

ಸಿಂಧನೂರು: ನಗರದ ಎಲ್ಲ ಸಾರ್ವಜನಿಕರು ಮನೆಯ ತ್ಯಾಜ್ಯವನ್ನು ವಿಂಗಡಣೆ ಮಾಡಿ ಹಸಿಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ವಾಹನಕ್ಕೆ ಹಾಕಬೇಕು ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು, ಸ್ವಚ್ಛ ಭಾರತ ಅಭಿಯಾನದ ನಿಯಮಾವಳಿಗಳ ಪ್ರಕಾರ ತಮ್ಮ ಮನೆ, ಅಂಗಡಿ, ಶಾಲೆ, ಹೋಟೆಲ್ ಮತ್ತಿತರ ಸಂಸ್ಥೆಗಳ ತ್ಯಾಜ್ಯವನ್ನು ಪ್ರತ್ಯೇಕಿಸಿ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈಗಾಗಲೇ ನಗರಸಭೆಯಿಂದ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಎಚ್ಚರಿಸಿದ್ದಾಗ್ಯೂ ತ್ಯಾಜ್ಯವನ್ನು ಪ್ರತ್ಯೇಕಿಸಿ ನೀಡದಿರುವುದು ಕಂಡು ಬಂದಿದೆ.
ಹೀಗಾಗಿ ಸಾರ್ವ ಜನಿಕರು ಸ್ವಚ್ಛ ಹಾಗೂ ಸ್ವಸ್ಥ ಸಿಂಧನೂರಿಗಾಗಿ ತಕ್ಷಣವೇ ಕಸವನ್ನು ವಿಂಗಡಿಸಿ ನೀಡಬೇಕು ಎಂದು ತಿಳಿಸಿದ್ದಾರೆ. ಒಂದು ವೇಳೆ ಕಸವನ್ನು ವಿಂಗಡಿಸದೇ ವಾಹನಗಳಿಗೆ ನೀಡಿದ್ದಲ್ಲಿ ಅಂಥವರಿಗೆ ಮೊದಲ ಹಂತದಲ್ಲಿ ಕಾಯ್ದೆ ಅನ್ವಯ ದಂಡ ವಿಧಿಸಲಾಗುವುದು, ನಂತರ ಪುನಃ ಮುಂದುವರೆದಲ್ಲಿ ಕಾನೂನು ರೀತ್ಯ ಕ್ರಮ ಜರುಗಿಸುವುದು. ನಾಗರಿಕರ ಸಹಭಾಗಿತ್ವವೂ ಸ್ವಚ್ಚ ಭಾರತದ ಅಂಗವಾಗಿದ್ದು ಎಲ್ಲರೂ ತ್ಯಾಜ್ಯವನ್ನು ವಿಂಗಡಿಸಿ ನಗರಸಭೆ ವಾಹನಗಳಿಗೆ ಹಾಕಬೇಕು.
ತ್ಯಾಜ್ಯ ನೀಡಿದರೆ ಕಾನೂನು ಕ್ರಮ: ನಗರದಲ್ಲಿ ಅನೇಕ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿದ್ದು, ಅವುಗಳಲ್ಲಿ ಬಳಸಿದ ತ್ಯಾಜ್ಯವನ್ನು ಸಾಮಾನ್ಯ ಕಸದೊಂದಿಗೆ ಹಾಕಿದರೆ ಅಂಥ ಆಸ್ಪತ್ರೆಗೆ ಮೊದಲ ಹಂತದಲ್ಲಿ ನಗರಸಭೆಯಿಂದ 25 ಸಾವಿರ ರೂ.ದಂಡ ವಿಧಿಸಲಾಗುವುದು.
ಇದು ಪುನರಾವರ್ತಿತವಾದರೆ 2 ಲಕ್ಷ ರೂ.ವರೆಗೆ ದಂಡ ವಿಧಿಸಿ ಅಂತಹ ಆಸ್ಪತ್ರೆಯ ಪರವಾನಗಿ ರದ್ದುಪಡಿಸಿ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಯಾವುದೇ ಕಾರಣ ಕ್ಕೂ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಮೆಡಿ ವೇಸ್ಟ್ ನೀಡುವುದನ್ನು ಸಂಪೂರ್ಣವಾಗಿ ನಿಭರ್ಂದಿಸಿದೆ. ನಮ್ಮ ಸಂಸ್ಥೆಯ ಯಾವುದೇ ನೌಕರರು ನಿಯಮ ಉಲ್ಲಂಘಿಸಿದ್ದಲ್ಲಿ ನಗರಸಭೆಯ ಗಮನಕ್ಕೆ ತರಬೇಕು ಎಂದು ಮಂಜುನಾಥ ಗುಂಡೂರು ತಿಳಿಸಿದ್ದಾರೆ.