ಕೈಗಾರಿಕಾ ಪ್ರದೇಶದಲ್ಲಿ ಕಸದ ಮಾಫಿಯಾ

11-1
Published on

ಸುತ್ತಮುತ್ತಲ ನಿವಾಸಿಗಳಲ್ಲಿ ಆರೋಗ್ಯ ಸಮಸ್ಯೆ

ನವೀನ್ ಶೆಟ್ಟಿ ಕೆರಾಡಿ ಆನೇಕಲ್: ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಕಸದ ಮಾಫಿಯಾ ಹೆಚ್ಚಾಗುತ್ತಿದ್ದು, ರಾತ್ರೋರಾತ್ರಿ ಕಿಡಿಗೇಡಿಗಳು ಕಸ ಸುರಿಯುತ್ತಿರುವುದು ಈ ಭಾಗದ ಜನರ ತಲೆನೋವು ಹೆಚ್ಚಿಸಿದೆ. ರಾತ್ರಿ ವಾಹನಗಳಲ್ಲಿ ಬಂದು ಕಸ ಸುರಿದು ಹೋಗುತ್ತಿದ್ದು, ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಸ್ಥಳೀಯ ಆಸ್ಪತ್ರೆಗಳು ಹಾಗೂ ವೈದ್ಯರು ವಾಸಿಸುವ ಮನೆಗಳಿಗೆ ಸಮಸ್ಯೆ ಆಗುತ್ತಿದೆ.

ಕಸವನ್ನು ರಸ್ತೆಯ ಅಕ್ಕಪಕ್ಕ ಹಾಗೂ ಕೆಐಎಡಿಬಿ ಪ್ರದೇಶದ ವ್ಯಾಪ್ತಿಯಲ್ಲಿ ಸುರಿದು ಬೆಂಕಿ ಹಚ್ಚುತ್ತಿದ್ದು, ಹೊಗೆ ಆವರಿಸಿ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಕಾಚನಾಯಕನಹಳ್ಳಿ ಸಮೀಪದ 10 ಎಕರೆ ಸರ್ಕಾರಿ ಜಾಗದಲ್ಲಿ ಗ್ರಾಮ ಪಂಚಾಯಿತಿ ತ್ಯಾಜ್ಯ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಕಸವನ್ನು ಸುರಿಯಲಾತ್ತಿದೆ. ಇದರಿಂದ ಕೈಗಾರಿಕಾ ಪ್ರದೇಶ ಗಬ್ಬುನಾರುತ್ತಿದೆ. ಅಲ್ಲದೆ ಕಸಕ್ಕೆ ಹಾಕುವ ಬೆಂಕಿಯಿಂದಾಗಿ ಸುತ್ತಮುತ್ತಲ ಗ್ರಾಮಸ್ಥರು ಉಸಿರಾಟ ಸಮಸ್ಯೆ ಸೇರಿ ಇನ್ನಿತರ ರೋಗ ತಗುಲುವ ಆತಂಕದಲ್ಲಿದ್ದಾರೆ. ಈ ಬಗ್ಗೆ ಸ್ಥಳೀಯ ಪಂಚಾಯಿತಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ.

ಎರಡು ದಿನ ಗಡುವು: ಕಸ ಹಾಕುತ್ತಿರುವ ಮಾಹಿತಿ ತಿಳಿದು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ ಪ್ರಸಾದ್, ಪದಾಧಿಕಾರಿಗಳಾದ ಸಂಜೀವ್ ಸಾವಂತ್, ಮುರಳಿಧರ್, ನಾಗರಾಜ್ ಶೆಟ್ಟಿ, ಯಶಸ್,ಡಾ. ಹರಿಕೀರ್ತಿ, ಡಾ. ಸಂಜಯ್, ರಾವ್ ಡಾ. ವಿಜಯ್ ಪಿಳ್ಳೈ, ಚಂದ್ರಮೋಹನ್, ಅಜಯ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ಮುಖ್ಯರಸ್ತೆಯ ಅಕ್ಕ ಪಕ್ಕದಲ್ಲಿ ಜಲ್ಲಿಕಲ್ಲು ಹಾಗೂ ಮರಳು ಹಾಕಿಕೊಂಡು ರಸ್ತೆ ಒತ್ತುವರಿ ಮಾಡಿ ಕಸ ಹಾಕುತ್ತಿರುವವರನ್ನು ಸ್ಥಳದಲ್ಲಿ ತರಾಟೆಗೆ ತೆಗೆದುಕೊಂಡ ಬೊಮ್ಮಸಂದ್ರ ಕೈಗಾರಿಕಾ ಸಂಘದ ಪದಾಧಿಕಾರಿಗಳು, ಎರಡು ದಿನದಲ್ಲಿ ತೆರವು ಮಾಡುವಂತೆ ಗಡುವು ನೀಡಿದರು.ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೂ ಸಂಘದಿಂದ ಪತ್ರ ಬರೆಯಲಾಗುವುದು, ಕೈಗಾರಿಕಾ ಸಂಘದಿಂದಲೇ ಸ್ವತಃ ವಾಹನ ಬಿಟ್ಟು ಸ್ವಚ್ಛತೆ ಮಾಡಲು ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಸ ಸುರಿಯುವವರ ವಿರುದ್ಧ ಠಾಣೆಗೆ ದೂರು ನೀಡಲಾಗುವುದು ಎಂದು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್ ತಿಳಿಸಿದ್ದಾರೆ. ಬೊಮ್ಮಸಂದ್ರ ಕಿತ್ತಗಾನಹಳ್ಳಿ ಕೆರೆಯ ಸಮೀಪದಲ್ಲಿ ಕಸದ ಸಮಸ್ಯೆ ಉಂಟಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿ ಸಂಘದಿಂದ ಕೆರೆ ಅಭಿವೃದ್ಧಿ ಪಡಿಸಲಾಯಿತು. ಈಗ ಕೈಗಾರಿಕಾ ಪ್ರದೇಶದಲ್ಲಿಯೇ ಕಸದ ಸಮಸ್ಯೆ ಉಂಟಾಗಿದೆ. ಸಂಘದ ವತಿಯಿಂದ ಐದಾರು ಜೆಸಿಬಿ ಹಾಗೂ ಟಿಪ್ಪರ್ ಮೂಲಕ ತ್ಯಾಜ್ಯ ತೆರವು ಮಾಡಲಾಗುತ್ತಿದೆ ಎಂದರು.

ಅಕ್ಕ ಪಕ್ಕದಲ್ಲಿ ವಾಸ ಮಾಡಲು ಸಾಧ್ಯ ಆಗದಷ್ಟು ಕಸದ ಮಾಫಿಯಾ ಇದ್ದು, ಟ್ರ್ಯಾಕ್ಟರ್ ಹಾಗೂ ಟಿಪ್ಪರ್‌ಗಳಲ್ಲಿ ಬಂದು ಕಸ ಸುರಿದು ಬೆಂಕಿ ಹಚ್ಚುತ್ತಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರವಿ ಜೋಶಿ, -ಸ್ಥಳೀಯ ವೈದ್ಯ ಈ ಭಾಗದಲ್ಲಿ 400ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಕಸದಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 40ಕ್ಕೂ ಹೆಚ್ಚು ವೈದ್ಯರ ಕುಟುಂಬ ಕೂಡ ಇದೇ ವ್ಯಾಪ್ತಿಯಲ್ಲಿ ವಾಸ ಇದೆ. ಕಸ ಸುರಿಯುವವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ. -ಸಂಜೀವ ಸಾವಂತ್, ಬೊಮ್ಮಸಂದ್ರ ಕೈಗಾರಿಕಾ ಸಂಘದ ಪದಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net