ಕಸದ ಕೊಂಪೆಯಾಗುತ್ತಿದೆ ಇತಿಹಾಸ ಪ್ರಸಿದ್ಧ ಹಂಪಿ, ಸ್ವಚ್ಛತೆಯತ್ತ ಹರಿಸುತ್ತಿಲ್ಲ ಇಲಾಖೆಗಳು ಚಿತ್ತ

270120 Hampi Cleaning
Published on

ಹೊಸಪೇಟೆ: ವಿಶ್ಪಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪುರಾಣ, ಇತಿಹಾಸ ಪ್ರಸಿದ್ಧ ಹಂಪಿ ನಾನಾ ಕಾರಣಗಳಿಂದಾಗಿ ಕಸದ ಕೊಂಪೆಯಾಗುತ್ತಿದೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರ, ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ), ಪ್ರವಾಸೋದ್ಯಮ ಇಲಾಖೆ ಮತ್ತು ಹಂಪಿ ಗ್ರಾಪಂ ಅಧಿಕಾರಿಗಳ ನಿರ್ಲಕ್ಷೃವೇ ಇದಕ್ಕೆ ಕಾರಣ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಹಂಪಿಯಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ತ್ಯಾಜ್ಯ ನಿವಾರಣೆಗೆ ಮುಂದಾಗದ ಇಲಾಖೆಗಳು ಒಂದರ ಮೇಲೊಂದು ಬೆರಳು ಮಾಡುತ್ತಿವೆ.

ಹಂಪಿ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ಪಡೆಯಲು ನಾಲ್ಕೂ ಇಲಾಖೆಗಳು ಪೈಪೋಟಿ ನಡೆಸುತ್ತಿವೆ. ಆದರೆ, ಸ್ವಚ್ಚತೆ ವಿಷಯ ಬಂದಾಗ ಮಾತ್ರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ ಎಂಬುದು ಹಂಪಿ ನಿವಾಸಿಗಳ ಆರೋಪ. ಹಂಪಿಯು ಪುಣ್ಯಕ್ಷೇತ್ರವೂ ಹೌದು. ಐತಿಹಾಸಿಕ ಪ್ರವಾಸಿ ತಾಣವೂ ಹೌದು. ಸ್ವಚ್ಛತೆ ಕಾಪಾಡಿ ಮೂಲ ಸೌಲಭ್ಯ ಒದಗಿಸುವುದು ಇಲಾಖೆಗಳ ಜವಾಬ್ದಾರಿ. ಆದರೆ, ಇದು ಯಾರ ಹೊಣೆ ಎಂಬುದೇ ಗೊಂದಲವಾಗಿದ್ದರಿಂದ ಹಂಪಿ ಮಾತ್ರ ಕಸದ ಕೊಂಪೆಯಾಗುತ್ತಿದೆ.

ತುಂಗಭದ್ರಾ ನದಿ ದಂಡೆಯಲ್ಲಿ ಕಸ, ಚಿಂದಿ ಬಟ್ಟೆ ಮತ್ತಿತರ ತ್ಯಾಜ್ಯ ಬಿದ್ದಿರುತ್ತದೆ. ಸಾವಿರ ಸಾವಿರ ಸಂಖ್ಯೆಯ ಭಕ್ತರು, ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಮೂಲ ಸೌಲಭ್ಯ ಇಲ್ಲದೇ ಬೇಸರ ವ್ಯಕ್ತಪಡಿಸುತ್ತಾರೆ. ಸ್ವಚ್ಛತೆ ಮತ್ತು ಸ್ಮಾರಕಗಳ ರಕ್ಷಣೆಗಾಗಿ ನೂರಾರು ಸಿಬ್ಬಂದಿಯನ್ನು ಎಎಸ್‌ಐ ಹೊಂದಿದ್ದರೂ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ನದಿ ದಂಡೆಯ ಸ್ನಾನಘಟ್ಟದಲ್ಲಿ ಶುಚಿಯಾಗಲು ಹೊರಟವರಿಗೆ ಅಲ್ಲೇ ಬಿದ್ದಿರುವ ಮೈಲಿಗೆ ಬಟ್ಟೆಗಳು ಸ್ವಾಗತಿಸುತ್ತವೆ. ಕಲ್ಲು ಬಂಡೆಗಳ ಮೇಲೆ, ಕಸ ಸುಟ್ಟ ಬೂದಿ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಣ್ಣಿಗೆ ರಾಚುತ್ತವೆ.

ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆಗೆ ತಕ್ಕಂತೆ ಗ್ರಾಪಂಗೆ ಸ್ವಚ್ಛತಾ ಸಿಬ್ಬಂದಿ ಇಲ್ಲ. ಇರುವ ಮಾನ್ವ ಸಂಪನ್ಮೂಲ ಬಳಸಿಕೊಂಡು ಸ್ವಚ್ಛತೆ ಕಾಪಾಡುತ್ತಿದ್ದೇವೆ. ಹಂಪಿ ಅಭಿವೃದ್ಧಿಗೆ ಗ್ರಾಪಂ ಜತೆಗೆ ಎಎಸ್‌ಐ, ಪ್ರವಾಸೋಧ್ಯಮ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ ಕೈ ಜೋಡಿಸಬೇಕು. ಹಂಪಿಯ ನದಿ ತೀರ, ಸ್ಮಾರಕಗಳ ಸ್ವಚ್ಛತೆ ಗ್ರಾಪಂ ವ್ಯಾಪ್ತಿಗೊಳಪಡುವುದಿಲ್ಲ.
| ರಾಜೇಶ್ವರಿ ಹಂಪಿ ಗ್ರಾಪಂ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net