

ಕುಶಾಲನಗರ: ಕುಶಾಲನಗರ ನಾಲ್ಕನೇ ಬ್ಲಾಕ್ ಮಂಜುನಾಥ ಬಡಾವಣೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಕಸ ಎಸೆಯುತ್ತಿದ್ದು, ಮೂಗು ಮುಚ್ಚಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಾಲಭೈರವೇಶ್ವರ ರಸ್ತೆ ಮತ್ತು ಯೋಗ ಕ್ಷೇಮ ಆಸ್ಪತ್ರೆಗೆ ತೆರಳುವ ರಸ್ತೆ ಪಕ್ಕದ ಖಾಲಿ ಜಾಗ ಅನಧಿಕೃತವಾಗಿ ತ್ಯಾಜ್ಯ ಎಸೆಯುವ ತಾಣವಾಗಿ ಪರಿವರ್ತನೆ ಆಗಿದೆ. ಪ್ರತಿದಿನವೂ ಇಲ್ಲಿ ಕಸ ತಂದು ಹಾಕಲಾಗುತ್ತಿದೆ.
ಪುರಸಭೆಯ ವಾಹನ ಮನೆ ಮನೆಗೆ ಬಂದು ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರೂ ಕೆಲವರು ಆ ವಾಹನಗಳಿಗೆ ಕಸ ಹಾಕದೆ ಇಲ್ಲಿಯ ಖಾಲಿ ಜಾಗದಲ್ಲಿ ಕಸ ತಂದು ಸುರಿಯತ್ತಿದ್ದಾರೆ. ದಿನದಿಂದ ದಿನಕ್ಕೆ ಇಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳಿದ್ದು, ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ. ಈ ಬಗ್ಗೆ ಈಗಾಗಲೇ ಪುರಸಭೆ ಮುಖ್ಯಾಧಿಕಾರಿ ಗಮನಕ್ಕೆ ಲಿಖಿತವಾಗಿ ತಂದಿದ್ದರೂ ಪ್ರಯೋಜನ ಆಗಿಲ್ಲ. ಇಲ್ಲಿ ಕಸ ಎಸೆಯದಂತೆ ಸೂಚನಾ ಫಲಕ ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.