

ರಬಕವಿ/ಬನಹಟ್ಟಿ: ಬನಹಟ್ಟಿ ನಗರದ ಹಳೇ ಕೋರ್ಟ್ ಕಟ್ಟಡ ಹಾಗೂ ಎಸ್‌ಆರ್‌ಎ ಹೈಸ್ಕೂಲ್ ಹಿಂಬದಿ ರಸ್ತೆ ಮೇಲೆ ಸಾರ್ವಜನಿಕರು ಎಸೆಯುತ್ತಿರುವ ಕಸದ ರಾಶಿಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಹಲವಾರು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಶಾಂತ ಹಾಗೂ ಸುಂದರ ವಾತಾವರಣ ನಿರ್ಮಾಣವಾಗಿತ್ತು. ಮೊದಲು ಇಲ್ಲಿ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈಗ ನ್ಯಾಯಾಲಯ ಸ್ಥಳಾಂತರಗೊಂಡಿದ್ದರಿಂದ ಈ ರಸ್ತೆ ಸಂಚಾರದಲ್ಲಿ ನಿರ್ಜನ ಪ್ರದೇಶವಾಗಿದ್ದರಿಂದಾಗಿ ಸಾರ್ವಜನಿಕರು ಇಲ್ಲಿ ಕಸ, ಬಳಸಿದ ಪ್ಲಾಸ್ಟಿಕ್ ವಸ್ತುಗಳು, ತೀರಿ ಹೋದವರು ಬಳಸಿದ ಬಟ್ಟೆ ಬರಿ, ಬೆಡ್ ಎಸೆಯುತ್ತಿದ್ದು, ಈ ರಸ್ತೆಯಲ್ಲಿ ತೆರಳುವವರು ನಗರಸಭೆಗೆ ಹಿಡಿಶಾಪ ಹಾಕುತ್ತಲೇ ತೆರಳುತ್ತಿದ್ದಾರೆ.
ಅಲ್ಲದೆ, ಮಾಂಸ, ಹಳಸಿದ ಪದಾರ್ಥಗಳನ್ನು ಇಲ್ಲಿಯೇ ಚೆಲ್ಲುತ್ತಿದ್ದರಿಂದಾಗಿ ಹಂದಿ, ನಾಯಿಗಳ ತಾಣವಾಗಿ ಪರಿಣಮಿಸಿದೆ. ಹೀಗಾಗಿ ಶಾಲೆ ಮಕ್ಕಳು, ವೃದ್ಧರು, ಮಹಿಳೆಯರು ಅಂಜುತ್ತಲೇ ತೆರಳುವಂತಾಗಿದೆ.
ನಗರದ ಹೊರವಲಯದಲ್ಲಿ ಬಳಸಿದ ವಿದ್ಯುತ್ ಬಲ್ಬ್‌ಗಳು, ಅವಧಿ ಮುಗಿದ ಔಷಧ, ಗುಳಿಗೆಗಳು, ಕೊಳೆತ ಕಾಯಿಪಲ್ಯ ಹಾಕುತ್ತಿರುವುದರಿಂದ ದುರ್ವಾಸನೆ ಬೀರುತ್ತಿದೆಯಲ್ಲದೆ, ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ರಸ್ತೆಗಳಲ್ಲಿ ಕಸ ವಿಲೇವಾರಿ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.