ಮಧುರೆ ಕೆರೆಗೆ ಕಸದ ವಿಷ ಪ್ರಾಶನ

852
Published on

ಕನಸವಾಡಿ ಗ್ರಾಪಂ ನಿರ್ಲಕ್ಷ್ಯ- ಗಬ್ಬುನಾರುತ್ತಿದೆ ಮಧುರೆಕ್ರಾಸ್-ದೊಡ್ಡಬೆಳವಂಗಲ ರಸ್ತೆ

ಚೇತನ್ ಮಧುರೆ: ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡುವಂತೆ ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಗಳು ಹರಸಾಹಸ ನಡೆಸುತ್ತಿದ್ದಾರೆ. ಆದರೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಅನೈರ್ಮಲ್ಯ ತಾಂಡವವಾಡುವಂತಾಗಿದೆ.
ಜಿಲ್ಲೆಯಲ್ಲಿಯೇ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಮಧುರೆಯ ಶನಿ ಮಹಾತ್ಮದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಮಧುರೆ ಕೆರೆ ಒಡಲು ಕಸದ ರಾಶಿಯಿಂದ ಹುಣ್ಣಾಗುತ್ತಿದೆ. ಹಸಿ ಹಾಗೂ ಒಣ ಕಸದಿಂದ ಈ ಭಾಗದಲ್ಲಿ ಗಬ್ಬುವಾಸನೆ ಹರಡಿದೆ. ಮಧುರೆ ಕೆರೆ ಒಡಲು ಕಸದ ಬ್ಲ್ಯಾಕ್ ಸ್ಟಾಟ್ ಆಗಿ ರೂಪಾಂತರಗೊಂಡಿದ್ದರೂ ಇಲ್ಲಿನ ಕನಸವಾಡಿ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಮದ್ಯದಂಗಡಿ ಮಾಂಸದಗಂಡಿ ತ್ಯಾಜ್ಯ: ಮಧುರೆ ಹೋಬಳಿ ವ್ಯಾಪ್ತಿ ಸೇರಿ ದೊಡ್ಡಬಳ್ಳಾಪುರ ಭಾಗದ ಕೋಳಿ ಮಾಂಸದ ಅಂಗಡಿ ಹಾಗೂ ಮದ್ಯದಂಗಡಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ರಾಶಿಯನ್ನು ರಾತ್ರಿ ವೇಳೆ ಕೆರೆ ಒಡಲಿಗೆ ತಂದು ಸುರಿಯಲಾಗುತ್ತಿದೆ. ಇದಕ್ಕೆ ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ಸಹಕಾರವಿದೆ ಎಂಬ ಆರೋಪ ಕೇಳಿಬರುತ್ತಿದೆ. ಇನ್ನು ಮದ್ಯದಂಗಡಿಗಳಲ್ಲಿನ ಪ್ಲಾಸ್ಟಿಕ್‌ನ ನೀರಿನ ಬಾಟಲಿ, ಟೆಟ್ರಾಪ್ಯಾಕ್ ಸೇರಿ ಅಲ್ಲಿನ ಸಕಲ ತ್ಯಾಜ್ಯವೂ ಇಲ್ಲಿಗೆ ಬಂದು ಸೇರುತ್ತಿದೆ. ಇದರೊಂದಿಗೆ ರಸ್ತೆ ಬದಿಯ ಹೋಟೆಲ್‌ಗಳಲ್ಲಿನ ಆಹಾರ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಹಸಿಕಸ ಒಣ ಕಸ ಸೇರಿ ಪ್ರಾಣಿಜನ್ಯ ತ್ಯಾಜ್ಯದ ರಾಶಿ ಎಲ್ಲವೂ ಮಿಶ್ರಣಗೊಂಡು ಕೆರೆ ಒಡಲು ಗಬ್ಬುನಾರುವಂತಾಗಿದೆ.
ಪಿಡಿಒ ವಿರುದ್ಧ ಆರೋಪ: ಕನಸವಾಡಿ ಪಂಚಾಯಿತಿ ವ್ಯಾಪ್ತಿಯ ಈ ಜಾಗದಲ್ಲಿ ಕಸದ ಸಮಸ್ಯೆ ಬಗ್ಗೆ ಕೆಲವು ಗ್ರಾಪಂ ಸದಸ್ಯರು ಸೇರಿ ಪಂಚಾಯಿತಿ ವ್ಯಾಪ್ತಿಯ ಹಲವು ಸಾರ್ವಜನಿಕರು ಪಂಚಾಯಿತಿ ಪಿಡಿಒ ಅವರಿಗೆ ಹಲವು ಬಾರಿ ದೂರು ಸಲ್ಲಿಸಿದ್ದಾರೆ. ಇಲ್ಲಿ ಕಸ ಹಾಕದಂತೆ ಮುಂಜಾಗ್ರತಾ ಕ್ರಮವಹಿಸಬೇಕು, ಈಗ ಶೇಕರಣೆಯಾಗಿರುವ ಕಸ ತೆರವುಗೊಳಿಸಬೇಕು ಎಂಬುದು ಹಲವು ದಿನಗಳ ಒತ್ತಾಯವಾಗಿದೆ. ಆದರೆ ಈ ಬಗ್ಗೆ ಕನಸವಾಡಿ ಅಭಿವೃದ್ಧಿ ಅಧಿಕಾರಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ತ್ಯಾಜ್ಯ ವಿಂಗಡಣೆ ಇಲ್ಲ
ಜಿಲ್ಲೆಯಲ್ಲಿ ಡೆಂಘೆ, ಚಿಕೂನ್‌ಗುನ್ಯಾ ಮತ್ತಿತರ ಸಾಂಕ್ರಾಮಿಕ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಲವು ಕ್ರಮ ಕೈಗೊಳ್ಳುತ್ತಿದೆ. ಆದರೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ನಡೆಯುತ್ತಿದೆ ಆದರೆ ವಿಂಗಡನೆ ಇಲ್ಲ. ಹಸಿ ಹಾಗೂ ಒಣ ಕಸದ ಮಿಶ್ರಣವನ್ನು ಆಟೋದಲ್ಲಿ ತುಂಬಿಕೊಂಡು ಒಂದೆಡೆ ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕಸ ವಿಂಗಡಣೆ, ಸಂಸ್ಕರಣೆಗೆ ಒತ್ತು ನೀಡುವಂತೆ ಜಿಲ್ಲಾ ಪಂಚಾಯಿತಿ ಹಲವು ಸೂಚನೆಗಳನ್ನು ನೀಡುತ್ತಿದ್ದರೂ ಕನಸವಾಡಿ ಪಂಚಾಯಿತಿ ಇದಕ್ಕೆ ತದ್ವಿರುದ್ಧ ಎಂಬ ಮಾತು ಕೇಳಿಬರುತ್ತಿದೆ.

ಅಂತರ್ಜಲಕ್ಕೆ ವಿಷ
ಕೆರೆ ಒಡಲಿನಲ್ಲಿಯೇ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಕೊಳವೆಬಾವಿ ಇದೆ, ಕಸದ ವಿಷಕಾರಿ ಲಿಜೆಟ್ ಅಂತರ್ಜಲ ಸೇರುವಂತಾಗಿದೆ. ಇದರಿಂದ ನೀರು ವಿಷಯುಕ್ತವಾಗಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಬೆಂಕಿ ಹಚ್ಚುತ್ತಾರೆ
ಮದ್ಯದಂಗಡಿ, ಹೋಟೆಲ್ ಮತ್ತಿತರ ಕಡೆಗಳಿಂದ ರಾಶಿಗಟ್ಟಲೆ ಕಸ ತಂದು ಸುರಿಯುವುದಲ್ಲದೆ, ಕಸಕ್ಕೆ ಬೆಂಕಿ ಹಾಗೂ ಕಸ ಕರಗಿಸುವ ಕೃತ್ಯ ನಡೆಯುತ್ತಿದೆ. ಕಸದ ರಾಶಿಗೆ ಬೆಂಕಿ ಹಚ್ಚಿದ ವೇಳೆ ಹೊರಹೊಮ್ಮುವ ವಿಷಕಾರಿ ಹೊಗೆ ಈ ಪ್ರದೇಶದ ತುಂಬಾ ಹರಡುತ್ತದೆ, ಇಲ್ಲಿನ ಶನಿಮಹಾತ್ಮ ದೇಗುಲಕ್ಕೆ ಬರುವ ಸಾವಿರಾರು ಭಕ್ತರು ಮೂಗು ಮುಚ್ಚಿಕೊಂಡು ಓಡಾಡುವ ದೃಶ್ಯ ಕಂಡುಬರುತ್ತಿದೆ.


"ಈ ಭಾಗದಲ್ಲಿನ ಕಸದ ಸಮಸ್ಯೆ ಬಗ್ಗೆ ಹಲವು ಬಾರಿ ಕನಸವಾಡಿ ಪಂಚಾಯಿತಿ ಪಿಡಿಒ ಅವರಿಗೆ ದೂರು ನೀಡಿದ್ದೇವೆ, ಕಸ ತಂದು ಸುರಿಯುದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಅನುಷ್ಟಾನ ಮಾಡುವಂತೆ ಮನವಿ ಮಾಡಿದ್ದೇವೆ, ಇಲ್ಲಿನ ಕಸ ತೆರವುಗೊಳಿಸುವಂತೆ ಹಲವು ಬಾರಿ ಒತ್ತಾಯಿಸಿದ್ದೇವೆ ಆದರೆ ಇದುವರೆಗೆ ಪಿಡಿಒ ನಮ್ಮ ಮನವಿ, ಒತ್ತಾಯವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ."
ವಿಜಯ್‌ಕುಮಾರ್, ಗ್ರಾಪಂ ಸದಸ್ಯ

"ಕಸದ ಸಮಸ್ಯೆ ಎನ್ನುವುದು ಈ ಭಾಗದಲ್ಲಿ ದೊಡ್ಡಮಟ್ಟದಲ್ಲಿ ಬಿಗಡಾಯಿಸಿದೆ. ಗ್ರಾಪಂ ಅಧಿಕಾರಿಗಳು ಕ್ರಮಕ್ಕೆ ಮುಂದಾಗದ ಹೊರತು ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಜಿಪಂ ಸಿಇಒ ಅವರು ವಿವಿಧ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡುತ್ತಾರೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಇಲ್ಲಿನ ಪಂಚಾಯಿತಿಗೆ ಒಮ್ಮೆ ಭೇಟಿ ನೀಡಿದರೆ ಇಲ್ಲಿನ ಅವ್ಯವಸ್ಥೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಇದೆ."
ಮಂಜುನಾಥ್, ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net