ರಸ್ತೆ ಬದಿಯಲ್ಲಿ ಕಸದ ಕೊಂಪೆ! : ಜಡಿಮಳೆ ನಡುವೆಯೂ ಸ್ವಚ್ಛತೆ : ತ್ಯಾಜ್ಯ ಸೆಳೆಯುವವರಿಗಿಲ್ಲ ಕಡಿವಾಣ

New Project (10)
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಒಣಕಸವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಿ, ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ, ಎಡೆಬಿಡದೆ ಸುರಿಯುವ ಮಳೆಗೂ ಕೊಳೆತು ನಾರುವ ಕೊಚ್ಚೆಯ ಮಧ್ಯೆ ಕಸ ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪುರಸಭೆ ಎಷ್ಟೇ ಪ್ರಯತ್ನಪಟ್ಟರೂ ರಸ್ತೆ ಬದಿ ಕಸ ಎಸೆಯುವ ಅನಾಗರಿಕತೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ತಮ್ಮ ಮನೆಗಳಲ್ಲಿ ಸಂಗ್ರಹವಾಗುವ ಕಸ, ಕೊಳೆಯುವ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ, ಸಮರ್ಪಕವಾಗಿ ವಿಲೇವಾರಿ ಮಾಡದೇ ವಾಹನಗಳಲ್ಲಿ ಹೋಗುವಾಗ ಎಲ್ಲೆಂದರಲ್ಲಿ ರಸ್ತೆ ಬದಿ, ತೆರೆದ ಚರಂಡಿ, ನೀರು ಹರಿಯುವ ರಾಜಕಾಲುವೆ, ನದಿಗೆ ರಾಜಾರೋಷವಾಗಿ ಎಸೆದು ಹೋಗುವ ಪರಿಪಾಠ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಅನಾಗರಿಕರಿಗೆ ದಂಡ ಅಥವಾ ಕಾನೂನು ಕ್ರಮದ ಭಯ ಇಲ್ಲದೆ ಇರುವುದರಿಂದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಂಟ್ವಾಳ ಪುರಸಭೆಗೆ ಕಷ್ಟಸಾಧ್ಯವಾಗುತ್ತಿದೆ.

ಗ್ರಾಮೀಣ ಪ್ರದೇಶದ್ದೇ ಹೆಚ್ಚು

ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಗಡಿಭಾಗಗಳು ಅನಧಿಕೃತ ಡಂಪಿಂಗ್ ಯಾರ್ಡ್‌ಗಳಾಗುತ್ತಿದೆ. ಇಲ್ಲಿ ನಗರ ವಾಸಿಗಳಿಗಿಂತ ಗ್ರಾಮೀಣ ಪ್ರದೇಶದ ಜನರು ಎಸೆದ ಕಸವೇ ಹೆಚ್ಚು. ಇದನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಪುರಸಭೆಗೆ! ಉದಾಹರಣೆಗೆ ಅವ್ಟಾಡಿ ಗ್ರಾಮದ ಕಸ ಲೊರೆಟ್ಟೋ ಪದವಿನಲ್ಲಿ ಬೀಳುತ್ತಿದೆ. ಕಳ್ಳಿಗೆಯ ಕಸ ತಲಪಾಡಿಯಲ್ಲಿ ಬೀಳುತ್ತಿದೆ. ಸಜೀಪಮುನ್ನೂರಿನ ಕಸ ಪಾಣೆಮಂಗಳೂರಿನಲ್ಲಿ ಬೀಳುತ್ತಿದೆ. ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆ ಬಳಿ ಕಸದ ರಾಶಿಯೊಂದಿದೆ. ಇಲ್ಲಿ ನಂದಾವರ, ಸಜೀಪ ಮುನ್ನೂರು ಭಾಗದಿಂದ ಬರುವ ಜನರು ತ್ಯಾಜ್ಯವನ್ನು ಎಸೆದು ಹೋಗುತ್ತಾರೆ. ಆದರೆ ಅದನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಬಂಟ್ವಾಳ ಪುರಸಭೆ ಮಾಡುತ್ತಿದೆ. ಮಳೆಗಂತೂ ಈ ಕಸ ರಾಡಿಯಾಗಿ ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತದೆ. ಮಳೆ ನೀರಿಗೆ ಪ್ಲಾಸಿಕ್ ಸಹಿತ ಕೊಳೆತ ತ್ಯಾಜ್ಯ ಪಕ್ಕದಲ್ಲೇ ಇರುವ ರಾಜಕಾಲುವೆಯ ಮೂಲಕ ನದಿ ಸೇರುತ್ತಿದೆ. ದನ, ನಾಯಿ ಮೊದಲಾದ ಪ್ರಾಣಿಗಳು ಈ ಕಸದ ರಾಶಿಯಲ್ಲಿ ಆಹಾರ ಹುಡುಕಿ ತ್ಯಾಜ್ಯವನ್ನೆಲ್ಲಾ ರಸ್ತೆಗೆ ಹಾಕುತ್ತಿವೆ. ಈ ಕೊಳೆತು ನಾರುತ್ತಿರುವ ಕೊಚ್ಚೆಯಲ್ಲಿ ಕಸ ವಿಲೇವಾರಿ ಮಾಡುವ ಜವಾಬ್ದಾರಿ ಪೌರಕಾರ್ಮಿಕರ ಪಾಲಿಗೆ. ನಾಗರಿಕರೆನಿಸಿಕೊಂಡವರ ಅನಾಗರಿಕ ಪ್ರವೃತ್ತಿಯಿಂದಾಗಿ ಪರಿಸರ ಕಲುಷಿತವಾಗುತ್ತಿದೆ.

ಪೌರಕಾರ್ಮಿಕರು ಮನುಷ್ಯರೇ

ದಿನ ಬೆಳಗಾದರೆ ಸಾಕು ಜನರು ಎಸೆದ ತ್ಯಾಜ್ಯದ ರಾಶಿಯಲ್ಲಿ ನಿಂತು ಕೆಲಸ ಮಾಡುವ ಅನಿವಾರ್ಯತೆ ಪೌರಕಾರ್ಮಿಕರಿಗಿದೆ. ಆದರೆ ಆ ಪೌರಕಾರ್ಮಿಕರು ನಮ್ಮಂತೆಯೇ ಮನುಷ್ಯರು ಎನ್ನುವುದನ್ನು ಮರೆತು ಬಿಟ್ಟಿದ್ದೇವೆ. ತಾವು ಎಸೆದ ತ್ಯಾಜ್ಯ ಒಂದು ದಿನ ವಿಲೇವಾರಿಯಾಗದೇ ದುರ್ವಾಸನೆ ಬೀರಿದಾಗ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ವ್ಯವಸ್ಥೆಯ ವಿರುದ್ಧ ದೂರುವ ಜನರು ರಸ್ತೆ ಬದಿ ತಾವೇ ಕಸ ಎಸೆಯುವಾಗ ಯೋಚನೆ ಮಾಡುವುದಿಲ್ಲ. ಸ್ವಯಂಜಾಗೃತಿಯೊಂದಿಗೆ ಕಟ್ಟುನಿಟ್ಟಿನ ಕ್ರಮ ಜಾರಿಯಾಗದೇ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ.

ಸಮನ್ವಯತೆಯ ಕೊರತೆ

ನಗರ ಪ್ರದೇಶಕ್ಕೆ ಗ್ರಾಮೀಣ ಭಾಗದ ಜನರು ಕಸ ಎಸೆಯುವ ಪ್ರಸಂಗಗಳು ಸಾಮಾನ್ಯವಾಗುತ್ತಿದೆ. ಸ್ಥಳೀಯ ಪಂಚಾಯಿತಿಗಳಂತೂ ಅದೂ ನಮ್ಮ ವ್ಯಾಪ್ತಿಯಲ್ಲ ಎಂದು ಕೈ ಕಟ್ಟಿ ಕುಳಿತರೆ, ಪುರಸಭೆಗೆ ಗ್ರಾಮೀಣ ಭಾಗದ ಜನರು ಕಸ ಎಸೆಯದಂತೆ ತಡೆಯಲು ಸಾಧ್ಯವಾಗುತ್ತಿಲ್ಲ. ಪುರಸಭೆಗೆ ತಾಗಿಕೊಂಡೇ ಇರುವ ಗ್ರಾಮ ಪಂಚಾಯಿತಿಗಳ ನಡುವೆ ಸಮನ್ವಯತೆಯ ಕೊರತೆಯಿಂದ ಗ್ರಾಮೀಣ ಭಾಗದ ಕಸದ ವಿಲೇವಾರಿ ಜವಬ್ದಾರಿ ಪುರಸಭೆಯ ಪಾಲಿಗೆ ಬಂದೊದಗಿದೆ. ಸ್ವಚ್ಛವಾಗಿರುವ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್, ತ್ಯಾಜ್ಯಗಳನ್ನು ಎಸೆಯದಿರುವುದು ಪರಿಸರ ಸಂರಕ್ಷಣೆಯೇ ಎನ್ನುವ ಅರಿವು ಮೂಡಿಸುವ ಕಾರ್ಯ ಆಗುವುದರ ಜತೆಗೆ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಜಿಲ್ಲಾಡಳಿತ ಕಟ್ಟನಿಟ್ಟಿನ ಕಾನೂನು ಕ್ರಮ ರೂಪಿಸಬೇಕಾಗಿದೆ.

ಪಾಣೆಮಂಗಳೂರಿನ ಶಾರದಾ ಹೈಸ್ಕೂಲ್ ಬಳಿ ಕಳೆದ ಎರಡು ತಿಂಗಳಿನಿಂದ ಪೌರಕಾರ್ಮಿಕರೊಬ್ಬರು ಕಸ ಎಸೆಯುವವರ ಬಗ್ಗೆ ನಿಗಾ ವಹಿಸಿ ಗಸ್ತು ಕಾಯುತ್ತಿದ್ದಾರೆ. ಕಸ ಎಸೆಯುವವರನ್ನು ಗುರುತಿಸಿ ದಂಡ ವಿಧಿಸಲಾಗಿದೆ. ಪಂಚಾಯಿತಿ ಹಾಗೂ ಪುರಸಭೆಯ ಗಡಿಭಾಗಗಳಲ್ಲಿ ಕಸ ಹಾಕುವ ಬಗ್ಗೆ ಜಿಲ್ಲಾ ಯೋಜನಾ ನಿರ್ದೇಶಕರ ಉಪಸ್ಥಿತಿಯಲ್ಲಿ ಪಂಚಾಯಿತಿ ಹಾಗೂ ಪುರಸಭೆಯ ಸಭೆ ನಡೆಸಲಾಗಿದೆ. ರತ್ನಪ್ರಸಾದ್ ಬಂಟ್ವಾಳ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net