

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನಗರಸಭೆ ವತಿಯಿಂದ ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರು ಕೆಲವು ಕಿಡಿಗೇಡಿಗಳ ಕೃತ್ಯದಿಂದ ನಗರದ ಅಂದ ಕೆಡುವ ಜತೆಗೆ ರಸ್ತೆ ಬದಿಯ ಮರಗಳೂ ಬಲಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥಹದ್ದೊಂದು ಪ್ರಕರಣ ಹೊಸಕೋಟೆ ನಗರದ 26 ನೇ ವಾರ್ಡ್ ವ್ಯಾಪ್ತಿಯಲ್ಲಿನ ಕಣ್ಣೂರಳ್ಳಿ ಮುಖ್ಯರಸ್ತೆಯಲ್ಲಿರುವ ಅನುಶ್ರೀ ಬೇಕರಿ ಸಮೀಪ ಕಂಡುಬಂದಿದೆ.
ಪ್ರತಿನಿತ್ಯ ನಗರಸಭೆ ವತಿಯಿಂದ ಕಸ ಪಡೆಯುವ ವಾಹನಗಳು ಬಂದರೂ ಇಲ್ಲಿನ ಕೆಲವು ವಾಣಿಜ್ಯ ಮಳಿಗೆಯವರು ಹಾಗೂ ಸಾರ್ವಜನಿಕರು ಕಸವನ್ನು ತಂದು ಮರದ ಬುಡಗಳಲ್ಲಿ ಎಸೆಯುತ್ತಾರೆ, ಅವುಗಳನ್ನು ಆಗಾಗ ನಗರಸಭೆ ವತಿಯಿಂದ ತೆರವುಗೊಳಿಸಲಾಗುತ್ತದೆ ಕೆಲವು ವೇಳೆ ಕಸ ತೆರವು ತಡವಾದರೆ ಕಿಡಿಗೇಡಿಗಳು ಬೆಂಕಿ ಹಾಕಿ ಸ್ಥಳದಲ್ಲೇ ಕಸ ಕರಗಿಸುವ ಕೃತ್ಯ ಎಸಗುತ್ತಿದ್ದಾರೆ, ಇದರ ಪರಿಣಾಮವಾಗಿ ಮರದ ಬುಡ ಭಾಗಶಃ ಸುಟ್ಟುಹೋಗಿದ್ದು ಮಳೆಗಾಳಿಗೆ ಧರೆಗುರುಳುವ ಸ್ಥಿತಿ ನಿರ್ಮಾಣವಾಗಿದೆ.
ಅನಧಿಕೃತ ಪ್ಲೆಕ್ಸ್‌ಗಳಿಗೂ ಕಡಿವಾಣವಿಲ್ಲ: ಇನ್ನು ಹೊಸಕೋಟೆ ನಗರ ವ್ಯಾಪ್ತಿಯಲ್ಲಿ ಸಿಕ್ಕ ಸಿಕ್ಕ ಮರಗಳಲ್ಲಿ ಅನಧಿಕೃತ ಪ್ಲೆಕ್ಸ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಇವಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಸಾಮಾನ್ಯವಾಗಿ ಸ್ಥಳೀಯ ರಾಜಕೀಯ ಮುಖಂಡರ ಹುಟ್ಟುಹಬ್ಬ ಮತ್ತಿತರ ಖಾಸಗಿ ಕಾರ್ಯಕ್ರಮಗಳ ಬ್ಯಾನರ್‌ಗಳಾಗಿರುವುದರಿಂದ ನಗರಸಭೆ ಸಿಬ್ಬಂದಿ ಮೇಲೆ ಪ್ರಭಾವ ಬೀರುತ್ತಾರೆ, ಕೆಲವು ದಿನ ಕಳೆದ ಬಳಿಕ ಅವುಗಳು ಮರದ ಬುಡ ಸೇರಿ ಕಸದೊಂದಿಗೆ ಬೆರೆಯುತ್ತವೆ ಮತ್ತೆ ಅದೇ ಕಿಡಿಗೇಡಿಗಳ ಕೃತ್ಯಕ್ಕೆ ಸುಟ್ಟುಬೂದಿಯಾಗುತ್ತವೆ ಇದರ ಪರಿಣಾಮವಾಗಿ ಮರಗಳು ಆಹುತಿಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.
ಅರಣ್ಯ ಇಲಾಖೆಗೆ ಮನವಿ: ಹೊಸಕೋಟೆಯಲ್ಲದೆ ಹಲವು ಕಡೆಗಳಲ್ಲಿ ಇಂಥ ದೃಶ್ಯಗಳು ಕಂಡುಬರುತ್ತಿವೆ, ಮರದ ಬುಡದಲ್ಲಿ ಕಸಕ್ಕೆ ಬೆಂಕಿ ಹಾಕುವುದರಿಂದ ಕ್ರಮೇಣ ಮರಗಳು ಧರೆಶಾಹಿಯಾಗುತ್ತಿವೆ, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಮರಗಳ ಸರ್ವೆ ನಡೆಸಿ ಮರಗಳಿಗೆ ಐಡೆಂಟಿಟಿ ಸಂಖ್ಯೆ ಹಾಕಿ ಅವುಗಳ ರಕ್ಷಣೆಗೆ ಕ್ರಮಕೈಗೊಳ್ಳಬೇಕು, ಇದೇ ರೀತಿ ಹೊಸ ಹೊಸ ಬಡಾವಣೆಗಳಲ್ಲಿ ನಾನಾ ಕಾರಣಕ್ಕೆ ಮರಗಳ ಮಾರಣ ಹೋಮ ನಡೆಯುತ್ತಿದೆ ಇವುಗಳನ್ನು ತಪ್ಪಿಸಲು ನಗರಸಭೆ ಸಹಯೋಗದಲ್ಲಿ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು, ಮರದ ಸ್ಥಿತಿಗತಿ ಗಮನಿಸಿ ಮರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು ಇದಕ್ಕೆ ಸಂಬಂಧಿಸಿದಂತೆ ರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು, ಒಂದು ವೇಳೆ ಮರ ಬೀಳುವ ಪರಿಸ್ಥಿತಿ ಇದ್ದರೆ ತೆರವುಗೊಳಿಸುವ ಕೆಲಸ ಮಾಡಲಾಗುವುದು ಜತೆಗೆ ಮರದ ಬುಡಗಳಿಗೆ ಕಸ ಎಸೆಯುವುದು ಹಾಗೂ ಬೆಂಕಿ ಹಾಕುವವರ ವಿರುದ್ಧ ಕ್ರಮ ಜರುಗಿಸಲಾಗುವುದು.
ನೀಲಲೋಚನ ಪ್ರಭು, ನಗರಸಭೆ ಆಯುಕ್ತ
ಇಲ್ಲಿನ ಅನುಶ್ರೀ ಬೇಕರಿಯ ಸಮೀಪದ ಮರದ ಬುಡದಲ್ಲಿ ಕಸ ಸುಟ್ಟಿರುವುದರಿಂದ ಮರದ ಬುಡ ಭಾಗರ್ಶ ಅರ್ಧ ಸುಟ್ಟು ಹೋಗಿದ್ದು ಈಗಲೋ ಆಗಲೋ ಬೀಳುವಂತಾಗಿದೆ. ಮಳೆ ಆರಂಭವಾಗಿದ್ದು ಅನಾಹುತ ಸಂಭವಿಸುವ ಮುನ್ನ ಇದನ್ನು ಪರಿಶೀಲಿಸಿ ರಕ್ಷಿಸಬೇಕಾಗಿದೆ ಇಲ್ಲವಾದರೆ ದೊಡ್ಡ ಅನಾಹುತಕ್ಕೆ ದಾರಿಯಾಗಲಿದೆ, ಅದೇ ರೀತಿ ನಗರದಲ್ಲಿನ ಮರಗಳ ಸರ್ವೆ ನಡೆಸಿ ಮರಗಳ ರಕ್ಷಣೆಗೆ ಕ್ರಮಕೈಗೊಳ್ಳಬೇಕಿದೆ.
ಚಂದ್ರು, ಹೊಸಕೋಟೆ