

ಬೆಳಗಾವಿ: ಮಹಾನಗರಗಳಲ್ಲಿ ತ್ಯಾಜ್ಯ ವಿಲೇವಾರಿಯೇ ದೊಡ್ಡ ಸವಾಲಾಗುತ್ತಿರುವ ಈ ದಿನಗಳಲ್ಲಿ ಒಣ ಕಸ ವಿಲೇವಾರಿಯಲ್ಲಿ ದಾಖಲೆ ನಿರ್ಮಿಸುವ ಮೂಲಕ ಬೆಳಗಾವಿ ಮಹಾನಗರ ಪಾಲಿಕೆ ದೇಶದ ಗಮನ ಸೆಳೆದಿದೆ. ಮಧ್ಯಪ್ರದೇಶದ ಇಂದೋರ್ ಮಹಾನಗರ ಪಾಲಿಕೆ ಹೊರತುಪಡಿಸಿದರೆ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಹಾಗೂ ಒಣಕಸ ವಿಲೇವಾರಿಯಲ್ಲಿ ಕುಂದಾನಗರಿ ದೇಶದಲ್ಲಿ ಮುಂಚೂಣಿಯಲ್ಲಿದೆ.
2022ರ ಏಪ್ರಿಲ್‌ನಿಂದ 2023ರ ಜುಲೈವರೆಗೆ ಮಹಾನಗರ ಪಾಲಿಕೆಯು ಪ್ಲಾಸ್ಟಿಕ್ ಸೇರಿ ಬರೋಬ್ಬರಿ 13,651 ಟನ್ ಒಣ ಕಸವನ್ನು ಮರುಬಳಕೆಗೆ ಕಳುಹಿಸಿ ದಾಖಲೆ ನಿರ್ಮಿಸಿದೆ. 13,651 ಟನ್ ಒಣ ಕಸದಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಅನ್ನೇ ಸಂಗ್ರಹಿಸಿ ಮರುಬಳಕೆಗೆ ಕಳುಹಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಇಷ್ಟೊಂದು ಪ್ಲಾಸ್ಟಿಕ್ ಹಾಗೂ ಒಣಕಸ ವಿಲೇವಾರಿಯಾಗಿಲ್ಲ. ಬೆಳಗಾವಿ ಪಾಲಿಕೆಯು ಕಸ ವಿಲೇವಾರಿಗೆ ಸಿಮೆಂಟ್ ಫ್ಯಾಕ್ಟರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಫ್ಯಾಕ್ಟರಿಗಳು ಈ ಒಣ ಕಸವನ್ನು ಸಿಮೆಂಟ್ ತಯಾರಿಕೆಯಲ್ಲಿ ಕಚ್ಚಾ ವಸ್ತುವನ್ನಾಗಿ ಬಳಸಿಕೊಳ್ಳುತ್ತಿವೆ. ಸಿಮೆಂಟ್ ಫ್ಯಾಕ್ಟರಿಗಳು ಪ್ರತಿದಿನ 300 ಟನ್‌ವರೆಗೆ ಒಣಕಸವನ್ನು ಮರುಬಳಕೆ ಮಾಡಿಕೊಳ್ಳುತ್ತಿವೆ. ಇದರಿಂದ ಪ್ಲಾಸ್ಟಿಕ್‌ನಿಂದ ಪರಿಸರ ಸಂರಕ್ಷಣೆ ಜತೆಗೆ ಪಾಲಿಕೆಗೆ ಕಸ ವಿಲೇವಾರಿ ಭಾರವೂ ಸಂಪೂರ್ಣ ತಗ್ಗಿದಂತಾಗಿದೆ.
ಪಾಲಿಕೆಗೆ ಶೀಘ್ರ ಇಪಿಆರ್ ಪ್ರಮಾಣ ಪತ್ರ: ಬೆಳಗಾವಿ ನಗರದಲ್ಲಿ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಕಂಪನಿಗಳು ಎಷ್ಟು ಪ್ರಮಾಣದ ಪ್ಲಾಸ್ಟಿಕ್ ಬಳಸಿ, ಪ್ಯಾಕ್ ಮಾಡಿ ಮಾರಾಟ ಮಾಡಿವೆ ಎಂಬ ಬಗ್ಗೆ ಬ್ರಾೃಂಡೆಡ್ ಕಂಪನಿಗಳು ಮಹಾನಗರ ಪಾಲಿಕೆಗೆ ಮಾಹಿತಿ ಸಲ್ಲಿಸಿವೆ. ವಿವಿಧ ಕಂಪನಿಗಳ ಉತ್ಪನ್ನಗಳನ್ನು ಪ್ಯಾಕ್ ಮಾಡುವುದಕ್ಕೆ ಸಾವಿರಾರು ಟನ್ ಪಾಸ್ಟಿಕ್ ಬಳಸಿರುವುದು ಗೊತ್ತಾಗಿದೆ. ಇಂತಹ ಪ್ಲಾಸ್ಟಿಕ್ ವಿಲೇವಾರಿ ವೆಚ್ಚದ ಹಣವನ್ನು ಆಯಾ ಬ್ರಾೃಂಡೆಡ್ ಕಂಪನಿಯವರೇ ಪಾಲಿಕೆಗೆ ಸಂದಾಯ ಮಾಡಿದ್ದಾರೆ. ಈ ಪ್ರಕ್ರಿಯೆ ದಾಖಲಿಸುವುದರಲ್ಲಿ ಬೆಳಗಾವಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಎಕ್ಸ್‌ಟೆಂಡೆಡ್ ಪ್ರೊಡ್ಯೂಸರ್ ರಿಸ್ಪಾನ್ಸಿಬಿಲಿಟಿ (ಇಪಿಆರ್) ಪ್ರಮಾಣಪತ್ರ ಪಡೆಯುವ ಅಂಚಿನಲ್ಲಿದೆ. ಈ ಪ್ರಮಾಣಪತ್ರ ಪಡೆಯುವುದಕ್ಕೆ ಮಹಾನಗರ ಪಾಲಿಕೆ ದಾಖಲೆಗಳನ್ನು ಅಪ್‌ಲೋಡ್ ಮಾಡುತ್ತಿದೆ. ಕೆಲ ದಿನಗಳಲ್ಲಿ 5 ಟನ್ ಪ್ಲಾಸ್ಟಿಕ್ ಬಳಸಿ 100 ರಿಂದ 200 ಮೀ. ರಸ್ತೆ ನಿರ್ಮಿಸಲಿದ್ದು, ಆ ಬಳಿಕ ಇಪಿಆರ್ ಪ್ರಮಾಣ ಪತ್ರಕ್ಕಾಗಿ ದಾಖಲೆ ಸಲ್ಲಿಸುವ ಪ್ರಕ್ರಿಯೆ ಅಂತಿಮಗೊಳ್ಳಲಿದೆ. ಇಪಿಆರ್ ಪ್ರಮಾಣಪತ್ರ ಬೆಳಗಾವಿ ಪಾಲಿಕೆಗೆ ಶೀಘ್ರದಲ್ಲೇ ದೊರೆಯಲಿದ್ದು, ದೇಶದಲ್ಲಿ ಈ ಸಾಧನೆ ಮಾಡಿದ 3ನೇ ಹಾಗೂ ರಾಜ್ಯದ 2ನೇ (ಮೊದಲನೆಯದ್ದು ಮೈಸೂರು) ಮಹಾನಗರ ಪಾಲಿಕೆ ಎಂಬ ಕೀರ್ತಿಗೆ ಬೆಳಗಾವಿ ಪಾತ್ರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆಗೆ ತಗ್ಗಿದ ಹೊರೆ: ಬಾಲಗಕೋಟೆ ಜಿಲ್ಲೆಯ ಲೋಕಾಪುರ ಜೆ.ಕೆ. ಸಿಮೆಂಟ್, ಬೆಳಗಾವಿ ಜಿಲ್ಲೆಯ ದಾಲ್ಮಿಯಾ ಸಿಮೆಂಟ್‌ನೊಂದಿಗೆ ಒಣಕಸ ವಿಲೇವಾರಿಗೆ ಮಹಾನಗರ ಪಾಲಿಕೆ ಒಪ್ಪಂದ ಮಾಡಿಕೊಂಡಿವೆ. ಪ್ರತಿದಿನ ಸಿಮೆಂಟ್ ಫ್ಯಾಕ್ಟರಿಗಳು ನೂರಾರು ಟನ್ ಒಣಕಸ ತೆಗೆದುಕೊಂಡು ಹೋಗಿ ಸಿಮೆಂಟ್ ತಯಾರಿಕೆಗೆ ಬಳಸುತ್ತಿವೆ. ಇದರಿಂದ ಕಸ ವಿಲೇವಾರಿಗೆ ಮಹಾನಗರ ಪಾಲಿಕೆ ಪ್ರತಿ ತಿಂಗಳು ವ್ಯಯವಾಗುತ್ತಿದ್ದ ಕೋಟ್ಯಂತರ ರೂಪಾಯಿ ಉಳಿಯುತ್ತಿದೆ. ಬೆಳಗಾವಿ ತಾಲೂಕಿನ ತುರಮರಿಯಲ್ಲಿ 250 ಟನ್ ಕಸ ಸಂಗ್ರಹ ಸಾಮರ್ಥ್ಯದ ಸ್ಥಳಾವಕಾಶ ಇದೆ. ಕಸ ಸಂಗ್ರಹಕ್ಕೆ ಹೆಚ್ಚಿನ ಸ್ಥಳಾವಕಾಶವಿಲ್ಲದೆ ತೊಂದರೆಯಾಗಿತ್ತು. ಹೀಗಾಗಿ ಪ್ರತಿದಿನ ಸಿಮೆಂಟ್ ಫ್ಯಾಕ್ಟರಿಯವರು ಬಂದು ಕಸ ವಿಲೇವಾರಿ ಮಾಡುತ್ತಿರುವುದು ಪಾಲಿಕೆ ಅಧಿಕಾರಿಗಳ ಭಾರ ಇಳಿಸಿದಂತಾಗಿದೆ. ಫ್ಯಾಕ್ಟರಿಯವರು ಒಂದು ಬಾರಿ ಟಿಪ್ಪರ್‌ನಲ್ಲಿ 15-20 ಟನ್‌ಗಟ್ಟಲೆ ಕಸ ಸಾಗಿಸುತ್ತಾರೆ. ಪ್ರತಿ ಟ್ರಿಪ್‌ಗೆ 14 ಸಾವಿರ ರೂ. ಖರ್ಚಾಗುತ್ತದೆ. ಇದೇ ರೀತಿ ತಿಂಗಳಲ್ಲಿ ನೂರಾರು ಟ್ರಿಪ್ ಕಸ ಸಾಗಣೆಯಾಗುತ್ತಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹಾಗೂ ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಬೆಳಗಾವಿ ಪಾಲಿಕೆಯು ಸಿಮೆಂಟ್ ಫ್ಯಾಕ್ಟರಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಪ್ಲಾಸ್ಟಿಕ್ ಸೇರಿ ಒಣಕಸ ವಿಲೇವಾರಿಯಲ್ಲಿ ಪಾಲಿಕೆ ಮುಂದಿದೆ. ಇಪಿಆರ್ ಪ್ರಮಾಣ ಪತ್ರ ಪಡೆಯುವುದಕ್ಕೆ ಎಲ್ಲ ರೀತಿಯ ಡಾಕ್ಯುಮೆಂಟೇಶನ್ ಮಾಡುತ್ತಿದ್ದೇವೆ.| ಅಶೋಕ ದುಡಗುಂಟಿ ಮಹಾನಗರ ಪಾಲಿಕೆ ಆಯುಕ್ತ ಬೆಳಗಾವಿ
| ಜಗದೀಶ ಹೊಂಬಳಿ ಬೆಳಗಾವಿ