ಕಸದ ಕೊಂಪೆ ಹಳೆಯಂಗಡಿ ಬಸ್ ತಂಗುದಾಣ : ಕೊಳೆತು ನಾರುವ ಕಸ : ಅವ್ಯವಸ್ಥೆ ಸರಿಪಡಿಸಲು ಪ್ರಯಾಣಿಕರ ಆಗ್ರಹ

New Project (35)
Published on

ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ

ಹಳೆಯಂಗಡಿ ಮುಖ್ಯ ಪೇಟೆಯಿಂದ ಕಿನ್ನಿಗೋಳಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಬಹುಮುಖ್ಯ ಬಸ್ ತಂಗುದಾಣ ಕಸದ ಕೊಂಪೆಯಾಗಿದ್ದು ಸಾರ್ವಜನಿಕರು ಮೂಗುಮುಚ್ಚಿ ಬಸ್‌ಗೆ ಕಾಯುವ ಸ್ಥಿತಿ ಎದುರಾಗಿದೆ. ಮಂಗಳೂರಿನಿಂದ ಕಿನ್ನಿಗೋಳಿ ಕಡೆಗೆ ಹೋಗುವ ಬಸ್‌ಗಳು ನಿಲ್ಲುವ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಜಂಕ್ಷನ್ ಬಳಿಯ ಬಸ್ ತಂಗುದಾಣ ಎದುರು ಭಾಗದ ಹೆದ್ದಾರಿ ಬದಿಯ ಮಾರ್ಗಸೂಚಿ ಫಲಕ ತುಕ್ಕು ಹಿಡಿದಿದೆ. ಬಸ್ ತಂಗುದಾಣದ ಸಾರ್ವಜನಿಕರಿಗೆ ಹಾಕಲಾದ ಬೆಂಚ್ ಹಿಂದುಗಡೆ ರಾಶಿ-ರಾಶಿ ಕಸ ಮಳೆ ನೀರಿನಲ್ಲಿ ಕೊಳೆತು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ. ಬಸ್ ತಂಗುದಾಣದ ಎದುರು ಮಳೆ ನೀರು ನಿಂತು ಕೆಸರು ಗದ್ದೆಯಂತಾಗಿದೆ. ಇದರಿಂದಾಗಿ ಪ್ರಯಾಣಿಕರು ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುವಾಗ ಮಳೆ ಬಂದರೆ ಕುಳಿತುಕೊಳ್ಳಲು ಅಸಾಧ್ಯ ಸ್ಥಿತಿ ಇದೆ. ಇನ್ನೊಂದೆಡೆ ಹಳೆಯಂಗಡಿ ಜಂಕ್ಷನ್ ಹೆದ್ದಾರಿ ಬದಿ ಮಳೆ ನೀರು ಹರಿದು ಹೋಗಲು ತೋಡಿದ ಚರಂಡಿಗೆ ಸೂಕ್ತ ಪೈಪ್ ಅಳವಡಿಸದೆ ತೆರೆದ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಬಗ್ಗೆ ಅನೇಕ ಬಾರಿ ಸ್ಥಳೀಯ ಪಂಚಾಯಿತಿ ಹಾಗೂ ಗ್ರಾಮಸ್ಥರು ಹೆದ್ದಾರಿ ಇಲಾಖೆಗೆ ಅವ್ಯವಸ್ಥೆಗಳ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಾರ್ವಜನಿಕ ಸಮಸ್ಯೆಗಳಿಗೆ ಇಲಾಖೆ ಸ್ಪಂದಿಸಬೇಕು. ದುರ್ವಾಸನೆಯಿಂದ ತಂಗುದಾಣದ ಒಳ ಹೋಗುವಂತಿಲ್ಲ. ಹೊರಗೆ ಕೆಸರು ಕೊಂಪೆ. ಕೂಡಲೇ ಇಲಾಖೆ ಸರಿಪಡಿಸುವುದು ಬಹಳ ಅಗತ್ಯ. ಇಲ್ಲವಾದಲ್ಲಿ ಸಾರ್ವಜನಿಕರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು. ಧರ್ಮಾನಂದ ಶೆಟ್ಟಿಗಾರ್, ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net