

ಕಳಸ: ಕಳಸ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಡೆದ ಕಳಸ ತಾಲೂಕು ಪಂಚಾಯಿತಿ ಪ್ರಥಮ ಕೆಡಿಪಿ ಸಭೆಯಲ್ಲಿ ಕಳಸದ ಮುಖ್ಯ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಕಳಸದ ಜನತೆಯ ಪ್ರಮುಖ ಸಮಸ್ಯೆಗಳಾದ ಕಳಸ ತಾಲೂಕು ಕೇಂದ್ರದಲ್ಲಿ ಇತರೆ ಸರ್ಕಾರಿ ಕಚೇರಿಗಳು ಪ್ರಾರಂಭ ಮಾಡುವ ಬಗ್ಗೆ, ಮಳೆ ಹಾನಿ ಮತ್ತು ಪರಿಹಾರ ಕ್ರಮಗಳು, ಕಳಸ-ಎಸ್.ಕೆ.ಬಾರ್ಡರ್ ರಸ್ತೆ ದುರಸ್ತಿ, ತನೂಡಿ ಮತ್ತು ಹೊಳಲು ಗ್ರಾಮದಲ್ಲಿ ಒಂದು ತಿಂಗಳಿನಿಂದ ಓಡಾಡುತ್ತಿರುವ ಆನೆಗಳ ಸ್ಥಳಾಂತರ, 2019ರಲ್ಲಿ ಸುರಿದ ಮಳೆಯಿಂದ ನಿರಾಶ್ರಿತರಾದ ಚನ್ನಡ್ಲು ಗ್ರಾಮದ ನಿವಾಸಿಗಳಿಗೆ ನಿವೇಶನದ ಹಕ್ಕುಪತ್ರ ನೀಡುವ ಬಗ್ಗೆ ಚರ್ಚೆ ನಡೆಯದಿರುವುದು ತಾಲೂಕಿನ ಜನರಲ್ಲಿ ನಿರಾಸೆ ಮೂಡಿಸಿದೆ.
ನಾಮ ನಿರ್ದೇಶಕ ಸದಸ್ಯ ಅಬ್ದುಲ್ ಶುಕುರು ಮಾತನಾಡಿ, ಹೊನ್ನೇಕಾಡು ನೀರಿನ ಯೋಜನೆ ಪ್ರಾರಂಭವಾಗಿ 10 ವರ್ಷ ಕಳೆದಿದೆ. ಪ್ರತಿ ವರ್ಷ ನಿರ್ವಹಣೆಗೆ ಹಣ ಖರ್ಚು ಮಾಡಲಾಗುತ್ತಿದೆ ಆದರೆ ಕಳಸ ಸರಿಯಾಗಿ ನೀರು ಬರುತ್ತಿಲ್ಲ ಎಂದು ಆರೋಪಿಸಿದರು. ಡ್ಯಾಂ ಕಟ್ಟಿದ ಸ್ಥಳದಲ್ಲಿ ಸಾಕಷ್ಟು ಹೂಳು ತುಂಬಿರುವುದರಿಂದ ಸಮಸ್ಯೆ ಉಂಟಾಗಿದೆ. ಮಳೆ ಕಡಿಮೆ ಆದ ಕೂಡಲೇ ಸರಿಪಡಿಸಲಾಗುವುದು. ಈಗಾಗಲೇ ಜೆಜೆಎಂನಿಂದ 32 ಕೊಳವೆ ಬಾವಿಗಳನ್ನು ತೆರೆಯಲಾಗಿದೆ. ಮಳೆ ಮುಗಿದ ನಂತರ ಉಳಿದ ಕಾಮಾಗರಿ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಪಂ ಇಂಜಿನಿಯರ್ ಸಭೆಯ ಗಮನಕ್ಕೆ ತಂದರು.
ಮೂಡಿಗೆರೆ ತಹಸೀಲ್ದಾರ್ ರಾಜಶೇಖರ್, ಕಳಸ ತಹಸೀಲ್ದಾರ್ ಬಸವರಾಜ್ ಇಒ ದಯಾವತಿ ನಾಮ ನಿರ್ದೇಶನದ ಸದಸ್ಯರಾದ ಎಂ.ಎನ್.ಅಶ್ವಥ್, ಸಂಪತ್‌ಕುಮಾರ್, ಪೀಟರ್‌ಲಾರೆನ್ಸ್ ಡಿಸೋಜಾ, ರವಿ, ಸುರೇಂದ್ರ, ಸರಸ್ವತಿ, ಉದಯ ಕುಮಾರ್, ಪ್ರವೀಣ್, ಗೋಪಾಲ, ಪ್ರಭಾಮಣಿ ಇದ್ದರು.