

ಬೆಳಗಾವಿ: ಜಮೀನು ವಿವಾದ, ಜನರ ವಿರೋಧ ಇನ್ನಿತರ ಕಾರಣಗಳಿಂದಾಗಿ ಹಳ್ಳಿಗಳಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಅರ್ಧದಲ್ಲಿಯೇ ಮೊಟಕುಗೊಂಡಿದೆ. ಇದರಿಂದ ಸ್ವಚ್ಛತೆಗೂ ಸವಾಲಾಗುತ್ತಿದೆ.
ಹಳ್ಳಿಗಳಲ್ಲಿಯೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ‘ಸ್ವಚ್ಛ ಭಾರತ ಮಿಷನ್’ ಯೋಜನೆಯಡಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದೊಂದು ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ತಲಾ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ, ಹಳ್ಳಿಗಳಲ್ಲಿ ಘಟಕ ಸ್ಥಾಪಿಸಲು ಎದುರಾಗಿರುವ ಜಮೀನು ಸಮಸ್ಯೆ ಬಗೆಹರಿಸಲು ತಾಲೂಕು ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳು ವರ್ಷ ಕಳೆದರೂ ಆಸಕ್ತಿ ತೋರುತ್ತಿಲ್ಲ.
50 ಘಟಕ ಗುರಿ: ಜಿಲ್ಲೆಯಲ್ಲಿ 2019-20ನೇ ಸಾಲಿನ ಅವಧಿಯಲ್ಲಿ 50 ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸರ್ಕಾರ ಗುರಿ ನೀಡಿದೆ. ಆದರೆ, ಸ್ವಂತ ಜಾಗ ಹೊಂದಿರುವ 20 ಗ್ರಾಪಂಗಳು ಮಾತ್ರ ಘಟಕ ಆರಂಭಿಸಿವೆ. ಅಲ್ಲದೆ, ಎರಡನೆಯ ಹಂತದಲ್ಲಿ ಜಿಲ್ಲೆಯ 14 ತಾಲೂಕು ವ್ಯಾಪ್ತಿಯ 506 ಗ್ರಾಪಂ ಪೈಕಿ 61 ಗ್ರಾಪಂಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ಘಟಕ ನಿರ್ಮಾಣದ ಪ್ರಸ್ತಾವನೆ ಅನುಮೋದನೆ ಗೊಂಡಿದೆ. 33 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಲಸ್ಟರ್ ಮಾದರಿಯಲ್ಲಿ ಅಳವಡಿಸಲಾಗುತ್ತಿದೆ. ಒಟ್ಟಿನಲ್ಲಿ 94 ಗ್ರಾಪಂಗಳಲ್ಲಿ ಮಾತ್ರ ಘಟಕ ನಿರ್ಮಾಣ ಕೆಲಸ ನಡೆಯುತ್ತಿದೆ.
ಅನುದಾನ ವಾಪಸ್ ಸಾಧ್ಯತೆ: ಈಗಾಗಲೇ ಸರ್ಕಾರವು 581.15 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ ತ್ಯಾಜ್ಯ ವಿಲೇವಾರಿ ಘಟಕ, ಕಸದ ಬುಟ್ಟಿ, ವಾಹನ, ಪ್ರಥಮ ಚಿಕಿತ್ಸೆ ಕಿಟ್, ತಳ್ಳುವ ಗಾಡಿ, ಮೂರು ಸೈಕಲ್‌ಗಳಿಗೆ 294.30 ಲಕ್ಷ ರೂ. ಖರ್ಚು ಮಾಡಿದೆ. ಬಾಕಿ ಉಳಿದುಕೊಂಡ 286.85 ಲಕ್ಷ
ರೂ. ಅನುದಾನ ಖರ್ಚು ಮಾಡಲು ಘಟಕಗಳೇ ನಿರ್ಮಾಣಗೊಂಡಿಲ್ಲ. ಬಾಕಿ ಉಳಿದ ಅನುದಾನ ಸರ್ಕಾರಕ್ಕೆ ವಾಪಸ್ ಹೋಗುವ ಸಾಧ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಳ್ಳಿಗಳಲ್ಲಿ ತ್ಯಾಜ್ಯ ಘಟಕ ಸ್ಥಾಪನೆಗೆ ಕನಿಷ್ಠ 10 ರಿಂದ 22 ಗುಂಟೆ ಜಮೀನಿನ ಅವಶ್ಯಕತೆ ಇದೆ. ಗ್ರಾಮೀಣ ಪ್ರದೇಶದ ಹೊರವಲಯದಲ್ಲಿ ಗ್ರಾಪಂಗಳ ಬಳಿ ಸ್ವಂತ ಆಸ್ತಿ ಇಲ್ಲ. ಕಂದಾಯ ಇಲಾಖೆಗೆ ಸೇರಿದ ಜಮೀನುಗಳೇ ಅಧಿಕವಿದೆ. ವಿವಿಧ ಕಾರಣಗಳಿಂದಾಗಿ ಈ ಜಾಗ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಂದಾಯ ಕಚೇರಿಗಳಲ್ಲಿ ಇನ್ನೂ 574 ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ 406 ಗ್ರಾಪಂಗಳಲ್ಲಿ, ತಹಸೀಲ್ದಾರ್ ವ್ಯಾಪ್ತಿಯಲ್ಲಿ- 82, ಉಪ ವಿಭಾಗ ಕಚೇರಿ ಹಾಗೂ ಜಿಲ್ಲಾಧಿಕಾರಿ ವ್ಯಾಪ್ರತಿಯಲ್ಲಿ ತಲಾ 43 ಪ್ರಕರಣಗಳ ಸಮಸ್ಯೆಯಿದೆ. ತಾಲೂಕು ತಹಸೀಲ್ದಾರ್, ಎಸಿಗಳಿಂದ ಘಟಕಕ್ಕೆ ಸ್ಥಳ ಹಸ್ತಾಂತರಿಸಿಕೊಳ್ಳಬೇಕಿದೆ. ಆದರೆ, ಕಂದಾಯ ಇಲಾಖೆಯು ಇಲ್ಲಿಯವರೆಗೆ ಗ್ರಾಪಂ ಕಡತಗಳ ವಿಲೇವಾರಿಯನ್ನೇ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಜಮೀನು ಸಮಸ್ಯೆ ಮತ್ತು ಹಲವೆಡೆ ಸಾರ್ವಜನಿಕ ವಿರೋಧದಿಂದಾಗಿ ಘನತ್ಯಾಜ್ಯ ಘಟಕಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ. ಕಂದಾಯ ಇಲಾಖೆಯಿಂದ ಜಮೀನು ಹಸ್ತಾಂತರವಾಗಿಲ್ಲ. ಕೆಲವು ಕಡೆ ಜಮೀನು ಲಭ್ಯವಿದ್ದರೂ ಅಲ್ಲಿ ಘಟಕ ನಿರ್ಮಿಸಲು ಜನರೇ ವಿರೋಧ ಮಾಡುತ್ತಿದ್ದಾರೆ. ಹಾಗಾಗಿ 2ರಿಂದ 3 ಗ್ರಾಪಂಗಳನ್ನು ಸೇರಿಸಿ ಒಂದೆಡೆ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಸದ್ಯ ಇಂತಹ 112 ಪ್ರಸ್ತಾವನೆ ಸಲ್ಲಿಸಲಾಗಿದೆ.| ಎಚ್.ವಿ. ದರ್ಶನ ಸಿಇಒ, ಜಿಪಂ, ಬೆಳಗಾವಿ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ