ಬಿಬಿಎಂಪಿ ಆಯುಕ್ತರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಇದೆಲ್ಲ ಈಗ ಇತಿಹಾಸದ ಪುಟಕ್ಕೆ ಸೇರಿದ್ದರೆ ಮತ್ತೊಂದು ಹೊಸ ಪುಟ ತೆರೆದುಕೊಳ್ಳುವ ಸಾಧ್ಯತೆ ಕಂಡುಬರುತ್ತಿದ್ದು ಈ ಭಾಗದ ರೈತಾಪಿ ಜನರಿಗೆ ಮತ್ತೊಮ್ಮೆ ಕಸದ ಗುಮ್ಮನ ಕಾಟ ಕಾಡತೊಡಗಲಿದೆ.

ಈಗಾಗಲೇ ದೊಡ್ಡಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಕಸ ಘಟಕಗಳನ್ನು ಆರಂಭಿಸುವ ಮೂಲಕ ಈ ಭಾಗದ ಪರಿಸರವನ್ನು ಹಾಳು ಮಾಡಿದ್ದಾರೆ. ಹಲವು ಹೋರಾಟಗಳ ಬಳಿಕ ಟೆರ್ರಾಾರ್ಮಾ ಕಸದ ಘಟಕ ಬಂದ್ ಆಗಿದೆ. ಈಗ ಮತ್ತೊಂದು ಘಟಕ ಆರಂಭಕ್ಕೆ ಸಿದ್ದತೆ ನಡೆದಿರುವುದಕ್ಕೆ ನಮ್ಮ ಕಡೆಯಿಂದ ತೀವ್ರ ವಿರೋಧವಿದೆ. ಏ.27 ರಂದು ದೇವನಹಳ್ಳಿಯಲ್ಲಿ ನಡೆಯಲಿರುವ ಸಿಎಂ ಕಾರ್ಯಕ್ರಮದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಘಟಕ ಆರಂಭಿಸದಂತೆ ಮನವಿ ಮಾಡಲಾಗುವುದು. ನಂತರ ಮುಂದಿನ ಹೆಜ್ಜೆ ಬಗ್ಗೆ ರೂಪುರೇಷೆ ಸಿದ್ದವಾಗಲಿದೆ.

ಧೀರಜ್‌ಮುನಿರಾಜು, ಶಾಸಕ ದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net