ಪಾಲಿಕೆಗೆ ಸವಾಲಾದ ಕಸ ವಿಲೇವಾರಿ

11 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಡೀ ನಗರ ಸುಂದರ ಹಾಗೂ ಸ್ವಚ್ಛವಾಗಿ ಇರಲಿ ಎಂಬ ಕಾರಣಕ್ಕೆ ಮಹಾನಗರ ಪಾಲಿಕೆ ಅನೇಕ ಪ್ರಯತ್ನ ಮಾಡುತ್ತಿದೆ. ಆದರೆ ಈ ಕಾರ್ಯಕ್ಕೆ ಜನರಿಂದ ಸೂಕ್ತ ಬೆಂಬಲ ಸಿಗದ ಕಾರಣ ಶೇ. 100ರಷ್ಟು ಯಶಸ್ಸು ಸಿಗದಂತಾಗಿದೆ.
ಮೊದಲಿನ ದಿನಗಳಲ್ಲಿ ಬಡಾವಣೆಗಳ ರಸ್ತೆ ಪಕ್ಕದಲ್ಲೇ ಸಾರ್ವಜನಿಕರು ಕಸ ವಿಲೇವಾರಿ ಮಾಡುತ್ತಿದ್ದರು. ಇದರಿಂದ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತಿದ್ದವು. ಹೀಗಾಗಿ ಮನೆ ಮನೆಗೆ ತೆರಳಿ ಕಸ ಸಂಗ್ರಹ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದಾಗ್ಯೂ ಬಡಾವಣೆಯ ಖಾಲಿ ಜಾಗಗಳಲ್ಲಿ ಕಸ ಹಾಕುವ ಪ್ರಕ್ರಿಯೆ ಯಥೇಚ್ಛವಾಗಿ ನಡೆದಿದೆ. ಇದನ್ನು ತಡೆಯಲು ಸಹ ಪಾಲಿಕೆ ಅನೇಕ ವಿನೂತ ಕಾರ್ಯಕ್ರಮ ತಂದಿತ್ತು.
ಬಡಾವಣೆಗಳಲ್ಲಿ ಕಸ ಹಾಕುವ ಜಾಗವನ್ನು ಬ್ಲಾೃಕ್ ಸ್ಪಾಟ್ ಎಂದು ಗುರುತಿಸಿ ರಂಗೋಲಿ ಬಿಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಿತು. ಹೋಟೆಲ್, ಪಾನ್‌ಶಾಪ್ ಸೇರಿ ಇತರ ಅಂಗಡಿಕಾರರು, ಪಾದಚಾರಿಗಳು ನಗರದ ರಸ್ತೆಗಳಲ್ಲಿ ಕಸ ಹಾಕದಿರಲಿ ಎಂದು ಪ್ರಮುಖ ರಸ್ತೆಗಳ ಪುಟ್‌ಪಾತ್‌ನಲ್ಲಿ ಜೋಡಿ ಕಸದ ತೊಟ್ಟಿ ಅಳವಡಿಸಿದೆ. ಒಣ ಹಾಗೂ ಹಸಿ ತ್ಯಾಜ್ಯವನ್ನು ಪ್ರತ್ಯೇಕ ಸಂಗ್ರಹಿಸಲು 2 ತೊಟ್ಟಿಗಳನ್ನು ಸ್ಥಾಪಿಸಲಾಗಿದೆ. ಪಾಲಿಕೆ ಇಷ್ಟೆಲ್ಲ ಪ್ರಯತ್ನ ನಡೆಸಿದ್ದರೂ ಜನರ ನಿರಾಸಕ್ತಿ ಹಾಗೂ ಬೇಜವಾಬ್ದಾರಿಯಿಂದ ರಸ್ತೆ ಪಕ್ಕದಲ್ಲೇ ಕಸ ಬಿಸಾಡುವ ಕೆಲಸ ಮಾಡುತ್ತಿದ್ದಾರೆ.
ಅಂಗಡಿಕಾರರು ಸೇರಿ ಬಹುತೇಕರಿಗೆ ರಸ್ತೆ ಪಕ್ಕದ ಜಾಗವೇ ಕಸ ವಿಲೇವಾರಿ ಸ್ಥಳವಾಗಿದೆ. ರಸ್ತೆ ಪಕ್ಕದಲ್ಲೇ ಬಿಸಾಡುವ ಹೋಟೆಲ್‌ಗಳ ತ್ಯಾಜ್ಯವನ್ನು ತಿನ್ನಲು ಬರುವ ದನಗಳು, ನಾಯಿಗಳು ತ್ಯಾಜ್ಯವನ್ನು ರಸ್ತೆ ತುಂಬೆಲ್ಲ ಹರಡಿ ಗಬ್ಬೆದ್ದು ನಾರುವಂತೆ ಮಾಡುತ್ತಿವೆ. ಈ ಎಲ್ಲ ಅವ್ಯವಸ್ಥೆ ತಡೆಗೆ ಮಹಾನಗರ ಪಾಲಿಕೆ ದಂಡದ ಪ್ರಯೋಗ ಸಹ ನಡೆಸಿತ್ತು. ಈ ಸಮಯದಲ್ಲಿ ಕೆಲವರಿಗೆ ದಂಡ ವಿಧಿಸಲಾಗಿತ್ತು. ಈ ಸಮಯದಲ್ಲಿ ರಸ್ತೆ ಪಕ್ಕದ ಕಸ ಹಾಕುವವರ ಸಂಖ್ಯೆ ಸಾಕಷ್ಟು ಕ್ಷೀಣಿಸಿತ್ತು. ಆದರೆ ದಂಡ ಪ್ರಯೋಗ ಕಡಿಮೆ ಆಗುತ್ತಿದ್ದಂತೆ ಮತ್ತೆ ಕಸ ಹಾಕುವ ಕಾರ್ಯ ಶುರುವಾಗಿದೆ.
ಸಾರ್ವಜನಿಕರು ಆಡಳಿತವನ್ನು ದೂರಿದರೆ ಸಾಲದು. ಆಡಳಿತ ಯಂತ್ರ ಜಾರಿಗೆ ತರುವ ವ್ಯವಸ್ಥೆಗೆ ಸಾಥ್ ನೀಡಬೇಕು. ಇದರಿಂದ ನಗರದ ಸ್ವಚ್ಛವಾಗಿದ್ದು, ರೋಗಗಳಿಂದ ಮುಕ್ತವಾಗಿರಲು ಸಹಾಯವಾಗಲಿದೆ ಎಂಬುದು ಪಾಲಿಕೆ ಅಧಿಕಾರಿಗಳ ಅನಿಸಿಕೆ.
ಇನ್ನಾದರೂ ಜನರು ವ್ಯವಸ್ಥೆ ಅರಿತುಕೊಂಡು ಮಹಾನಗರ ಪಾಲಿಕೆ ಸಾಥ್ ನೀಡುವ ಮೂಲಕ ಮನೆಗೆ ಆಗಮಿಸುವ ವಾಹನಗಳಿಗೆ ಕಸ ನೀಡಿ ಸ್ವಚ್ಛ ನಗರಕ್ಕೆ ಕೈ ಜೋಡಿಸುವರೇ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net