ಜನರ ಸಹಕಾರವಿಲ್ಲದೆ ಕಸ ನಿರ್ಮೂಲನೆ ಅಸಾಧ್ಯ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

waste plant
Published on

ಬೆಂಗಳೂರು: ಜನರ ಸಹಕಾರವಿಲ್ಲದಿದ್ದರೆ ಮಹಾನಗರದಲ್ಲಿ ಕಸದ ನಿರ್ಮೂಲನೆ ಅಸಾಧ್ಯ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಬಿಟಿಎಂ ಲೇಔಟ್ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಆಡುಗೋಡಿಯಲ್ಲಿ ಅರೆ ಸ್ವಯಂಚಾಲಿತ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಹಾಗೂ ಕಸ ಕಿಯೋಸ್ಕ್ ಉದ್ಘಾಟಿಸಿದ ಬಳಿಕ ಬುಧವಾರ ಮಾತನಾಡಿದರು.

ಬಿಟಿಎಂ ಲೇಔಟ್‌ನಲ್ಲಿ ದ್ವಿತೀಯ ಹಂತದ ಟ್ರಾನ್ಸಫರ್ ಸ್ಟೇಷನ್ ನಿರ್ಮಿಸಿದ್ದು ಯಶಸ್ವಿಯಾಗಿ ನಡೆಯುತ್ತಿದೆ. ಕೋರಮಂಗಲದಲ್ಲೂ ಕಸ-ರಸ ಘಟಕ, ಎಲೆ ಸಂಸ್ಕರಣಾ ಘಕಟವು ಕೂಡಾ ಯಶಸ್ವಿಯಾಗಿದೆ. ಕೆಲ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಈಗಾಗಲೇ ತಮ್ಮ- ತಮ್ಮ ಹಂತದಲ್ಲಿಯೇ ಕಸ ಸಂಸ್ಕರಣೆ ಮಾಡಿದ್ದು, ಗೊಬ್ಬರವನ್ನು ರೈತರಿಗೆ ವಿತರಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಎಲ್ಲ ಸಾರ್ವಜನಿಕರು ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮನೆಗಳಲ್ಲಿಯೇ ಸಂಸ್ಕರಿಸಿದರೆ ಕಸದ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.

ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಗುತ್ತಿಗೆದಾರರು ಸರಿಯಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಇದಕ್ಕೆ ಸ್ಪಂದಿಸದಿದ್ದಲ್ಲಿ ದಂಡ ವಿಧಿಸುವಂತೆಯೂ ಆಯುಕ್ತರಿಗೆ ಸೂಚನೆ ನೀಡಿಲಾಗಿದೆ ಎಂದು ಸಚಿವರು ತಿಳಿಸಿದರು.

65 ಕಸ ಕಿಯೋಸ್ಕ್ ಸ್ಥಾಪನೆ:

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ (ಬಿಎಸ್‌ಡಬ್ಲ್ಯುಎಂಎಲ್) ಸಿಇಒ ಕರೀಗೌಡ ಮಾತನಾಡಿ, ಜಿಬಿಎ ವ್ಯಾಪ್ತಿಯಲ್ಲಿ ಬ್ಲ್ಯಾಕ್ ಸ್ಪಾಟ್‌ಗಳನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸುವ ಉದ್ದೇಶದಿಂದ ಕಸ ಕಿಯೋಸ್ಕ್ ಸ್ಥಾಪಿಸಲಾಗುತ್ತಿದೆ. ಸ್ವಚ್ಛ ಬೆಂಗಳೂರಿನ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದ್ದು, ನಗರದಾದ್ಯಂತ 76 ಕಸ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಕಸ ಕಿಯೋಸ್ಕ್‌ನಿಂದ ಸ್ಥಳಿಯವಾಗಿ ಬ್ಲಾಕ್ ಸ್ಪಾಟ್ ನಿರ್ಮೂಲನೆ, ತ್ಯಾಜ್ಯ ದುರ್ವಾಸನೆ ಸೇರಿ ಇತರ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ. ಪ್ರತಿ ಕಸ ಕಿಯೋಸ್ಕ್‌ನಲ್ಲಿ 100 ಲೀ. ಸಾಮರ್ಥ್ಯದ 4 ಸಂಗ್ರಹಣಾ ಬಿನ್‌ಗಳನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ನಿಗದಿಪಡಿಸಿದ ಸಮಯದಲ್ಲಿ ತಮ್ಮ ಬೇರ್ಪಡಿಸಿದ ಕಸವನ್ನು ಯಾವುದೇ ಶುಲ್ಕವಿಲ್ಲದೆ ಈ ಕಿಯೋಸ್ಕ್‌ಗಳಿಗೆ ಉಚಿತವಾಗಿ ನೀಡಬಹುದಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಿಎಸ್‌ಡಬ್ಲ್ಯುಎಂಎಲ್​​ ಮುಖ್ಯ ಕಾರ್ಯಚರಣಾಧಿಕಾರಿ ರಮಾಮಣಿ, ದಕ್ಷಿಣ ವಲಯ ಮುಖ್ಯ ಅಭಿಯಂತರ ಬಸವರಾಜ ಕಬಾಡೆ, ಬಾಷ್ ಸಂಸ್ಥೆಯ ಪ್ರತಿನಿಧಿ ಜೇಕಬ್ ಪೀಟರ್ ಹಾಜರಿದ್ದರು.

ಘಟಕ ಸ್ಥಾಪನೆಗೆ ಸಿಎಸ್‌ಆರ್ ನಿಧಿ ಬಳಕೆ:

ನಗರದ ಪ್ರತಿ ವಿಧಾನಸಭಾಕ್ಷೇತ್ರದಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಘಟಕ ನಿರ್ಮಿಸಲು ಸಿಎಸ್‌ಆರ್ ನಿಧಿ ಬಳಸಲು ಆಲೋಚನೆ ನಡೆಸಲಾಗುತ್ತಿದೆ. ಬಿಟಿಎಂ ಲೇಔಟ್‌ನ 4ನೇ ಹಂತದಲ್ಲಿ 4 ಎಕರೆ ಜಾಗವನ್ನು ಟ್ರಾನ್ಸಫರ್ ಸ್ಟೇಷನ್ ನಿರ್ಮಿಸಲು ಗುರುತಿಸಿದ್ದು, ಆ ಜಾಗವನ್ನು ಹಸ್ತಾಂತರಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಕೆ.ಎನ್. ರಮೇಶ್ ತಿಳಿಸಿದರು.

ಕೋರಮಂಗಲದ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಕಾಂಪೋಸ್ಟ್ ವ್ಯವಸ್ಥೆಯನ್ನು ಮಾಡಿಕೊಂಡು ಸ್ಥಳೀಯವಾಗಿ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಂಡಿದೆ. ಇದನ್ನು ಮಾದರಿಯಾಗಿರಿಸಿಕೊಂಡು ಸ್ಥಳೀಯವಾಗಿ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಂಡಲ್ಲಿ ಬಹುಪಾಲು ಕಸದ ಸಮಸ್ಯೆಗಳಿಗೆ ಮೂಲದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು.

- ಕೆ.ಎನ್. ರಮೇಶ್, ದಕ್ಷಿಣ ನಗರ ಪಾಲಿಕೆಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net