

ಕಾಸರಗೋಡು: ಜಿಲ್ಲಾಮಟ್ಟದ ತ್ಯಾಜ್ಯ ನಿರ್ವಹಣೆ ನವಕೇರಳ ಬ್ಲಾಕ್ ಮಟ್ಟದ ಅಧಿಕಾರಿಗಳ ಎರಡು ದಿನಗಳ ಕಾರ್ಯಾಗಾರ ಸ್ಥಳೀಯಾಡಳಿತ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರ ಸಭಾಂಗಣದಲ್ಲಿ ಜರುಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಜಲಾನಯನ ಪ್ರದೇಶದಲ್ಲಿ ಕಸ ಎಸೆಯುವ ನಮ್ಮ ಮನೋಸ್ಥಿತಿ ಬದಲಾಗಬೇಕಾಗಿದೆ. ಕಸಮುಕ್ತ ಕೇರಳ ಅಭಿಯಾನ 2024-25ರ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರು ಪ್ರಜ್ಞಾವಂತರಾಗಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಥಳೀಯಾಡಳಿತ ಇಲಾಖೆ ಉಪ ನಿರ್ದೇಶಕ ಕೆ.ವಿ.ಹರಿದಾಸ್, ಸಹಾಯಕ ನಿರ್ದೇಶಕ ಟಿ.ವಿ.ಸುಭಾಷ್, ನವಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ಸ್ವಚ್ಛತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಜಯನ್, ಕೆಎಸ್‌ಡಬ್ಲ್ಯು ಎಂಪಿ ಸಂಯೋಜಕ ಮಿಥುನ್ ಕೃಷ್ಣನ್, ಕ್ಲೀನ್ ಕೇರಳ ಕಂಪನಿ ಜಿಲ್ಲಾ ವ್ಯವಸ್ಥಾಪಕ ಮಿಥುನ್ ಗೋಪಿ, ಹಸಿರು ಕೇರಳ ಮಿಷನ್ ಕೋ-ಆರ್ಡಿನೇಟರ್ ಎಚ್.ಕೃಷ್ಣ, ಸಂಪನ್ಮೂಲ ವ್ಯಕ್ತಿ ಎಂ.ಕೆ.ಹರಿದಾಸ್ ಹಾಗೂ ಕಾರ್ಯಪಾಲಕ ಇಂಜಿನಿಯರ್ ಸುನೀಲ್ ಕುಮಾರ್ ನೇತೃತ್ವ ವಹಿಸಿದ್ದರು. ಎಲ್‌ಎಸ್‌ಜಿಡಿ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ ಸ್ವಾಗತಿಸಿದರು. ಕಿಲಾ ಫೆಸಿಲಿಟೇಟರ್ ಕೆ.ಅಜಯಕುಮಾರ್ ವಂದಿಸಿದರು.