ಸ್ವಚ್ಛ, ಸುಂದರ ಕೊಡಗಿಗೆ ಕಸವೇ ಕಂಟಕ

Garbage is a thorn in the side of a clean and beautiful garden
Published on

ಮಡಿಕೇರಿ:

ಸ್ವಚ್ಛ ಮತ್ತು ಸುಂದರ ಕೊಡಗು ಎನ್ನುವ ಕನಸಿಗೆ ಮತ್ತೆ ಮತ್ತೆ ಹಿನ್ನಡೆ ಆಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಈ ಸಂಬAಧ ಸಾಕಷ್ಟು ಕೆಲಸಗಳು ಆಗುತ್ತಿದ್ದರೂ ಜಿಲ್ಲೆಯ ಹಲವೆಡೆ ಈಗಲೂ ತ್ಯಾಜ್ಯ ವಿಲೇವಾರಿ ಸಮಸ್ಯೆ ಕಂಡುಬರುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿಯೂ ಇದರಿಂದ ಹೊರತಾಗಿಲ್ಲ. ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳಿಗೂ ಕಸ ಸಂಗ್ರಹಣಾ ವಾಹನಗಳನ್ನು ಒದಗಿಸಲಾಗಿದ್ದರೂ ಅವುಗಳ ಸಮರ್ಪಕ ಉಪಯೋಗ ಆಗುತ್ತಿಲ್ಲ ಎನ್ನುವ ದೂರುಗಳೂ ಇದೆ.

ಕಸ ವಿಲೇವಾರಿ ಪ್ರಕ್ರಿಯೆಗಳು ಎಷ್ಟು ಕೆಟ್ಟದಾಗಿ ನಡೆಯುತ್ತಿದೆ ಎನ್ನುವುದಕ್ಕೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾ.ಪಂ. ಉದಾಹರಣೆ ಆಗಿದ್ದರೆ, ಕಸದಿಂದಲೂ ಆದಾಯ ಗಳಿಸಬಹುದು ಎನ್ನುವುದಕ್ಕೆ ಪೊನ್ನಂಪೇಟೆ ಗ್ರಾ.ಪಂ. ಮಾದರಿಯಾಗಿ ನಿಂತಿದೆ. ಈಗ ಕುಶಾಲನಗರ ಪುರಸಭೆಗೆ ಸೇರ್ಪಡೆ ಆಗಿರುವ ಮುಳ್ಳುಸೋಗೆ ಗ್ರಾ.ಪಂ. ಸಮರ್ಪಕ ತ್ಯಾಜ್ಯ ವಿಲೇವಾರಿಗಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.

ಒಂದು ಊರಿನಲ್ಲಿ ಕಸದ ಸಮಸ್ಯೆ ಇದೆ ಎಂದರೆ ಸ್ಥಳೀಯ ಆಡಳಿತ ಅಥವಾ ಅಧಿಕಾರಿಗಳನ್ನು ಹೊಣೆಗಾರಿಕೆ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳಿವೆ. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಗ್ರಾಮವನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಆಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತಗಳಿಗೆ ಸಹಕಾರ ಕೊಡಬೇಕು. ಹಸಿ ಮತ್ತು ಒಣಕಸವನ್ನು ಮನೆಯಿಂದಲೇ ವಿಂಗಡಿಸಿಕೊಟ್ಟರೆ ಅರ್ಧ ಸಮಸ್ಯೆ ಬಗೆಹರಿದಂತೆ ಆಗುತ್ತದೆ. ಈ ಬಗ್ಗೆಯೂ ಗಮನಹರಿಸಬೇಕಾದ ಅಗತ್ಯವಿದೆ. ಜಿಲ್ಲೆಯಲ್ಲಿನ ಒಟ್ಟಾರೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಸೋಮವಾರಪೇಟೆ ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಕಸ ವಿಲೇವಾರಿ ಸಮಸ್ಯೆ ಬಗೆಹರಿದಿಲ್ಲ. ಬಗೆಹರಿಸುವ ಪ್ರಯತ್ನವನ್ನು ಅನೇಕ ವರ್ಷಗಳ ಹಿಂದೆಯೇ ಮಾಡಬೇಕಿತ್ತು. ಮಾರುಕಟ್ಟೆ ಆವರಣದಲ್ಲೇ ಕಸಕ್ಕೆ ಬೆಂಕಿ ಹಾಕುತ್ತಾರೆ. ಹೊಗೆಯಿಂದ ಸಮಸ್ಯೆಯಾಗುತ್ತಿದೆ. ಕಸವಿಲೇವಾರಿ ಘಟಕದ ಕಾಮಗಾರಿ ಬೇಗ ಪೂರ್ಣಗೊಳ್ಳಲಿ.
ಸಿ.ಬಿ. ಸುರೇಶ್ ಶೆಟ್ಟಿ, ಅಧ್ಯಕ್ಷ, ಜಯಕರ್ನಾಟಕ ಸಂಘಟನೆ

ಸ್ವಚ್ಛ ಭಾರತ ಯೋಜನೆ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ. ಗ್ರಾಮ ಪಂಚಾಯಿತಿ ಕಸ ಸಂಗ್ರಹ ವಾಹನಗಳ ಉಪಯೋಗ ಸರಿಯಾಗಿ ನಡೆಯುತ್ತಿಲ್ಲ. ಇದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರ ಇಚ್ಛಾ ಶಕ್ತಿ ಕೊರತೆ ಕಾಣುತ್ತಿದೆ. ಗ್ರಾಮದಲ್ಲಿ ಗುಂಪು ಮನೆ ಇರುವಲ್ಲಿ ಕಸದ ತೊಟ್ಟಿ ನಿರ್ಮಿಸುವುದು, ಕಸವನ್ನು ಕಸದ ತೊಟ್ಟಿಯಲ್ಲಿ ಹಾಕಲು ಗ್ರಾಮಸ್ಥರಿಗೆ ಅರಿವು ಮೂಡಿಸುವುದು, ವಾರಕ್ಕೆ ಒಂದು ದಿನ ಪ್ರತಿ ವಾರ್ಡಿನಿಂದ ಗ್ರಾಮ ಪಂಚಾಯಿತಿ ವಾಹನದಲ್ಲಿ ಕಸ ಸಂಗ್ರಹಿಸಿ ವಿಲೇವಾರಿ ಮಾಡುವುದು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಕರ್ತವ್ಯ.
ಬೈನೆರವನ ಇಂದ್ರಕುಮಾರ್, ಮದೆ ಮಾಧೂರಪ್ಪ ದೇವಸ್ಥಾನದ ತಕ್ಕ ಮುಖ್ಯಸ್ಥ, ಮದೆನಾಡು ಗ್ರಾಮ

ಕಸ ವಿಲೇವಾರಿ ಪ್ರತಿಯೊಂದು ಕಡೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಗೋಣಿಕೊಪ್ಪ ಪಂಚಾಯ್ತಿ ಆವರಣದಲ್ಲಿ ಕಸದ ರಾಶಿ ಇತ್ತು. ಇದೀಗ ಅದನ್ನು ತೆರವುಗೊಳಿಸಿಲಾಗಿದೆ. ಪ್ರತಿನಿತ್ಯ ಸಂಗ್ರಹವಾಗುವ ಕಸದ ವಿಲೇವಾರಿಗೆ ಸೂಕ್ತ ಜಾಗ ಗುರುತು ಮಾಡಿ ವಿಲೇವಾರಿ ಮಾಡಬೇಕು. ಕಸದ ಗಾಡಿಯನ್ನು ನಿಯಮಿತವಾಗಿ ಎಲ್ಲಾ ಬಡಾವಣೆಗಳಿಗೆ ಕಳುಹಿಸಬೇಕು. ಆಗ ಮಾತ್ರ ವ್ಯವಸ್ಥಿತವಾಗಿ ಕಸ ನಿರ್ವಹಣೆ ಸಾಧ್ಯ.
ಕೋಟೇರ ಚೇತನ್, ಗೋಣಿಕೊಪ್ಪ ನಿವಾಸಿ

ಸ್ವಚ್ಛ ಭಾರತ ಅಭಿಯಾನದಲ್ಲಿ ಕಸದ ವಾಹನ ಆರಂಭದ ದಿನಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿತ್ತು. ಆದರೆ ಇತ್ತೀಚೆಗೆ ಕೆಲಸದ ದಕ್ಷತೆ ಕಡಿಮೆಯಾದಂತೆ ಕಾಣುತ್ತಿದೆ. ಒಂದು ಕಡೆ ಜನರು ಸಮರ್ಪಕವಾಗಿ ಹಸಿ ಕಸ ಮತ್ತು ಒಣಕಸ ವಿಂಗಡನೆ ಮಾಡದಿರುವುದು ಹಾಗೂ ಕಸದ ಗಂಟನ್ನು ನಾಯಿಗಳು ಚೆಲ್ಲಾಡುವುದರಿಂದ ಕಸ ಸಂಗ್ರಹಣ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಕೆಲವು ದಿನಗಳಿಂದ ಕಸ ಸಂಗ್ರಹಣೆ ವಾಹನ ಕಸ ಸಂಗ್ರಹಣೆಗೆ ಬರುತ್ತಿಲ್ಲ
ಅಭಿಲಾಷ್, ಗಾಂಧಿನಗರ, ವಿರಾಜಪೇಟೆ

ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಹನ ನಮ್ಮ ಕಡೆಗಳಲ್ಲಿ ಉತ್ತಮ ಸೇವೆ ನೀಡುತ್ತಿದೆ. ನಿಗದಿ ಪಡಿಸಿದ ಸಮಯದಲ್ಲಿ ಕಸದ ವಾಹನ ಬಂದು ಕಸ ಸಂಗ್ರಹಣೆ ಮಾಡುತ್ತಿದ್ದು ಯಾವುದೇ ರೀತಿಯಾದ ನೈರ್ಮಲ್ಯದ ಸಮಸ್ಯೆ ನಮ್ಮ ಕಡೆಯಲ್ಲಿ ಕಾಣಿಸುತ್ತಿಲ್ಲ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮವಾದ ರೀತಿಯಲ್ಲಿಯೇ ಸ್ವಚ್ಛತಾ ಕೆಲಸ ನಡೆಯುತ್ತಿದೆ.
ಅಂಬಿಕಾ ಬಿ.ಯು., ವಿರಾಜಪೇಟೆ

ಮಳೆಗಾಲದಲ್ಲಿ ತುಂಬಾ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕಸದ ಗಾಡಿ ಕಸ ಸಂಗ್ರಹಣಾ ತೊಟ್ಟಿಯ ಕಡೆಗೆ ಹೋಗಲು ಸರಿಯಾದ ದಾರಿಯ ವ್ಯವಸ್ಥೆ ಇಲ್ಲ. ಇದರಿಂದ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಉದ್ಭವವಾಗುತ್ತದೆ. ಇದನ್ನು ಸರಿಪಡಿಸಿ ಹಳ್ಳಿಗಳಲ್ಲಿ ಸಹ ಸರಿಯಾಗಿ ಕ್ರಮಬದ್ಧವಾಗಿ ಮಾಡಬೇಕಾಗುತ್ತದೆ. ವಾಹನಗಳು ಸಹ ಕೆಲವೊಂದು ಕಡೆ ತೆರಳಲು ಸಾಧ್ಯವಿಲ್ಲ. ಅಂಥ ವಾಹನಗಳನ್ನು ಪಂಚಾಯತಿಗಳು ಬಳಕೆ ಮಾಡುತ್ತಿದೆ.
ಗಣೇಶ್, ಕೃಷಿಕ, ಖ್ಯಾತೆ ಗ್ರಾಮ

ಕಸದ ಸಮಸ್ಯೆ ಎಲ್ಲಾ ಕಡೆ ಇದೆ. ನಮ್ಮ ಜನರು ಇದರ ಬಗ್ಗೆ ಗಮನ ಹರಿಸಬೇಕು. ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಲ್ಲಿಸಬೇಕು. ಸ್ವಚ್ಛ ಭಾರತ ಯೋಜನೆ ಜಾರಿ ತಂದರೂ ಇದು ಉಪಯೋಗ ಆಗುತ್ತಿಲ್ಲ. ಇದರಿಂದ ಪರಿಸರ ಹಾಳಾಗುತ್ತಿದ್ದೆ. ವಿದ್ಯಾವಂತರೆನಿಸಿಕೊAಡವರು ಹಾಗೂ ಕೆಲ ಪ್ರವಾಸಿಗರು ಜಿಲ್ಲೆಗೆ ಆಗಮಿಸುವಾಗ ರಸ್ತೆ ಬದಿಯಲ್ಲಿ ತಾವು ತಿನ್ನುವ ಚಾಕ್ಲೇಟ್ ಇನ್ನಿತರ ತಿಂಡಿ-ತಿನಿಸುಗಳ ಪ್ಲಾಸ್ಟಿಕ್ ಕವರ್‌ಗಳನ್ನೆಲ್ಲಾ ಬಿಸಾಡುವುದನ್ನು ನಿಲ್ಲಿಸಬೇಕು. ಹಾಕಿದ ಕಸವನ್ನು ಸರ್ಕಾರ ತೆಗೆಯಬೇಕು ಎಂಬ ಧೋರಣೆ ದೂರ ಮಾಡಿಕೊಳ್ಳಬೇಕು. ನಮ್ಮ ಗ್ರಾಮ, ನಮ್ಮ ದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ.
ಉಷಾಜಯೇಶ್, ಆಶಾ ಕಾರ್ಯಕರ್ತೆ, ಶನಿವಾರಸಂತೆ.

ಶಾಸಕರು ಬಂದಾಗ ಮಾತ್ರ ಮಾರ್ಕೆಟ್‌ನಲ್ಲಿ ಇದ್ದ ಕಸ ಸ್ವಚ್ಛ ಮಾಡಿ ನಂತರ ಪುನಃ ಕಸ ತುಂಬಿ ಹೋಗಿದ್ದಾರೆ. ಪಟ್ಟಣದ ಮುಖ್ಯ ರಸ್ತೆಯಾದ ಅಂಬೇಡ್ಕರ್ ನಗರ, ಕೆಇಬಿ ಮುಂಬಾಗ, ಹಳೇ ಸಿದ್ದಾಪುರ, ಮೈಸೂರು ರಸ್ತೆಯಲ್ಲಿ ಕಸದ ರಾಶಿ ರಾರಾಜಿಸುತ್ತಿವೆ. ಸ್ವಚ್ಛ ಭಾರತ ವಾಹನ, ಪಂಚಾಯಿತಿ ಕಸ ವಿಲೇವಾರಿ ಟ್ಯಾಕ್ಟರ್‌ನಲ್ಲಿ ವಾರಗಳಿಂದ ಕಸ ವಿಲೇವಾರಿಯಾಗದೇ ಕೊಳೆಯುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರು ಈ ಬಗ್ಗೆ ಗಮನ ಹರಿಸುತ್ತಿಲ್ಲ.
ಸಮ್ಮದ್, ಸಾಮಾಜಿಕ ಹೋರಾಟಗಾರ, ಸಿದ್ದಾಪುರ

ಗ್ರಾ.ಪಂ. ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಪರಿಣಾಮ ಸಿದ್ದಾಪುರದಲ್ಲಿ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕೂಡಲೇ ಶಾಸಕರು ಹಾಗೂ ಮೇಲಧಿಕಾರಿಗಳಿಗೆ ಸಮಸ್ಯೆಯ ಗಂಭೀರತೆ ಮನವರಿಕೆ ಮಾಡಿಕೊಟ್ಟು ವೈಜ್ಞಾನಿಕ ರೀತಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
ಎನ್.ಕೆ. ಅನಿಲ್, ಸಂಚಾಲಕ, ನಾಗರಿಕ ಹೋರಾಟ ಸಮಿತಿ, ಸಿದ್ದಾಪುರ

ತ್ಯಾಜ್ಯವಿಲೇವಾರಿ ಸಮಸ್ಯೆ ಗಮನಕ್ಕೆ ಬಂದ ಕೂಡಲೇ ಸರಿಪಡಿಸುವ ಕೆಲಸ ಮಾಡಲಾಗಿದೆ. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ಸಮಸ್ಯೆ ಕಂಡುಬAದಿತ್ತು. ಇದನ್ನು ಪರಿಹರಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯಾದ್ಯಂತ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದ್ದು ಮನೆಯಿಂದಲೇ ವೈಜ್ಞಾನಿಕ ಕಸ ವಿಂಗಡಣೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಚ್ಛ ಕೊಡಗು ನಮ್ಮ ಗುರಿಯಾಗಿದೆ.
ಆನಂದ್ ಪ್ರಕಾಶ್ ಮೀನಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೊಡಗು ಜಿಲ್ಲಾ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net