

ವಿಜಯವಾಣಿ ವಿಶೇಷ ಬೆಳಗಾವಿ
ಇಲ್ಲಿನ ಮಹಾನಗರ ಪಾಲಿಕೆ ಮತ್ತು ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳ ನಡುವಿನ ಗುದ್ದಾಟದಿಂದಾಗಿ ಸಾರ್ವಜನಿಕರು ಕಸದ ರಾಶಿಗಳ ಮಧ್ಯೆಯೇ ಬದುಕುವಂತಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ಮತ್ತು ತಾಲೂಕಿನ ಬಿ.ಕೆ.ಕಂಗ್ರಾಳಿ, ಹಿಂಡಲಗಾ, ಪೀರನವಾಡಿ, ಬಸವನ ಕುಡಚಿ, ಕಾಕತಿ ಗ್ರಾಪಂಗಳ ನಡುವಿನ ಜನವಸತಿ ಪ್ರದೇಶಗಳು ಯಾರ ವ್ಯಾಪ್ತಿಗೆ ಬರುತ್ತೇವೆ ಎಂಬ ಗೊಂದಲ ಹಲವು ವರ್ಷಗಳಿಂದ ಉಳಿದುಕೊಂಡಿದೆ. ಹೀಗಾಗಿ ನೀರು, ಚರಂಡಿ, ರಸ್ತೆ ಹೀಗೆ ಹಲವು ಸಮಸ್ಯೆಗಳ ಜತೆಗೆ, ಕಸದ ವಿಲೇವಾರಿ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ.
ಬಿ.ಕೆ.ಕಂಗ್ರಾಳಿ, ಹಿಂಡಲಗಾ ಗ್ರಾಪಂ ವ್ಯಾಪ್ತಿಯ ಶೇ.90 ಪ್ರದೇಶ ಮಹಾನಗರ ಪಾಲಿಕೆ ಪ್ರದೇಶಗಳೊಂದಿಗೆ ಕೂಡಿಕೊಂಡಿದೆ. ಈ ಪ್ರದೇಶದಲ್ಲಿ ಸಮರ್ಪಕವಾಗಿ ಕಸ ಸಂಗ್ರಹ ಮಾಡುತ್ತಿಲ್ಲ. ಇದರಿಂದ ಕೆಲ ನಿವಾಸಿಗಳು ರಸ್ತೆಗಳ ಬದಿಯಲ್ಲಿ, ಬಯಲಿನಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಕಸದ ದುರ್ವಾಸನೆಯಿಂದ ಮತ್ತು ನೊಣ, ಸೊಳ್ಳೆಗಳು, ಇತರ ಕೀಟಗಳಿಂದ ಡೆಂಘೆ, ಮಲೇರಿಯಾ ಮೊದಲಾದ ಕಾಯಿಲೆಗಳ ಭೀತಿ ಹೆಚ್ಚಾಗಿದೆ. ಸ್ಥಳೀಯ ನಿವಾಸಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಈ ಕುರಿತು ಹಲವು ಬಾರಿ ಪಾಲಿಕೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕೆಲ ನಿವಾಸಿಗಳು ಹಿಂಡಲಗಾ, ಬಿ.ಕೆ. ಕಂಗ್ರಾಳಿ ಗ್ರಾಪಂ ವ್ಯಾಪ್ತಿಯ ವಸತಿ ಕಟ್ಟಡ, ವಾಣಿಜ್ಯ ಕಟ್ಟಡಗಳ ನಿರ್ಮಾಣ ಪರವಾನಗಿ ಗ್ರಾಪಂನಿಂದ ಪಡೆದುಕೊಂಡಿದ್ದಾರೆ. ಕೆಲವರು ಪಾಲಿಕೆ, ಗ್ರಾಪಂ ಹೆಸರು ಹೇಳಿಕೊಂಡು ತೆರಿಗೆಯನ್ನೇ ಕಟ್ಟುತ್ತಿಲ್ಲ ಎಂದು ಪಾಲಿಕೆ ಸದಸ್ಯರು ದೂರಿದ್ದಾರೆ.
ನಗರಕ್ಕೆ ಹೊಂದಿಕೊಂಡಿರುವ ವಸತಿ ಪ್ರದೇಶಗಳಲ್ಲಿನ ಒಣ, ಹಸಿ ತ್ಯಾಜ್ಯವನ್ನು ಗ್ರಾಪಂ ಸಿಬ್ಬಂದಿ ಪಾಲಿಕೆ ವ್ಯಾಪ್ತಿಯ ಪ್ರದೇಶಗಳಲ್ಲಿ ಹಾಕುತ್ತಿರುವುದರಿಂದ ಸಮಸ್ಯೆ ಎದುರಿಸಬೇಕಾಗಿದೆ. ಈ ಕುರಿತು ಜಿಪಂ ಸಿಇಒಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಹಣಮಂತ ಕಲಾದಗಿ, ಪರಿಸರ ಅಭಿಯಂತ, ಪಾಲಿಕೆ