

ಮಂಗಳೂರು: ಸಮಾರಂಭದಲ್ಲಿ ಬಳಸಿದ ಪ್ಲಾಸ್ಟಿಕ್ ಲೋಟ, ಪ್ಲೇಟ್‌ಗಳ ರಾಶಿ, ಮದ್ಯ ಸೇವಿಸಿ ಎಸೆದ ಬಾಟಲಿಗಳು, ಅಲ್ಲಲ್ಲಿ ರಾಶಿ ಹಾಕಿರುವ ಕಟ್ಟಡಗಳ ತ್ಯಾಜ್ಯ, ಕಸ ಹಾಕದಂತೆ ಎಚ್ಚರಿಕೆ ಬೋರ್ಡ್ ಅಡಿಯಲ್ಲೇ ಪ್ಲಾಸ್ಟಿಕ್‌ಗಳಲ್ಲಿ ತಂದು ಹಾಕಿರುವ ಹಸಿ ಕಸ …
ಇದು ಬೋಂದೆಲ್ ಮೈದಾನದ ಸುತ್ತಮುತ್ತಲಿನ ದೃಶ್ಯ. ಇಲ್ಲಿ ಬೆಳಗ್ಗೆ ಮತ್ತು ಸಂಜೆಯ ವೇಳೆ ನೂರಾರು ಮಂದಿ ವಾಕಿಂಗ್‌ಗೆ, ಆಟವಾಡಲು ಬರುತ್ತಾರೆ. ಆದರೆ ಸುತ್ತಲಿನ ಪರಿಸರವನ್ನು ಹಾಳು ಮಾಡುವವರ ಸಂಖ್ಯೆ ಹೆಚ್ಚಿದೆ. ಸಮಾರಂಭಗಳಲ್ಲಿ ಉಪಯೋಗಿಸಲಾದ ಪ್ಲಾಸ್ಟಿಕ್ ಪೇಟ್, ಲೋಟ ಹಾಗೂ ಉಳಿಕೆಯಾದ ಆಹಾರ ತ್ಯಾಜ್ಯವನ್ನು ಮೈದಾನದ ಬದಿಯಲ್ಲಿ ತಂದು ಹಾಕುತ್ತಿದ್ದಾರೆ. ಪಾಲಿಕೆಯ ತ್ಯಾಜ್ಯ ವಿಲೇವಾರಿ ವಾಹನಗಳು ಈ ತ್ಯಾಜ್ಯಗಳನ್ನು ಕೊಂಡೊಯ್ದರೂ ಮತ್ತೆ ಮತ್ತೆ ಇಲ್ಲಿ ತಂದು ಹಾಕುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಪರಿಸರವಾದಿ ಕೃಷ್ಣಪ್ಪ ಬೋಂದೆಲ್ ಅವರು ಮೈದಾನದ ಸುತ್ತ ಹಾಗೂ ತಮ್ಮ ಮನೆಯ ಹಿಂಭಾಗದ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ಬೇಸಿಗೆಯಲ್ಲಿ ನೀರು ಹಾಕಿ ಒಣಗಿ ಹೋಗದಂತೆ ಕಾಪಾಡುತ್ತಿದ್ದಾರೆ. ಅಲ್ಲಿಗೂ ಕೆಲವು ಕಿಡಿಗೇಡಿಗಳು ಬಂದು ಬೆಂಕಿ ಇಟ್ಟು ಹೋಗುತ್ತಿದ್ದಾರೆ. ಗಿಡಗಳು ಒಣಗಿದ ಬಳಿಕ ಸೌದೆಗೆಂದು ಕಡಿದುಕೊಂಡು ಹೋಗುತ್ತಿದ್ದಾರೆ.
ಕಟ್ಟಡ ತ್ಯಾಜ್ಯ: ಬೋಂದೆಲ್ ಮೈದಾನದ ಪರಿಸರದಲ್ಲಿ ಸರ್ಕಾರಿ ಖಾಲಿ ಜಾಗವಿದ್ದು, ಅಲ್ಲಿ ರಾತ್ರಿ ವೇಳೆ ಲಾರಿ, ಪಿಕಪ್ ಮೂಲಕ ಕಲ್ಲು, ಮಣ್ಣು ತಂದು ಹಾಕುತ್ತಿದ್ದಾರೆ. ಕಟ್ಟಡಗಳ ಸಿಮೆಂಟ್ ತ್ಯಾಜ್ಯವನ್ನು ತಂದು ರಾಶಿ ಹಾಕಿ ಪರಿಸರದ ನಿವಾಸಿಗಳು ನೆಮ್ಮದಿ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಅವರನ್ನು ಪ್ರಶ್ನಿಸಲು ಬಂದರೆ ಧಮ್ಕಿ ಹಾಕುವ ಮಟ್ಟಕ್ಕೆ ತಲುಪಿದ್ದಾರೆ.
ಅನೈತಿಕ ಚಟುವಟಿಕೆ ತಾಣ
ರಾತ್ರಿಯಾಗುತ್ತಿದ್ದಂತೆ ಐಷಾರಾಮಿ ಕಾರುಗಳು ಮೈದಾನಕ್ಕೆ ಬರತೊಡಗುತ್ತವೆ. ಕಾರಿನಲ್ಲೇ ಮಿನಿ ಬಾರ್ ತೆರೆದುಕೊಳ್ಳುತ್ತದೆ. ಬಳಿಕ ತ್ಯಾಜ್ಯ, ಖಾಲಿ ಬಾಟ್ಲಿಗಳನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ಬೆಳಗ್ಗೆ ವಾಕಿಂಗ್ ಬಂದ ಕೆಲವರು ಅವುಗಳನ್ನು ಹೆಕ್ಕಿ ಬದಿಗೆ ಹಾಕುತ್ತಿದ್ದಾರೆ. ನಿರ್ಜನ ಪ್ರದೇಶವಾದ ಕಾರಣ ಇಲ್ಲಿ ಅನೈತಿಕ ಚಟುವಟಿಕೆಯೂ ನಡೆಯುತ್ತಿದೆ. ಗಾಂಜಾ ಸೇವನೆ, ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಬೋಂದೆಲ್ ಮೈದಾನ ಹಾಗೂ ಸುತ್ತಮುತ್ತ ರಾತ್ರಿ ವೇಳೆ ಎಲ್ಲಿಂದಲೋ ತಂದು ತ್ಯಾಜ್ಯ ಸುರಿದು ಹೋಗುತ್ತಿದ್ದಾರೆ. ನಿರಂತರವಾಗಿ ನಡೆಯುತ್ತಲೇ ಇದೆ. ಪಾಲಿಕೆಗೆ ಕರೆ ಮಾಡಿ ಅದನ್ನು ತೆಗೆದುಕೊಂಡು ಹೋಗುವಂತೆ ಹೇಳಿದ ಎರಡು ದಿನಗಳ ಬಳಿಕ ಅವರು ಬಂದು ಕೊಂಡೊಯ್ಯುತ್ತಿದ್ದಾರೆ. ಜನರು ಅರ್ಥ ಮಾಡಿಕೊಂಡು ನಮ್ಮ ಪರಿಸರವನ್ನು ಸಂರಕ್ಷಿಸಬೇಕಾಗಿದೆ. ಇಲ್ಲದಿದ್ದರೆ ಕುಡಿಯುವ ನೀರಿಗೆ ಈಗಾಗಲೇ ಪರದಾಡುವಂತಾಗಿದೆ. ಮುಂದಿನ ವರ್ಷಗಳಲ್ಲಿ ಇದರ ಬೆಲೆ ತೆರಬೇಕಾಗಬಹುದು.
ಕೃಷ್ಣಪ್ಪ ಬೋಂದೆಲ್
ಪರಿಸರವಾದಿ