

ಹನೂರು: ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ವಾಹನಗಳಿಗೆ ಡೀಸೆಲ್ ಇಲ್ಲದ ಪರಿಣಾಮ ಪಟ್ಟಣದಲ್ಲಿ ಕಸ ವಿಲೇವಾರಿಗೆ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಪಟ್ಟಣದಲ್ಲಿ ಅದರಲ್ಲೂ ಮುಖ್ಯ ರಸ್ತೆ ಹಾಗೂ ಅಂಗಡಿ, ಮುಂಗಟ್ಟುಗಳ ಬಳಿ ಸಂಗ್ರಹವಾಗುತ್ತಿದ್ದ ಕಸವನ್ನು ಪ್ರತಿ ದಿನ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ವಾರದ ಹಿಂದೆ ಪಟ್ಟಣದಲ್ಲಿ ಪೌರಕಾರ್ಮಿಕರಿಂದ ಮಲ ತ್ಯಾಜ್ಯ ವಿಲೇವಾರಿ ಸಂಬಂಧ ಪಪಂ ಮುಖ್ಯಾಧಿಕಾರಿ ಸೇರಿದಂತೆ ಆರೋಗ್ಯಾಧಿಕಾರಿ ಭೂಮಿಕಾ ಅವರ ಮೇಲೆ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದರಿಂದ ಆರೋಗ್ಯಾಧಿಕಾರಿ ಕಚೇರಿಗೆ ಗೈರಾಗಿದ್ದರು. ಪರಿಣಾಮ ಕಸ ವಿಲೇವಾರಿ ವಾಹನಕ್ಕೆ ಮಂಗಳವಾರ ಡೀಸೆಲ್ ಇಲ್ಲದಂತಾಗಿತ್ತು. ಹಾಗಾಗಿ ಮುಖ್ಯ ರಸ್ತೆ ಹಾಗೂ ಅಂಗಡಿ- ಮುಂಗಟ್ಟುಗಳ ಬಳಿ ಕಸದ ರಾಶಿ ತಾಂಡವಾಡುತ್ತಿದ್ದು, ಅಶುಚಿತ್ವ ಹೆಚ್ಚಾಗಿತ್ತು.
ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕಸ ವಿಲೇವಾರಿಗೊಳಿಸಿ ಪಟ್ಟಣದಲ್ಲಿ ಶುಚಿತ್ವ ಕಾಪಾಡುವಂತೆ ಒತ್ತಾಯಿಸಿದ್ದಾರೆ.