ಟೆರ್ರಾಾರ್ಮಾ ಕಸ ಘಟಕ ಪುನಾರಂಭ?

gar
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ತಾಲೂಕು ಗುಂಡ್ಲಹಳ್ಳಿಯಲ್ಲಿ ಬಂದ್ ಆಗಿದ್ದ ಟೆರ್ರಾಾರ್ಮಾ ಕಸ ವಿಲೇವಾರಿ ಘಟಕ ಪುನಾರಂಭವಾಗುವ ಸುದ್ದಿ ಮುನ್ನೆಲೆಗೆ ಬಂದಿದ್ದು, ಸ್ಥಳೀಯರಿಂದ ಸರ್ಕಾರದ ವಿರುದ್ಧ ಮತ್ತೊಂದು ಹೋರಾಟ ಸದ್ದು ಮಾಡಲಾರಂಭಿಸಿದೆ.

ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳು ನಿರಂತರ ಧರಣಿ ಸತ್ಯಾಗ್ರಹ, ಪ್ರತಿಭಟನೆ ಹಾಗೂ ತೀವ್ರ ಆಕ್ರೋಶಕ್ಕೆ ಮಣಿದ ಸರ್ಕಾರ 2014 ರಲ್ಲಿ ಟೆರ್ರಾಾರ್ಮಾ ಕಸ ಘಟಕವನ್ನು ಬಂದ್ ಮಾಡಿತ್ತು. ಇದೀಗ 11 ವರ್ಷದ ಬಳಿಕ ಇದಕ್ಕೆ ಮರುಜೀವ ಬಂದಿದೆ ಎನ್ನಲಾಗಿದ್ದು, ಕಸ ಘಟಕ ಇದೀಗ ಅಧಿಕೃತವಾಗಿ ಬಿಬಿಎಂಪಿ ಕೈವಶವಾಗುತ್ತಿದೆ ಇದರಿಂದ ಮತ್ತೆ ಘಟಕ ಕಾರ್ಯಾರಂಭ ಮಾಡಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು ಸ್ಥಳೀಯ ಗ್ರಾಮಸ್ಥರ ನಿದ್ರೆಗೆಡಿದೆ.

ಅಧಿಕಾರಿಗಳ ಸಭೆ ತಂದ ಆತಂಕ:

ಟೆರ್ರಾಾರ್ಮಾ ಕಸ ಘಟಕದ 52 ಎಕರೆ ಸರ್ಕಾರಿ ಜಮೀನನ್ನು ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಬಿಬಿಎಂಪಿಗೆ ಹಸ್ತಾಂತರಿಸುವ ಸಂಬಂಧ ಇತ್ತೀಚಿಗೆ ವಿವಿಧ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಕಸಘಟಕ ಮತ್ತೆ ಈ ಭಾಗದ ಜನರ ತಲೆಶೂಲೆಯಾಗಿ ಪರಿಣಮಿಸಲಿದೆ ಎಂಬ ಆತಂಕ ಎದುರಾಗಿದೆ.

ಕಾಲಾನಂತರದಲ್ಲಿ ಢಂಪಿಂಗ್‌ಯಾರ್ಡ್:

ಮೊದಲಿಗೆ ಘನತ್ಯಾಜ್ಯ ಸಂಸ್ಕರಣೆ ಹೆಸರಿನಲ್ಲಿ ಕಾರ್ಯಾರಂಭ ಮಾಡಿದ ಟೆರ್ರಾಾರ್ಮಾ ಘಟಕ ನಂತರದಲ್ಲಿ ಕಸ ವಿಲೇವಾರಿ ಘಟಕವಾಗಿ ಉಳಿಯಲಾರಂಭಿಸಿತು. ಪ್ರತಿನಿತ್ಯ ಬಿಬಿಎಂಪಿ ವ್ಯಾಪ್ತಿಯಿಂದ ಟನ್‌ಗಟ್ಟಲೆ ಕಸ ಘಟಕ ಸೇರಿ ಯಾವುದೇ ಸಂಸ್ಕರಣೆ ನಡೆಯದೆ ಕೇವಲ ವಿಲೇವಾರಿ ತಾಣವಾಗಿ ರೂಪುಗೊಂಡಿತ್ತು. ಹಸಿ ಕಸದಿಂದ ಎರೆಹುಳು ಗೊಬ್ಬರ ತಯಾರಿಸುವುದಾಗಿ ಹೇಳಿದ ಬಿಬಿಎಂಪಿ ಅಧಿಕಾರಿಗಳು ಸ್ಥಳೀಯರನ್ನು ನಂಬಿಸಿದ್ದರು, ಆರಂಭದಲ್ಲಿ ಈ ರೀತಿಯ ಪ್ರಕ್ರಿಯೆ ನಡೆಯಿತಾದರೂ ನಂತರದ ದಿನಗಳಲ್ಲಿ ಕೇವಲ ಕಸ ಡಂಫಿಂಗ್‌ಯಾರ್ಡ್ ಆಗಿ ಬಳಕೆಯಾಗತೊಡಗಿತ್ತು.

ಕಸ ಕರಗಿಲ್ಲ:

2006ರಲ್ಲಿ ಶಾಸಕರಾಗಿದ್ದ ಜೆ.ನರಸಿಂಹಸ್ವಾಮಿ ಅವರ ಕಾಲದಲ್ಲಿ ಟೆರ್ರಾಾರ್ಮಾ ಕಸ ಘಟಕ ಆರಂಭವಾಯಿತು. ಆಗ ಸ್ಥಳೀಯರಿಗೆ ಇಲ್ಲಿನ ಕಸ ಘಟಕದ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ದಿನ ಕ್ರಮೇಣ ರಾಶಿಗಟ್ಟಲೆ ಕಸ ಘಟಕಕ್ಕೆ ಸೇರ್ಪಡೆಯಾಗತೊಡಗಿದ ಬಳಿಕ ಸುತ್ತಮುತ್ತಲ ಕಿ.ಮೀ ಗಟ್ಟಲೆ ಗಬ್ಬುವಾಸನೆ ರಾಚತೊಡಗಿತು. ಬೆಟ್ಟದಂತೆ ಬೆಳೆದ ಕಸ ಮಳೆನೀರಿನೊಂದಿಗೆ ಕೊಳೆತು ಹೊರಬಂದ ಲಿಚೆಟ್ ಅಂತರ್ಜಲ ಸೇರಿ ಸುತ್ತಮುತ್ತಲ ಭಾಗದಲ್ಲಿನ ಕೊಳವೆಬಾವಿಗಳಲ್ಲಿ ಕಪ್ಪುಬಣ್ಣದ ವಿಷಯುಕ್ತ ನೀರು ಬರಲಾರಂಭಿಸಿತ್ತು. ಇದರಿಂದ ರೊಚ್ಚಿಗೆದ್ದ ಜನ ಘಟಕ ಮುಚ್ಚುವಂತೆ ಆಕ್ರೋಶ ಹೊರಹಾಕಿ ನಿರಂತರ ಪ್ರತಿಭಟನೆ ನಡೆಸಿದ್ದರು. ಬಿಬಿಎಂಪಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಿಎಂ ಆದಿಯಾಗಿ ಹಲವು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ವರ್ಷಾನುಗಟ್ಟಲೆ ನಡೆದ ಪ್ರತಿಭಟನೆ ವಿರೋಧದಿಂದಾಗಿ 2014ರಲ್ಲಿ ಅಧಿಕೃತವಾಗಿ ಘಟಕ ಬಂದ್ ಆಗಿತ್ತು. ಈ ವೇಳೆ ಬೆಟ್ಟದಂತೆ ಬೆಳೆದಿರುವ ಕಸದ ರಾಶಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದುವರೆಗೆ ಆ ಕೆಲಸವಾಗಿಲ್ಲ ಎಂಬ ಆಕ್ರೋಶ ಜನರ ಮನದಲ್ಲಿ ಇಂದಿಗೂ ಕುದಿಯುತ್ತಿದೆ.

ಜಿಲ್ಲೆ ಮೇಲೆಯೇ ಏಕೆ ಕಣ್ಣು?

ನೆಲಮಂಗಲ, ಹೊಸಕೋಟೆ ಹಾಗೂ ದೇವನಹಳ್ಳಿ ಭಾಗಗಳಲ್ಲಿ ಕೈಗಾರಿಕಾ ವಲಯಕ್ಕಾಗಿ ಈಗಾಗಲೇ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳುತ್ತಿದೆ, ಇನ್ನು ದೊಡ್ಡಬಳ್ಳಾಪುರದಲ್ಲಿ ಈಗಾಗಲೇ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಿಂದ ಸುತ್ತಮುತ್ತಲ ಕೃಷಿ ಭೂಮಿ ಲವತ್ತತೆ ಕಳೆದುಕೊಳ್ಳುತ್ತಿದೆ, ರಾಜ್ಯ ರಾಜಧಾನಿ ಬೆಂಗಳೂರಿನ ಗಡಿ ಹಂಚಿಕೊಂಡಿರುವ ಗ್ರಾಮಾಂತರ ಜಿಲ್ಲೆಯ ಕೃಷಿ ಭೂಮಿ ಮೇಲೆಯೇ ಏಕೆ ಸರ್ಕಾರದ ಕಣ್ಣು ಎಂಬುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇಂಥಹದ್ದೊಂದು ಮತ್ತೊಂದು ದುರಂತಕ್ಕೆ ಅವಕಾಶ ಕೊಡುವುದಿಲ್ಲ, ನನ್ನ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಯಾವ ಹೋರಾಟಕ್ಕೂ ಸಿದ್ದನಿದ್ದೇನೆ, ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವುದರ ಜತೆಗೆ ತಾಲೂಕಿನ ಪ್ರತಿ ಜನಪ್ರತಿನಿಧಿಯೊಂದಿಗೆ ಸೇರಿ ಅಮರಾಣಾಂತರ ಉಪವಾಸ ಕೈಗೊಳ್ಳುತ್ತೇನೆ. ಯಾವುದೇ ಒತ್ತಡ ಬಂದರೂ ಬಗ್ಗುವುದಿಲ್ಲ. ಕ್ಷೇತ್ರದ ಜನರ ಆರೋಗ್ಯ ನನ್ನ ಪ್ರಥಮ ಆದ್ಯತೆಯಾಗಿದೆ.

ಧೀರಜ್ ಮುನಿರಾಜು, ಶಾಸಕ ದೊಡ್ಡಬಳ್ಳಾಪುರ

-------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net