ಮಾದರಿ ಗ್ರಾಮ ಪಂಚಾಯಿತಿಗೆ ಕಸದ ಕಂಠಕ

chittakula
Published on

ಕಾರವಾರ: ಹಲ ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ಮೊದಲ ಬಾರಿಗೆ ಹಸಿ ಮತ್ತು ಒಣ ಕಸ ವಿಲೇವಾರಿ ವ್ಯವಸ್ಥೆಯನ್ನು ಜಾರಿ ಮಾಡಿ, ಮಾದರಿ ಗ್ರಾಮ ಪಂಚಾಯಿತಿ ಎಂದು ಗುರುತಿಸಿಕೊಂಡಿದ್ದ ಐತಿಹಾಸಿಕ ಗ್ರಾಮ ಚಿತ್ತಾಕುಲಾಕ್ಕೆ ಈಗ ಕಸದ ಕಂಠಟ ಶುರುವಾಗಿದೆ.

ಮಿತಿಗಿಂತ ಹೆಚ್ಚು ತ್ಯಾಜ್ಯ ಸಂಗ್ರಹವಾಗುತ್ತಿರುವುದರಿಂದ ಗ್ರಾಮ ಪಂಚಾಯಿತಿ ಕಚೇರಿಯ ಪಕ್ಕವೇ ಇರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿರ್ವಗಣೆ ಸಾಧ್ಯವಾಗುತ್ತಿಲ್ಲ. ಘಟಕದ ಪಕ್ಕ 10 ಆಟೋ ಲೋಡ್‌ಗಳಷ್ಟು ಹಸಿ ತ್ಯಾಜ್ಯವನ್ನು ರಾಶಿ ಹಾಕಿಡಲಾಗಿದೆ. ವಿಲೇವಾರಿಗೆ ಹೊಸ ಜಾಗ ಇದುವರೆಗೂ ಮಂಜೂರಾಗಿಲ್ಲ. ಇದರಿಂದ ವಾಹನದ ಮೂಲಕ ಮನೆ, ಮನೆ ಕಸ ಸಂಗ್ರಹ ಬಂದ್ ಮಾಡಲಾಗಿದೆ. ಜನ ಕಂಡ, ಕಂಡಲ್ಲಿ ಕಸ ಎಸೆಯುತ್ತಿದ್ದು, ಊರೆಲ್ಲ ತ್ಯಾಜ್ಯದ ರಾಶಿ ತುಂಬಿದೆ. ಅದಕ್ಕೆ ಮುತ್ತಿಕೊಳ್ಳುವ ಬಿಡಾಡಿ ದನ, ನಾಯಿಗಳ ಕಾಟ ಹೆಚ್ಚಿದೆ.

ಸಮಸ್ಯೆ ಆಗಿದ್ದೆಲ್ಲಿ..?

ಗ್ರಾಪಂ ಕಚೇರಿಯ ಪಕ್ಕದಲ್ಲೇ 2020 ರಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭ ಮಾಡಿ, ಹಸಿ ಕಸದಿಂದ ಗೊಬ್ಬರ ಉತ್ಪಾದನೆಯನ್ನುನ್ನೂ 2021 ರಲ್ಲಿ ಶುರು ಮಾಡಲಾಯಿತು. ಅದರಿಂದ ವಾರ್ಷಿಕ 1 ಲಕ್ಷದವರೆಗೆ ಆದಾಯವನ್ನೂ ಗಳಿಸಲಾಗುತ್ತಿತ್ತು.

ಆದರೆ, ಚಿತ್ತಾಕುಲಾ ವೇಗವಾಗಿ ನಗರವಾಗಿ ಬೆಳೆಯುತ್ತಿದೆ. ಕಾರವಾರ ಶಹರದಲ್ಲಿ ಸೈಟ್ ಹಾಗೂ ಫ್ಲಾಟ್‌ಗಳ ಬೆಲೆ ಹೆಚ್ಚಿದ್ದರಿಂದ ಈಗ ಜನ ಚಿತ್ತಾಕುಲಾದೆಡೆಗೆ ಮುಖ ಮಾಡುತ್ತಿದ್ದಾರೆ. ದಾಖಲೆಗಳಲ್ಲಿ 2011 ರ ಜನಗಣತಿಯಂತೆ ಗ್ರಾಮದಲ್ಲಿ 12,060 ಜನಸಂಖ್ಯೆ ಆದರೆ, ವಾಸ್ತವದಲ್ಲಿ 25 ಸಾವಿರಕ್ಕೂ ಅಽಕ ಜನಸಂಖ್ಯೆ ಇದೆ. ಸುಮಾರು 5 ಸಾವಿರ ಮನೆಗಳಿವೆ. 36 ವಾರ್ಡ್ಗಳಿದ್ದು, 33 ಸದಸ್ಯರಿದ್ದಾರೆ.

ಗ್ರಾಮದಲ್ಲಿ 25 ಬಹು ಮಹಡಿ ಕಟ್ಟಡಗಳಿವೆ. ದೊಡ್ಡ ಹೋಟೆಲ್‌ಗಳು, ಶಾಪಿಂಗ್ ಮಾಲ್‌ಗಳು, ಮೀನು, ಮಟನ್ ಮಾರುಕಟ್ಟೆ ಹೀಗೆ ಅಽಕ ತ್ಯಾಜ್ಯ ಉತ್ಪಾದನೆ ಮಾಡುವ ಸಾಕಷ್ಟು ಕೇಂದ್ರಗಳಿವೆ. ಭಾನುವಾರ ಇಲ್ಲಿ ಸಂತೆಯೂ ನಡೆಯುತ್ತಿದ್ದು, ಅದರಿಂದಲೂ ತ್ಯಾಜ್ಯ ಬರುತ್ತಿದೆ. ಒಟ್ಟಿನಲ್ಲಿ ಚಿತ್ತಾಕುಲಾ ಈಗ ಪಟ್ಟಣವಾಗಿ ಮಾರ್ಪಟ್ಟಿದೆ. ಪ್ರತಿ ದಿನ ಕನಿಷ್ಠ 3 ಕ್ವಿಂಟಾಲ್ ಸಂಗ್ರಹವಾಗುತ್ತದೆ. ಆದರೆ, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಬೇಕಾದ ದೊಡ್ಡ ತ್ಯಾಜ್ಯ ವಿಲೇವಾರಿ ಘಟಕ, ಅಗತ್ಯ ಯಂತ್ರೋಪಕರಣಗಳು, ಸಿಬ್ಬಂದಿ ಇಲ್ಲ. ಇದರಿಂದ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಮಾಡಲಾಗದೇ ಒದ್ದಾಡುತ್ತಿದೆ.

ಅಸ್ವಸ್ಥರಾದ ವಿದ್ಯಾರ್ಥಿಗಳು:

ಗ್ರಾಮ ಪಂಚಾಯಿತಿ ಹಸಿ ಕಸ ವಿಲೇವಾರಿ ಘಟಕದ ಪಕ್ಕದಲ್ಲೇ ಕಾಕರತಳೆ ಎಂಬ ಕೆರೆ ಇದೆ. ಹಸಿ ಕಸದ ಪ್ರಮಾಣ ಹೆಚ್ಚಿದಾಗ ಅದನ್ನು ಪಕ್ಕದ ಕೆರೆಯಲ್ಲೇ ವಿಲೇವಾರಿ ಮಾಡಲಾಗುತ್ತಿತ್ತು ಎಂಬ ಆತಂಕಕಾರಿ ಸಂಗತಿಯನ್ನು ಸ್ವತಃ ಗ್ರಾಪಂ ಮೂಲಗಳೇ ಖಚಿತ ಮಾಡಿವೆ. ನೀರು ತುಂಬಿಕೊAಡಿದ್ದಾಗ ಸಮಸ್ಯೆ ಇರಲಿಲ್ಲ. ಬೇಸಿಗೆಯಲ್ಲಿ ನೀರು ಆರುತ್ತಿದ್ದಂತೆ ವಿಪರೀತ ವಾಸನೆ ಬರಲು ಶುರುವಾಗುತ್ತಿತ್ತು. ಗ್ರಾಮಸ್ಥರು ಇದನ್ನು ವಿರೋಽಸಿ ಧರಣಿ ನಡೆಸಿದರು. ಪರಿಣಾಮ ಕೆರೆಯನ್ನು ಸ್ವಚ್ಛ ಮಾಡಲಾಯಿತು. ನಂತರ ಹಸಿ ಕಸ ವಿಲೇವಾರಿ ಮಾಡಲು ಬೇರೆ ಜಾಗವಿಲ್ಲದೇ ಸಮಸ್ಯೆ ಉಂಟಾಯಿತು. ತಿಂಗಳಿAದ ಇಟ್ಟಿದ್ದ ತ್ಯಾಜ್ಯ ಕೆಟ್ಟ ವಾಸನೆ ಬಂದು ಪಕ್ಕದ ಸದಾಶಿವಗಡ ಹೈಸ್ಕೂಲ್‌ನ ವಿದ್ಯಾರ್ಥಿಗಳು ಎರಡು ವಾರಗಳ ಹಿಂದೆ ಅಸ್ವಸ್ಥರಾಗಿದ್ದರು.

ಇದೆಲ್ಲ ಅವಾಂತರವಾದ ನಂತರ ಗ್ರಾಪಂ ಕಣಸಗಿರಿಯಲ್ಲಿ ಹಸಿ ತ್ಯಾಜ್ಯ ವಿಲೇವಾರಿಗೆ ಜಾಗ ಹುಡುಕಿತ್ತು. ಆದರೆ, ಕಣಸಗಿರಿ ಗ್ರಾಮಸ್ಥರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ದಿನದಿಂದ ದಿನಕ್ಕೆ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ. ಅದನ್ನು ವಿಲೇವಾರಿ ಎಲ್ಲಿ ಮಾಡುವುದು ಎಂಬುದು ತಿಳಿಯದೇ ಗ್ರಾಪಂ ಕಂಗಾಲಾಗಿದೆ.

ಚಿತ್ತಾಕುಲಾ ಗ್ರಾಮ ಪಂಚಾಯಿತಿಗೆ ಹಸಿ ತ್ಯಾಜ್ಯ ವಿಲೇವಾರಿಗೆ ಜಾಗ ಹುಡುಕಿಕೊಡುವಂತೆ ತಹಸೀಲ್ದಾರರಿಗೆ ಪತ್ರ ಬರೆಯಲಾಗಿದೆ. ತಹಸೀಲ್ದಾರರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ದಾಖಲೆ ಹಸ್ತಾಂತರ ಪ್ರಕ್ರಿಯೆ ಜಿಲ್ಲಾಽಕಾರಿಗಳ ಮೂಲಕ ನಡೆಯಬೇಕಿದೆ. ಅಲ್ಲಿಯವರೆಗೆ ಹಸಿಕಸ ವಿಲೇವಾರಿಗೆ ನಗರಸಭೆಗೆ ಮನವಿ ಮಾಡಿದ್ದೇವೆ. ವೀರನಗೌಡ ಪಿ.ಏಗನಗೌಡರ್ ತಾಪಂ ಇಒ ಸದ್ಯ ಹೈಸ್ಕೂಲ್‌ಗೆ ರಜೆ ಇರುವುದರಿಂದ ಕಸದ ಸಮಸ್ಯೆ ತೀವ್ರವಾಗಿಲ್ಲ. ಅಕ್ಟೋಬರ್ 8 ಕ್ಕೆ ಹೈಸ್ಕೂಲ್ ಮರು ಪ್ರಾರಂಭವಾದರೆ ಸಮಸ್ಯೆಯಾಗಬಹುದು. ಅಲ್ಲಿಯವರೆಗೆ ಗ್ರಾಪಂ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕು. ಮಂಗೇಶ ವಾಘ ಸದಾಶಿವಗಡ ಹೈಸ್ಕೂಲ್ ಆಡಳಿತ ಸಮಿತಿ ಕಾರ್ಯದರ್ಶಿ ಉತ್ಪಾದನೆಯಾಗುತ್ತಿರುವ ಕಸಕ್ಕೂ ವಿಲೇವಾರಿ ವ್ಯವಸ್ಥೆಗೂ ಹೊಂದಾಣಿಕೆಯಾಗುತ್ತಿಲ್ಲ. ಕಾಕರತಳೆ ಕೆರೆ ಸ್ವಚ್ಛ ಮಾಡಲಾಗಿದೆ. ಭಾನುವಾರದ ತರಕಾರಿ ತ್ಯಾಜ್ಯಗಳನ್ನು ರೈತರಿಗೆ ನೀಡಲಾಗುತ್ತಿದೆ. ಹಸಿ ತ್ಯಾಜ್ಯ ವಿಲೇವಾರಿಗೆ ಹೊಸ ಜಾಗ ಹುಡುಕಲಾಗುತ್ತಿದೆ. ಶೀಘ್ರದಲ್ಲಿ ತ್ಯಾಜ್ಯ ಸಮಸ್ಯೆ ಬಗೆಹರಿಸಲಾಗುವುದು. ಸೂರಜ್ ಕುಮಾರ ದೇಸಾಯಿ ಗ್ರಾಪಂ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net