

ಆನೇಕಲ್ : ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಸದ ನಿರ್ವಹಣೆಯೇ ದೊಡ್ಡ ಸವಾಲಾಗಿದೆ, ಪುರಸಭೆ ವ್ಯಾಪ್ತಿಯಲ್ಲಿ ವಿದ್ಯಾವಂತರೇ ಹೆಚ್ಚಿದ್ದರೂ ಎಲ್ಲೆಂದರಲ್ಲಿ ಕಸ ಹಾಕುವುದು, ರಸ್ತೆ ವಿಭಜಕದ ಮೇಲೆ ಕಸದ ಮೂಟೆಗಳನ್ನು ಇಟ್ಟು ಹೋಗುವುದು ಬಿಡುತ್ತಿಲ್ಲ, ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಬೇಕು, ಮನೆಗಳಲ್ಲಿಯೇ ಹಸಿ ಮತ್ತು ಒಣ ಕಸವನ್ನು ವಿಂಗಡಿಸಬೇಕು, ಇದರಿಂದ ಪೌರಕಾರ್ಮಿಕರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಪುರಸಭೆ ಅಧ್ಯೆ ಶಾರದಾ ವರದರಾಜ ಹೇಳಿದರು.
ಚಂದಾಪುರ ಪುರಸಭೆಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ಪ್ರಮುಖ ಪಾತ್ರವಹಿಸುತ್ತಾರೆ, ಹಾಗಾಗಿ ಅವರನ್ನು ಗೌರವಿಸಬೇಕಾದದ್ದು ಸಮಾಜದ ಜವಾಬ್ದಾರಿ ಎಂದರು.
ಪೌರಕಾರ್ಮಿಕರು ಹಬ್ಬ ಹರಿದಿನ ವಿಶೇಷ ದಿನಗಳನ್ನು ನೋಡದೆ ವರ್ಷದ 365 ದಿನವೂ ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಾರೆ. ವಾಟರ್ ಮನ್ಗಳು ಸ್ವಚ್ಛತಾಗಾರರು ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಟ್ಟಣವನ್ನು ಸುಂದರವಾಗಿರುತ್ತಾರೆ, ಹಾಗಾಗಿ ಅವರ ಶ್ರಮ ವ್ಯರ್ಥವಾಗದಂತೆ ಸಾರ್ವಜನಿಕರು ಜನ ನಿತ್ಯ ಕಾರ್ಮಿಕರ ಜತೆ ವ್ಯವಹರಿಸಬೇಕು. ಸಿಕ್ಕ ಸಿಕ್ಕಲ್ಲಿ ಕಸ ಹಾಕುವುದನ್ನು ಕಡ್ಡಾಯವಾಗಿ ಬಿಟ್ಟು ಪುರಸಭೆಯ ವಾಹನಕ್ಕೆ ನೀಡಬೇಕು ಎಂದು ಸಲಹೆ ನೀಡಿದರು. ಪುರಸಭೆ ಸದಸ್ಯರಾದ ಸೋಮಶೇಖರ ರೆಡ್ಡಿ, ಕೃಷ್ಣಾರೆಡ್ಡಿ, ಉಮೇಶ್, ರಾಕೇಶ್, ಶ್ರೀಧರ್, ರೇಣುಕಾ, ಭಾರತಿ ಬಸವರಾಜು, ಅನ್ನಪೂರ್ಣಮ್ಮ, ರಾಮಣ್ಣ, ದಿವ್ಯ ಲ್ಮ, ಸುಕನ್ಯಾ, ವೇಣುಗೋಪಾಲ್, ಸೌಮ್ಯ ಸುಧಾಕರ್, ವೆಂಕಟಸ್ವಾಮಿ, ರೂಪ, ಜ್ಯೋತಿ ಇದ್ದರು.
ಹಾಟ್ಸ್ಪಾಟ್ಗಳಲ್ಲಿ ಸಿಸಿ ಕ್ಯಾಮರಾ : ಪೌರಕಾರ್ಮಿಕರಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ, ಕಾರ್ಮಿಕ ಸುರಕ್ಷತೆಗಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೌರಕಾರ್ಮಿಕರು ಹಗಲು ರಾತ್ರಿ ಎನ್ನದೆ ಪಟ್ಟಣದ ಸೌಂದರ್ಯ ಕಾಪಾಡುತ್ತಾರೆ. ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಕಸದ ಹಾಟ್ ಸ್ಪಾಟ್ಗಳಲ್ಲಿ ಸಿಸಿ ಕ್ಯಾಮರಾ ಹಾಕಲು ಚಿಂತನೆ ನಡೆಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಹೇಳಿದರು.
ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಸ್ವಂತ ಸೂರು ನೀಡಲು ಸರ್ಕಾರಕ್ಕೆ ಮನವಿ ನೀಡಲಾಗುವುದು, ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಕೊಡಲು ಜಾಗ ಗುರುತಿಸಿ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. > ಕೃಷ್ಣಾರೆಡ್ಡಿ ಪುರಸಭೆ ಮಾಜಿ ಅಧ್ಯಕ್ಷ