

ಬೆಂಗಳೂರು: ಯಲಹಂಕ ಬಳಿಯಿರುವ ಕ್ವಾರಿಗಳಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ಸುರಿಯುವಿಕೆ ವಿರುದ್ಧ ಸ್ಥಳೀಯರ ವಿರೋಧದಿಂದಾಗಿ ನಗರದಲ್ಲಿ ಹಳಿ ತಪ್ಪಿರುವ ಕಸ ಸಂಗ್ರಹ ವ್ಯವಸ್ಥೆ ಇನ್ನೂ ಮೊದಲಿನ ಸ್ಥಿತಿಗೆ ಮರಳಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭರವಸೆ ನೀಡಿರುವ ಹೊರತಾಗಿಯೂ ಕಸ ವಿಲೇವಾರಿ ಪುನಾರಂಭಗೊಂಡಿದೆ. ಆದರೆ, ಮನೆ-ಮನೆಯಿಂದ ತ್ಯಾಜ್ಯ ಸಂಗ್ರಹ ಕಗ್ಗಂಟಾಗಿಯೇ ಉಳಿದಿದೆ.
ಕಳೆದೆರಡು ದಿನಗಳ ಹಿಂದೆ ಯಲಹಂಕ ಬಳಿಯಿರುವ ಕಣ್ಣೂರು, ಮಿಟ್ಟಗಾನಹಳ್ಳಿ ಹಾಗೂ ಬಂಡೆ ಹೊಸೂರು ಕ್ವಾರಿಗಳಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯುತ್ತಿರುವುದರಿಂದ ಕಣ್ಣೂರು ಗ್ರಾಪಂ ವ್ಯಾಪ್ತಿಯ ಹಳ್ಳಿಗರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಮರಿಚಿಕೆ ಆಗಿರುವ ಕಾರಣ ಸ್ಥಳೀಯರು ಪಾಲಿಕೆಯ ಕಸದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮ ನಗರದೆಲ್ಲೆಡೆ ಕಸ ಸಂಗ್ರಹ ಹಾಗೂ ವಿಲೇವಾರಿ ಹಳಿತಪ್ಪಿತ್ತು.
ಕಸ ವಿಲೇವಾರಿ ಸ್ಥಗಿತಗೊಂಡಿದ್ದ ಸಮಯದಲ್ಲಿ ನೂರಾರು ಲಾರಿಗಳು ಕ್ವಾರಿ ಹೊರಗೆ ಸಾಲುಗಟ್ಟಿ ನಿಂತಿವೆ. ಈ ಲಾರಿಗಳು ಅನ್‌ಲೋಡ್ ಮಾಡಿದ ಬಳಿಕವಷ್ಟೇ ಬೇರೆ ಲಾರಿಗಳಿಂದ ಕಸ ಸುರಿಯಲು ಅವಕಾಶ ಸಿಗಲಿದೆ. ಹೀಗಾಗಿ ನಗರದೆಲ್ಲೆಡೆಯಿಂದ ಸಂಗ್ರಹಿಸಿ ಕ್ವಾರಿಗೆ ಹಾಕಲು ಇನ್ನೂ 2 ದಿನ ಬೇಕಾಗುತ್ತದೆ. ಇದರಿಂದಾಗಿ ಬಡಾವಣೆಗಳಲ್ಲಿ ಆಟೋ ಟಿಪ್ಪರ್‌ಗಳಿಂದ ಸಂಗ್ರಹಿಸಲಾಗುವ ತ್ಯಾಜ್ಯವು ಕಾಂಪ್ಯಾಕ್ಟರ್‌ಗೆ ತುಂಬಿ ನಂತರ ಕ್ವಾರಿಗೆ ಸಾಗಣೆ ಮಾಡಬೇಕಿದೆ. ಈ ಪ್ರಕ್ರಿಯೆ ವಾರಂತ್ಯದವರೆಗೂ ಮುಂದುವರಿಯುವ ಸಾಧ್ಯತೆ ಇದೆ.
ಗುರುವಾರ ಬೆಳಗ್ಗೆ ಬೆಳ್ಳಹಳ್ಳಿ ಕ್ವಾರಿ ಪ್ರವೇಶದ ಬಳಿ 100ಕ್ಕೂ ಹೆಚ್ಚು ಕಸದ ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಒಂದೊಂದೇ ಲಾರಿಗಳು ಕ್ವಾರಿ ಪ್ರವೇಶಿಸಿ ಕಸ ಸುರಿಯುವ ಪ್ರಕ್ರಿಯೆ ನಿಧಾನಗೊಂಡಿದೆ. ಇದರಿಂದಾಗಿ ಕೋಗಿಲು-ಕಣ್ಣೂರು ಮುಖ್ಯರಸ್ತೆಯ ಎರಡೂ ಕಡೆಗಳಲ್ಲಿ ಲಾರಿಗಳು ನಿಂತು ಸಂಚಾರಕ್ಕೆ ಅಡ್ಡಿಯುಂಟಾಯಿತು. ಇನ್ನೊಂದೆಡೆ ಏರ್‌ಪೋರ್ಟ್ ರಸ್ತೆಯ ಯಲಹಂಕದ ಸಂತೆ ವೃತ್ತದ ಬಳಿ ಕಸದ ಲಾರಿಗಳನ್ನು ಪೊಲೀಸರು ರಸ್ತೆಬದಿ ನಿಲ್ಲಿಸಿದ್ದಾರೆ. ಆದರೂ, ಕಸದ ಸಮಸ್ಯೆ ಬಗೆಹರಿದಿದೆ ಎಂದು ಪಾಲಿಕೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ತಣಿಯದ ಸ್ಥಳೀಯರ ಮುನಿಸು:
ಕ್ವಾರಿಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಸುತ್ತಲಿನ ಗ್ರಾಮಗಳಾದ ಬೆಳ್ಳಹಳ್ಳಿ, ಮಿಟ್ಟಗಾನಹಳ್ಳಿ, ಬಂಡೆ ಹೊಸೂರು ಹಾಗೂ ಕಣ್ಣೂರು ವ್ಯಾಪ್ತಿಯಲ್ಲಿನ ಜನರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಆರೋಗ್ಯ ಸಂಬಂಧಿ ಕಾಯಿಲೆಗಳೇ ಹೆಚ್ಚಾಗಿ ಸ್ಥಳಿಯರನ್ನು ಕಾಡುತ್ತಿದೆ. ದುರ್ವಾಸನೆ, ಬೆಂಕಿಯಿಂದ ಮೇಲೇಳುವ ಹೊಗೆ, ನೊಣ-ಸೊಳ್ಳೆಕಾಟ, ಇಲಿ-ಹೆಗಣ್ಣಗಳ ಕಾಟದಿಂದ ಜನರು ರೋಸಿಹೋಗಿದ್ದಾರೆ. ಇಲ್ಲಿನ ರಸ್ತೆಗಳು ಅಧ್ವಾನಗೊಂಡಿದ್ದು, ದುರಸ್ತಿಯನ್ನೇ ಕಂಡಿಲ್ಲ. ಮಳೆಗಾಲ ಆಗಿರುವುದರಿಂದ ರಸ್ತೆಗುಂಡಿಗಳಲ್ಲಿ ನೀರು ನಿಂತು ವಾಹನ ಸಂಚಾರ ಹಳಿತಪ್ಪಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಅನುದಾನ ಬಿಡುಗಡೆಯಾಗಿದ್ದರೂ, ಅಧಿಕಾರಿಗಳು ಕಾಲಮಿತಿಯೊಳಗೆ ಕಾಮಗಾರಿ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.