

ಬೆಂಗಳೂರಿನ ಅತಿ ದೊಡ್ಡ ಸಮಸ್ಯೆಗಳಲ್ಲೊಂದಾಗಿರುವ ಕಸದ ಸಮಸ್ಯೆ ಬಗೆಹರಿಸಲು ಪ್ರಾಯೋಗಿಕವಾಗಿ 2 ವಾರ್ಡ್ಗಳಲ್ಲಿ ‘ಇಂದೋರ್ ಮಾದರಿ’ ಅಳವಡಿಸಲಾಗಿದೆ. ಯೋಜನೆ ಜಾರಿಯಾಗಿ ಒಂದು ತಿಂಗಳಾಗಿದ್ದು, ಮೇಯರ್ ಪ್ರತಿನಿಧಿಸುವ ಜೋಗುಪಾಳ್ಯ ವಾರ್ಡ್ನಲ್ಲಿ ಯೋಜನೆಯ ಪ್ರಭಾವ ಅರಿಯಲು ವಿಜಯವಾಣಿ ನಡೆಸಿದ ರಿಯಾಲಿಟಿಚೆಕ್ ಇಲ್ಲಿದೆ.
ಬೆಂಗಳೂರು: ಮೂರು ವರ್ಷದಿಂದ ಸತತವಾಗಿ ದೇಶದ ನಂಬರ್ ಒನ್ ಸ್ವಚ್ಛನಗರ ರ್ಯಾಂಕ್ ಪಡೆಯುತ್ತಿರುವ ಮಧ್ಯಪ್ರದೇಶದ ‘ಇಂದೋರ್ ಮಾದರಿ’ ಕಸ ನಿರ್ವಹಣೆ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಮೂಲಕ ರಾಜ್ಯ ರಾಜಧಾನಿ ಬೆಂಗಳೂರಿನ ಕಸದ ಸಮಸ್ಯೆ ಬಗೆಹರಿಯುವ ಸಣ್ಣ ಆಶಾಭಾವನೆ ಮೂಡಿದೆ.
ಜೋಗುಪಾಳ್ಯ(ವಾರ್ಡ್ ಸಂಖ್ಯೆ-89) ವಾರ್ಡ್ ನಲ್ಲಿ ಯೋಜನೆ ಪ್ರಾಯೋಗಿಕ ಜಾರಿಯಾಗಿ ಒಂದು ತಿಂಗಳಾಗಿದೆ. ಇನ್ನೂ ಎರಡು ತಿಂಗಳು ಈ ಯೋಜನೆಯ ಅಧ್ಯಯನ ಬಳಿಕ ಅಂತಿಮ ವರದಿ ಸಿದ್ಧವಾಗಲಿದೆ.
ರಾಜಕಾಲುವೆಯಲ್ಲಿ ಆಗಬೇಕಿರುವ ಸ್ವಚ್ಛತೆ ಸಾಕಷ್ಟು ಇರುವುದು ಕಣ್ಣಿಗೆ ಕಾಣುತ್ತದೆ. ಆದರೆ, ಬಹು ಮುಖ್ಯವಾಗಿ, ಮೂಲದಲ್ಲೆ ಕಸ ವಿಂಗಡಿಸಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಬಿಬಿಎಂಪಿ, ಇಂದೋರ್ನ ಕನ್ಸಲ್ಟೆಂಟ್ ಹಾಗೂ ಪೌರಕಾರ್ವಿುಕರು ಸಫಲರಾಗಿದ್ದಾರೆ.
ಮೊದಲಿಗೆ ಜೋಗುಪಾಳ್ಯದ ಮುಖ್ಯರಸ್ತೆಯಲ್ಲಿ ಡಾ. ರಾಜ್ ದರ್ಶಿನಿ ಹೋಟೆಲ್ ನಡೆಸುತ್ತಿರುವ ರಘು ಅವರನ್ನು ಮಾತನಾಡಿಸಿದಾಗ, ಒಣಕಸ-ಹಸಿ ಕಸವನ್ನು ಪ್ರತ್ಯೇಕವಾಗಿ ಕಳೆದೊಂದು ತಿಂಗಳಿಂದ ಪಡೆಯುತ್ತಿರುವುದನ್ನು ತಿಳಿಸಿದರು. ವಾಣಿಜ್ಯ ಪ್ರದೇಶದಲ್ಲಿ ಹೆಚ್ಚು ಕಸ ಉತ್ಪತ್ತಿಯಾಗುವ ಕಾರಣ ಬೆಳಗ್ಗೆ ಹಾಗೂ ಸಂಜೆ ಎರಡೂ ಹೊತ್ತು ಕಸ ಸಂಗ್ರಹ ವಾಹನ ಬರುತ್ತದೆ. ಕಸವನ್ನು ವಿಂಗಡಿಸಿ ನೀಡದಿದ್ದರೆ, ಸ್ಥಳದಲ್ಲೆ ಬಾಣಲೆಯೊಂದಕ್ಕೆ ಕಸವನ್ನು ಸುರಿದು ಮನೆಯವರಿಂದಲೇ ವಿಂಗಡಣೆ ಮಾಡಿಸುತ್ತಾರೆ. ಮುಂದೆ ಈ ರೀತಿ ಮಾಡದಂತೆ ಎಚ್ಚರಿಸುತ್ತಾರೆ ಎಂದು ಹೇಳಿದರು. ಹಿಂದೆಲ್ಲ
ಕಸದ ವಾಹನದಿಂದ ಹಸಿ ಹಾಗೂ ಒಣಕಸ ಒಟ್ಟಾಗಿ ಬರುತ್ತಿತ್ತು. ಅದರಲ್ಲಿ ಹಸಿ ಕಸವನ್ನು ವಿಂಗಡಿಸಿ ಮತ್ತೆ ಒಣಕಸದಲ್ಲಿ 15 ವಿಭಾಗವಾಗಿ ವಿಂಗಡಿಸುವ ಕಾರ್ಯ ನಡೆಯುತ್ತಿತ್ತು. ಈಗ ಶೇ.60 ಪ್ರಮಾಣದಲ್ಲಿ ಒಣಕಸ ಮಾತ್ರ ಬರುತ್ತದೆ. ಕೆಲಸ ಸಾಕಷ್ಟು ಸಲೀಸಾಗಿದೆ ಎಂದು ವಾರ್ಡ್ನ ಒಣಕಸ ಸಂಗ್ರಹದ ಗುತ್ತಿಗೆ ಪಡೆದಿರುವ ಅಕ್ಬರ್ ಹೇಳುತ್ತಾರೆ.
ರಾಜಕಾಲುವೆಯಲ್ಲಿ ಕಸ: ರಸ್ತೆಯಲ್ಲಿ ಸ್ವಚ್ಛತೆ ಹಾಗೂ ಮನೆಯಿಂದ ಕಸ ಸಂಗ್ರಹವಾಗುತ್ತಿದ್ದರೂ ರಾಜಕಾಲುವೆಯಲ್ಲಿ ಇನ್ನೂ ಅನೇಕರು ಕಸ ಎಸೆಯುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಕಸ ಸಂಗ್ರಹಣೆಯಲ್ಲಿ ಹೆಚ್ಚಿನ ಬದಲಾವಣೆಯಾಗಿದೆ. ಆದರೆ, ರಾಜಕಾಲುವೆಗೆ ಎತ್ತರದ ಬೇಲಿ ಹಾಕಿದ್ದರೂ ಅನೇಕರು ಅಲ್ಲಿಗೆ ಕಸ ಎಸೆಯುತ್ತಾರೆ. ಬೇಸಿಗೆ ಸಮಯದಲ್ಲಂತೂ ದುರ್ವಾಸನೆಗೆ ಇಲ್ಲಿ ವಾಸಿಸುವುದೇ ಅಸಾಧ್ಯವಾಗುತ್ತದೆ ಎಂದು ರಾಜಕಾಲುವೆ ಎದುರಿನ ಮನೆಯಲ್ಲಿ ವಾಸಿಸುವ ಗೃಹಿಣಿ ಕಲಾ ಚೂಡಾಮಣಿ ಹೇಳುತ್ತಾರೆ.
ಸ್ಥಳೀಯರಿಗೆ ಅರಿವಿದೆ..: ಈ ಒಂದು ತಿಂಗಳಲ್ಲಿ ಬೆಂಗಳೂರಿನ ಕಸದ ಸಮಸ್ಯೆಯನ್ನು ಅರಿಯುವ ಪ್ರಯತ್ನ ನಡೆಸಿದ್ದೇವೆ ಎಂದು ವಾರ್ಡ್ನಲ್ಲಿ ಯೋಜನೆ ಜಾರಿಯ ತಂಡದ ನೇತೃತ್ವ ವಹಿಸಿರುವ ಇಂದೋರ್ನ ಕನ್ಸಲ್ಟೆಂಟ್ ಜಾವೇದ್ ವಾರ್ಸಿ ತಿಳಿಸಿದ್ದಾರೆ. ಈ ಬ್ಲಾ್ಯಕ್ಸ್ಪಾಟ್ಗಳಿಂದ ಕಸ ಸಂಗ್ರಹಕ್ಕೇ ಬಹಳಷ್ಟು ಶ್ರಮ ವ್ಯರ್ಥವಾಗುತ್ತಿತ್ತು. 10 ಕಸ ಸಂಗ್ರಹಣೆ ವಾಹನಗಳಲ್ಲಿ 7 ಬ್ಲಾ್ಯಕ್ಸ್ಪಾಟ್ ಸ್ವಚ್ಛತೆಗೆ ತೆರಳಿದರೆ ಮೂರು ಮಾತ್ರ ಮನೆಮನೆ ಕಸ ಸಂಗ್ರಹಕ್ಕೆ ಹೋಗುತ್ತಿದ್ದವು. ಇದರಿಂದ ಮನೆಗಳಿಂದ ಕಸ ಸಂಗ್ರಹವೂ ಸೂಕ್ತವಾಗಿ ನಡೆಯುತ್ತಿರಲಿಲ್ಲ. ಹಸಿ ಹಾಗೂ ಒಣಕಸದ ವ್ಯತ್ಯಾಸವೇ ಅನೇಕರಿಗೆ ತಿಳಿದಿರಲಿಲ್ಲ. ಮೂಲದಲ್ಲಿ ಇದೀಗ ಶೇ.60 ವಿಂಗಡಣೆ ನಡೆಯುತ್ತಿದೆ ಎಂದರು. ಬೆಂಗಳೂರಿನವರೇ ಹಾಗೂ ಅನೇಕ ವರ್ಷಗಳಿಂದ ಇಲ್ಲಿ ನೆಲೆಸಿರುವವರ ಸಮಸ್ಯೆ ಇಲ್ಲ. ಆಗಿಂದಾಗ್ಗೆ ಬರುವ, ಪಿ.ಜಿ.ಗಳಲ್ಲಿ ಉಳಿಯುವ ಹೊರಗಿನವರಿಗೆ ತಿಳಿಸಿಹೇಳಬೇಕಿದೆ. ಮೇಯರ್, ಆಯುಕ್ತರು ಸೇರಿ ಎಲ್ಲರೂ ಉತ್ತಮ ಸಹಕಾರ ನೀಡುತ್ತಿದ್ದಾರೆ. ಪ್ರಾಯೋಗಿಕ ಜಾರಿ ಅವಧಿ ಮುಕ್ತಾಯದ ವೇಳೆಗೆ ಮಹತ್ತರ ಬದಲಾವಣೆಗಳು ಕಂಡುಬರಲಿವೆ ಎಂದು ಜಾವೇದ್ ವಿಶ್ವಾಸ ವ್ಯಕ್ತಪಡಿಸಿದರು.
ದೇವಾಲಯ ಬಳಿ ಸ್ವಚ್ಛ: ಹಲಸೂರು ಮೆಟ್ರೋ ನಿಲ್ದಾಣಕ್ಕೆ ಹೊಂದಿಕೊಂಡಿ ರುವ ದೇವಸ್ಥಾನದ ಬಳಿಯ ಕಾಂಪೌಂಡ್ ಈಗ ಸ್ವಚ್ಛವಾಗಿದ್ದು, ನೆಮ್ಮದಿಯಿಂದ ಉಸಿರಾಡ ಬಹುದು ಎನ್ನುತ್ತಾರೆ ಹೂ-ಹಣ್ಣು ವ್ಯಾಪಾರಿ ಶಶಿಕಲಾ. ದೇವಸ್ಥಾನ ಇದೆ ಎಂಬುದನ್ನೂ ಲೆಕ್ಕಿಸದೆ ಕಸ ಎಸೆಯುವ, ಮೂತ್ರ ವಿಸರ್ಜನೆ ಮಾಡುತ್ತಾರೆ. ರಸ್ತೆಗೆ ಮುಖ ಮಾಡಿದ್ದ ಪೆಟ್ಟಿಗೆ ಅಂಗಡಿಯನ್ನು ಈ ಕಡೆಗೆ ತಿರುಗಿಸಿಕೊಂಡಿದ್ದೆ. ಈಗ ನಾಲ್ಕೈದು ದಿನದ ಹಿಂದೆ ಪಾಲಿಕೆ ವತಿಯಿಂದ ಜಾಗವನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು, ಗಿಡ ಇಟ್ಟಿರುವುದು ಸಂತಸ ತಂದಿದೆ ಎಂದರು.
ಕಸ ಸಂಗ್ರಹಕ್ಕೆ ಉತ್ತಮ ವಾಹನ: ಒಂದೇ ವಾಹನದಲ್ಲಿ ಒಣ-ಹಸಿ- ವೈದ್ಯಕೀಯ ತ್ಯಾಜ್ಯ ಸಂಗ್ರಹಿಸುವ ಎರಡು ವಾಹನಗಳು ವಾರ್ಡ್ನಲ್ಲಿದ್ದು, ಮನೆಮನೆಯಿಂದ ಕಸ ಸಂಗ್ರಹಕ್ಕೆ ಇವು ಹೇಳಿಮಾಡಿಸಿದಂತಿವೆ ಎನ್ನುತ್ತಾರೆ ವಾಹನವೊಂದರ ಚಾಲಕ ನವೀನ್. ಮನೆಯಿಂದ ಬೇರ್ಪಡಿಸಿದ ಕಸವನ್ನು ಕಸದ ಬುಟ್ಟಿಯಿಂದ ನೇರವಾಗಿ ಇದರಲ್ಲಿ ಹಾಕುತ್ತಾರೆ. ಈಗೀಗ ಬಹುತೇಕರು ವಿಂಗಡಿಸಿ ನೀಡುತ್ತಾರೆ. ಜನರಲ್ಲಿ ಸಾಕಷ್ಟು ಜಾಗೃತಿ ಬಂದಿದೆ ಎಂದು ತಿಳಿಸಿದ್ದಾರೆ.
ಇಲ್ಲಿಯ ವರೆಗೆ ಇಂದೋರ್ ಮಾದರಿ ಕಸನಿರ್ವಹಣೆ ಆಶಾಭಾವನೆ ಮೂಡಿಸಿದೆ. ಪ್ರಾಯೋಗಿಕ ಜಾರಿ ಅಂತಿಮ ಫಲಿತಾಂಶದ ಆಧಾರದಲ್ಲಿ ಎಲ್ಲ ವಾರ್ಡ್ಗಳಲ್ಲಿ ಯೋಜನೆ ಅನುಷ್ಠಾನ ಆಗಲಿದೆ. | ಎಂ. ಗೌತಮ್ಕುಮಾರ್ ಮೇಯರ್ ಕಸವನ್ನು ವಿಂಗಡಿಸಿ ನೀಡಲೇಬೇಕು. ಇಲ್ಲದಿದ್ದರೆ ಮಾರ್ಷಲ್ ಫೋಟೊ ತೆಗೆದುಕೊಂಡು ಹೆಸರು ಬರೆದು ಕೊಳ್ಳುತ್ತಾರೆ. ಜನರ ಕೈನಿಂದಲೇ ಬೇರ್ಪಡಿಸುತ್ತಾರೆ. ಬೆಳಗ್ಗೆ-ಸಂಜೆ ಎರಡೂ ಹೊತ್ತು ಎರಡೆರಡು ವಾಹನ ಬರುತ್ತವೆ. | ಅಭಿಷೇಕ್ ಎಸ್ಎಲ್ವಿ ಅಯ್ಯಂಗಾರ್ ಬೇಕರಿ
-ರಮೇಶ ದೊಡ್ಡಪುರ