ತ್ಯಾಜ್ಯ ಘಟಕದ ದುರ್ನಾತ: 9 ವಿದ್ಯಾರ್ಥಿಗಳು ಅಸ್ವಸ್ತ

Garbage problem
Published on

ಕಾರವಾರ: ಚಿತ್ತಾಕುಲಾ ಗ್ರಾಪಂ ಹಿಂದಿನ ತ್ಯಾಜ್ಯ ವಿಲೇವಾರಿ ಘಟಕದಿಂದ ಬರುತ್ತಿರುವ ಕೆಟ್ಟ ವಾಸನೆಯಿಂದ ಪಕ್ಕದ ಹೈಸ್ಕೂಲ್‌ನ 9 ವಿದ್ಯಾರ್ಥಿಗಳು ಅಸ್ವಸ್ತರಾದರು ಘಟನೆ ಗುರುವಾರ ನಡೆಯಿತು. ಶುಕ್ರವಾರ ಸದಾಶಿವಡಗ ಹೈಸ್ಕೂಲ್‌ನ ಆಡಳಿತ ಮಂಡಳಿಯ ಸದಸ್ಯರು ಗ್ರಾಪಂ ನಿರ್ಲಕ್ಷ÷್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಚಿತ್ತಾಕುಲಾ ಗ್ರಾಪಂ ಕಟ್ಟಡದ ಹಿಂದೆಯೇ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. ತ್ಯಾಜ್ಯದ ವಿಲೇವಾರಿ ಸಮರ್ಪಕವಾಗಿ ಮಾಡದ ಕಾರಣ ಅದರಿಂದ ಕೆಟ್ಟ ವಾಸನೆ ಬರುತ್ತಿದ್ದು, ಪಕ್ಕದಲ್ಲೇ ಇರುವ ಹೈಸ್ಕೂಲ್ ಕೊಠಡಿಗೆ ನುಗ್ಗುತ್ತಿದೆ. ಇದರಿಂದ 9 ಮಕ್ಕಳು ವಾಂತಿ ಮಾಡಿಕೊಂಡು ಅಸ್ವಸ್ತರಾದರು. ನಂತರ ವಿದ್ಯಾರ್ಥಿಗಳನ್ನು ಅವರ ಕೊಠಡಿ ಬಿಟ್ಟು ಎದುರಿನ ಬಯಲಿಗೆ ತಂದು ಕೂರಿಸಿ ಪಾಠ ಮಾಡಬೇಕಾದ ಪರಿಸ್ಥಿತಿ ಬಂತು ಎಂದು ಹೈಸ್ಕೂಲ್ ಆಡಳಿತ ಮಂಡಳಿ ಕಾರ್ಯದರ್ಶಿ ಮಂಗೇಶ ವಾಘ ತಿಳಿಸಿದ್ದಾರೆ.

ಪಕ್ಕದಲ್ಲಿಯೇ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಅಂಗನವಾಡಿ ಕೇಂದ್ರವಿದೆ. 30 ಕ್ಕೂ ಹೆಚ್ಚು ಮನೆಗಳು ಸಮೀಪದಲ್ಲೇ ಇವೆ. ಎಲ್ಲರೂ ನಿತ್ಯ ನರಕ ಅನುಭವಿಸುತ್ತಿದ್ದಾರೆ. ಅಸಹ್ಯ ವಾಸನೆಯಿಂದ ತಲೆ ನೋವು ಮುಂತಾದ ಚಿತ್ರ, ವಿಚಿತ್ರ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ಗ್ರಾಮಸ್ಥರು ದೂರಿದರು.

ಇಷ್ಟೆಲ್ಲ ಆಕ್ಷೇಪ ಮಾಡಿದ ನಂತರ ಗ್ರಾಪಂ ಸಿಬ್ಬಂದಿ ತ್ಯಾಜ್ಯದ ಮೇಲೆ ಟಾರ್ಪಲ್ ಮುಚ್ಚಿಡುತ್ತಾರೆ. ನಂತರ ಮತ್ತೆ ತೆರೆಯುತ್ತಾರೆ. ಮೊದಲು ತ್ಯಾಜ್ಯ ವಿಲೇವಾರಿ ಘಟಕ ಎಂದು ಇಲ್ಲಿ ಪ್ರಾರಂಭಿಸಲಾಯಿತು. ಈಗ ಇದನ್ನು ತ್ಯಾಜ್ಯ ಸಂಗ್ರಹಣಾ ಘಟಕವಾಗಿ ಮಾರ್ಪಡಿಸಲಾಗಿದೆ. ಇಡೀ ಊರಿನ ಕಸವನ್ನು ತಂದು ಇಲ್ಲಿಯೇ ಹಾಕಿ ಕೊಳೆಸಲಾಗುತ್ತದೆ. ಪಕ್ಕದಲ್ಲೇ ತರಕಾರಿ, ಮಟನ್, ಮೀನು ಮಾರುಕಟ್ಟೆಗಳಿವೆ. ಅಂಗಡಿಗಳಿವೆ ಎಲ್ಲವಕ್ಕೂ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತವೆ ಎಂದು ದೂರಲಾಗಿದೆ. ಸದಾಶಿವಗಡ ಹೈಸ್ಕೂಲ್ ಉಪಾಧ್ಯಕ್ಷ ಉಮೇಶ ಕಾಮತ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net